ಉತ್ತರದಲ್ಲಿ ಹಿಮಾಲಯ ಶ್ರೇಣಿ, ದಕ್ಷಿಣದಲ್ಲಿ ಹಿಂದೂ ಮಹಾಸಾಗರ, ಪೂರ್ವದಲ್ಲಿ ಗಂಗಾ ಸಾಗರ, ಅರ್ಥಾತ್ ಬಂಗಾಳಕೊಲ್ಲಿ, ಪಶ್ಚಿಮದಲ್ಲಿ ಸಿಂಧು ಸಾಗರ ಅರ್ಥಾತ್ ಅರಬ್ಬಿ ಸಮುದ್ರ ಇವುಗಳ ನಡುವೆ ಇರುವ ಜಂಬೂದ್ವೀಪವೇ ನಮ್ಮ ಭಾರತ. ಇದಕ್ಕೆ ಭರತ ವರ್ಷ, ಭರತ ಭೂಮಿ, ಹಿಂದುಸ್ತಾನ ಹಾಗೂ ಆಧುನಿಕವಾಗಿ ಇಂಡಿಯ ಎಂದು ಕರೆಯಲ್ಪಡುತ್ತದೆ. ಹಿಂದಿನ ಕಾಲದಲ್ಲಿ ಇಡೀ ವಿಶ್ವಕ್ಕೆ ಆಚಾರದಿಂದಲೇ ಆದರ್ಶ ಭೋದಿಸುವ ವಿಶ್ವ ಗುರುವಾಗಿ, ಉಚ್ಚ ಸಂಸ್ಕøತಿ, ಕಲೆ, ಧರ್ಮದ ನಾಡಾಗಿತ್ತು. ಅಪಾರ ಕಲೆಯ ಬೀಡಾಗಿತ್ತು. ವಿದೇಶಿಯರ ದೌರ್ಜನ್ಯದ ನಡುವೆಯು ತನ್ನ ಅಸ್ತಿತ್ವವನ್ನು ಬಿಟ್ಟುಕೊಡಲಿಲ್ಲ. ಇನ್ನು ಸ್ವಾತಂತ್ರ್ಯ ನಂತರದ ಕಾಲದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಇದೀಗ 130 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಗೆ ಸೇರುತ್ತಿದೆ. ಶತ್ರು ರಾಷ್ಟ್ರಗಳ ಕಿರುಕುಳ, ಅನಕ್ಷರತೆ, ಬಡತನ, ಕೋಮುಗಲಭೆ ಇತ್ಯಾದಿ ಸಮಸ್ಯೆಗಳ ನಡುವೆಯು ಬುದ್ಧ, ಗಾಂಧಿ ಮುಂತಾದವರು ಹಾಕಿಕೊಟ್ಟ ಮಾರ್ಗದಲ್ಲಿ ಶಾಂತಿಯಿಂದ ಸಾಗುತ್ತ, ಇದೀಗ ನಮ್ಮ ರಾಷ್ಟ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರೆದು ಇಡೀ ವಿಶ್ವದಲ್ಲಿ 5ನೇ ಸ್ಥಾನವನ್ನು ಪಡೆದಿದೆ. ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ, ಕ್ರೀಡೆ, ಸಾರಿಗೆ ಸಂಪರ್ಕದಲ್ಲಿ ಹಲವು ವಿಕ್ರಮಗಳನ್ನು ಸಾಧಿಸಿ ಇಡೀ ವಿಶ್ವ ನಮ್ಮತ್ತ ನೋಡುವಂತೆ ಮಾಡಿದೆ.
