‘ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು’ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಕವಿ ಗೋಪಾಲಕೃಷ್ಣ ಅಡಿಗರು ಸ್ವತಂತ್ರ ಭಾರತದ ಕನಸನ್ನು ತಮ್ಮ ಕವನದ ಮೂಲಕ ವ್ಯಕ್ತಪಡಿಸಿದ್ದು ಹೀಗೆ. ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹರಿದ ರಕ್ತವನ್ನು ಅಳೆದವರಿಲ್ಲ. ಗುಂಡಿಗೆ ಮೈಯೊಡ್ಡಿದ ದೇಶಭಕ್ತರ ಲೆಕ್ಕವಿಟ್ಟವರಿಲ್ಲ. ನಗುನಗುತ್ತಲೇ ನೇಣುಗಂಬವ ಏರಿದಸ್ವಾತಂತ್ರ್ಯ ವೀರರ ಬಲಿದಾನ ತಿಳಿಯದವರಿಲ್ಲ. ಹೀಗೆ ತಾಯಿ ಭಾರತಾಂಬೆಯ ವೀರೋಚಿತ ವೀರಾಗ್ರಣಿಗಳ ಹೋರಾಟ ಹಾಗೂ ತ್ಯಾಗದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರೆತದ್ದು ಈಗ ಇತಿಹಾಸ.ಆ ಬಳಿಕ ನವಭಾರತವನ್ನು ಕಟ್ಟುವ ಜವಾಬ್ದಾರಿ ನಮ್ಮದಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಘೋಷಣೆಗೂ ಮೊದಲೇ 1947 ಜೂನ್ 3ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್‍ಬ್ಯಾಟನ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದ್ದ. ಅಂದು ನಡೆದ ಅಖಂಡ ಭಾರತದ ವಿಭಜನೆ ಒಂದು ಐತಿಹಾಸಿಕ ದುರಂತ. ಆಗ ಘಟಿಸಿದ ಇಂತಹ ದುರಂತದಿಂದ ಉದ್ಭವವಾಗಿರುವ ಭಾರತ ಪಾಕಿಸ್ತಾನ ಎರಡೂ ದೇಶಗಳ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗದೆ ಉಭಯ ರಾಷ್ಟ್ರಗಳಲ್ಲು ಶಾಂತಿ ಸಾಮರಸ್ಯ ಮರೀಚಿಕೆಯಾಗಿ ಉಳಿದಿದೆ.
1