ಎಲ್ಲಾ ಕ್ಷೇತ್ರಗಳನ್ನು ಒಂದೊಂದಾಗಿ ಮಾಡಿದರೆ ಎಲ್ಲಾ ವಿಭಾಗದಲ್ಲಿ ಆಯಾಯ ಪ್ರಮಾಣದಲ್ಲಿ ಪ್ರಗತಿಯನ್ನು ಕಂಡಿದೆ. ಶಿಕ್ಷಣ ಕ್ಷೇತ್ರದಲ್ಲಂತು ಹಿಂದೆಂದೂ ಕಾಣದ ಮಟ್ಟದಲ್ಲಿ ಪ್ರಗತಿಯನ್ನು ಸಾಧಿಸಿದೆ. ಕೇಂದ್ರ ಸರಕಾರದ ಸರ್ವ ಶಿಕ್ಷಣ ಅಭಿಯಾನ, ಅನೇಕ ರಾಜ್ಯ ಸರಕಾರಗಳ ಯೋಜನೆಯಾದ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಸಮವಸ್ತ್ರ, ಉಚಿತ ಪಠ್ಯ ಪುಸ್ತಕ ವಿತರಣೆ, ಆರ್.ಟಿ.ಇ. ಕಾಯಿದೆಯಡಿ ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಉಚಿತ ವಿದ್ಯಾಭ್ಯಾಸ ಹಾಗೂ ಇನ್ನೂ ಹತ್ತು ಹಲವು ಯೋಜನೆಗಳಿಂದ ದೇಶದ ಸಾಕ್ಷರತೆ ಅತ್ಯಧಿಕ ಪ್ರಮಾಣದಲ್ಲಿ ಹೆಚ್ಚಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದ ಸಾಕ್ಷರತೆ ಶೇ. 16.6. ಆದರೆ ಇತ್ತೀಚಿನ ವರದಿಯ ಪ್ರಕಾರ ನಮ್ಮ ದೇಶದ ಸಾಕ್ಷರತೆ ಶೇ. 74.04. 1947 ರಲ್ಲಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಶೇ. 46. ಆದರೆ ಇಂದು ನಮ್ಮ ದೇಶದ ಶಾಲೆಗಳಲ್ಲಿ ದಾಖಲಾತಿ ಶೇ. 96 ಆಗಿದೆ. ದೇಶದ ಹಳ್ಳಿ ಹಳ್ಳಿಗಳಲ್ಲಿಯೂ ಕಾಲೇಜುಗಳ ಸ್ಥಾಪನೆಗೆ ಸಿದ್ಧತೆಗಳು ನಡೆದಿದೆ. ಇನ್ನು ಮುಂದುವರೆದು ಇತ್ತೀಚೆಗೆ ಜಾರಿಗೊಂಡ ಹೊಸ ಶಿಕ್ಷಣ ನೀತಿ ಒಂದು ಉತ್ತಮ ಬೆಳವಣಿಗೆಯಾಗಿದೆ. ಇದು ನಮ್ಮ ದೇಶದಲ್ಲಿ ಕಳೆದ 34 ವರ್ಷಗಳಿಂದ ಇದ್ದ ಶಿಕ್ಷಣ ಪದ್ಧತಿಗೆ ಒಂದು ತಿರುವನ್ನು ಕೊಟ್ಟಿದೆ. ಈ ಹೊಸ ಶಿಕ್ಷಣ ನೀತಿಯಿಂದ ನಮ್ಮ ದೇಶ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈಯುವ ಮೈಲಿಗಲ್ಲನ್ನು ಹೊಂದಿದೆ.
ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ನಮ್ಮ ದೇಶ ಸ್ವಾತಂತ್ರ್ಯ ನಂತರ ಅತ್ಯದ್ಭುತ ಸಾಧನೆಯನ್ನು ಕಂಡಿದೆ. ಗ್ರಾಮ ಸಡಖ್ ಯೋಜನೆಯಂತಹ ಯೋಜನೆಯಿಂದ ಹಳ್ಳಿಹಳ್ಳಿಗಳಿಗೂ ರಸ್ತೆಗಳ ಸಂಪರ್ಕಗಳಾಗಿವೆ. ದೊಡ್ಡ ದೊಡ್ಡ ನಗರಗಳಲ್ಲಿ ಮೆಟ್ರೋ, ಡಿಜಿಟಲ್ ರೈಲ್ವೆ ಯೋಜನೆ ಮುಂತಾದವುಗಳು ಅನೇಕ ಪ್ರಯೋಜನಕಾರಿಯಾಗಿದೆ. ಈ ಎಲ್ಲಾ ಸೌಲಭ್ಯಗಳಿಂದ ಪ್ರತಿನಿತ್ಯ ಸಂಚರಿಸುವ ಉದ್ಯೋಗಿಗಳು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ. ಇದರಿಂದ ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. 1947 ರಲ್ಲಿ ದೇಶದಲ್ಲಿ ರಸ್ತೆಗಿಳಿದ ವಾಹನಗಳ ಸಂಖ್ಯೆ 3.03 ಲಕ್ಷವಾಗಿದ್ದರೆ, 2017 ರಲ್ಲಿ ದೇಶದಲ್ಲಿರುವ ವಾಹನಗಳ ಸಂಖ್ಯೆ 21 ಕೋಟಿಗೆ ಏರಿದೆ. ಇದರಿಂದ ದೇಶದ ವಹಿವಾಟು ದುಪ್ಪಟ್ಟಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿಯು ನಮ್ಮ ದೇಶ ಸ್ವಾತಂತ್ರ್ಯ ನಂತರ ಬಹಳ ಮುಂದುವರೆದಿದೆ. ಪ್ರತಿಯೊಬ್ಬರಲ್ಲಿಯೂ ಆರೋಗ್ಯದ ಮಹತ್ವದ ಬಗ್ಗೆ ಅರಿವಿಕೆ ಮೂಡಿಸಲಾಗುತ್ತಿದೆ. ಆರೋಗ್ಯ ಕವಚ, ಆಯುಷ್ಮಾನ್ ಮುಂತಾದ ಅನೇಕ ಯೋಜನೆಗಳು ಜನಸಾಮಾನ್ಯರ ಮಡಿಲನ್ನು ತಲುಪಿದೆ. ಜನೌಷಧ್‍ನಂತಹ ಯೋಜನೆಯಿಂದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಿಗಳು ದೊರೆಯುತ್ತಿದೆ. ಯುವಪೀಳಿಗೆಯು ವೈದ್ಯಕೀಯ ಕ್ಷೇತ್ರವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಇಂದು ನಮ್ಮ ದೇಶದಲ್ಲಿ 8.40 ಲಕ್ಷ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ಸಂಖ್ಯೆ 1947 ರಲ್ಲಿ ಕೇವಲ 59 ಸಾವಿರವಾಗಿತ್ತು. ಅತ್ಯಾಧುನಿಕ ಸಲಕರಣೆಗಳ ಲಭ್ಯತೆ ನಮ್ಮ ದೇಶದಲ್ಲೆ ಇರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೊರ ದೇಶಕ್ಕೆ ಹೋಗುವ ಅವಶ್ಯಕತೆಯಿಲ್ಲ. ಕಳೆದ ಕೆಲವು ತಿಂಗಳಿನಿಂದ ನಮ್ಮ ದೇಶವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ಸಾಂಕ್ರಾಮಿಕ ಕಾಯಿಲೆಯು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದೆ.
ನಮ್ಮ ದೇಶದ ಸೈನ್ಯ ಬಲವು ಸ್ವಾತಂತ್ರ್ಯ ನಂತರ ಹೆಚ್ಚಾಗಿದ್ದು, ನಮ್ಮ ರಕ್ಷಣಾ ಕ್ಷೇತ್ರವು ಅಭಿವೃದ್ಧಿಯ ಪಥದಲ್ಲಿದೆ. ಶತ್ರುಗಳನ್ನು ಬಗ್ಗುಬಡೆಯಲು ಬೇಕಾದ ಎಲ್ಲಾ ಶಸ್ತ್ರಾಸ್ತ್ರಗಳು ಈಗ ನಮ್ಮಲ್ಲಿವೆ. ಸುಮಾರು 150 ಕಿ.ಮೀ. ವ್ಯಾಪ್ತಿಯ ತನಕ ಟಾರ್ಗೆಟ್ ಇಡಬಹುದಾದ ವಾಯು ದಾಳಿ, ಆಕಾಶದಿಂದ ಭೂಮಿ ಮೇಲೆ ದಾಳಿ ಮತ್ತು ಅಣ್ವಸ್ತ್ರ ಹೊತ್ತೊಯ್ಯುವ ಸಾಮಥ್ರ್ಯ ಹೊಂದಿರುವ ಗಂಟೆಗೆ 2,450 ಕಿ.ಮೀ. ಕ್ರಮಿಸಬಲ್ಲ ಅತ್ಯಾಧುನಿಕ 5 ಯುದ್ಧ ವಿಮಾನಗಳು ಕಳೆದ ತಿಂಗಳಷ್ಟೇ ನಮ್ಮ ವಾಯು ಸೇನೆಗೆ ಸೇರ್ಪಡೆಗೊಂಡಿವೆ.
ಒಂದು ಕಾಲದಲ್ಲಿ ಗುಂಡು ಪಿನ್ನನ್ನು ಆಮದು ಮಾಡುತ್ತಿದ್ದ ನಮ್ಮ ದೇಶ ಈಗ ಉಕ್ಕು ಹಾಗೂ ಸಕ್ಕರೆ ತಯಾರಿಕೆ ವಲಯದಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಹೀಗೆ ಎಲ್ಲಾ ಕ್ಷೇತ್ರದಲ್ಲೂ ನಮ್ಮ ದೇಶ ಸ್ವಾತಂತ್ರ್ಯ ನಂತರ ಪ್ರಗತಿಯನ್ನು ಕಂಡಿದೆ. ಆದರೂ ನಾವು ಸಾಧಿಸಬೇಕಾದ ಪ್ರಮಾಣ ಸಾಗರದಷ್ಟಿವೆ. 2025ನೇ ಇಸವಿಗೆ ನಮ್ಮ ದೇಶ ವಿಶ್ವದಲ್ಲೇ ನಂಬರ್ 1 ಸ್ಥಾನ ಪಡೆಯಬೇಕೆಂಬ ಪಣತೊಟ್ಟಿರುವ ನಾವು, ಅದನ್ನು ಸಾಧಿಸಲು ಅಷ್ಟೇ ನಿಷ್ಠೆಯಿಂದ ಶ್ರಮವಹಿಸಿ ದುಡಿಯಬೇಕಿದೆ.
- ಕೋಡಿರ ದರ್ಶಿನಿ ತಮ್ಮಯ್ಯ, ಅರಪಟ್ಟು, ಕಡಂಗ.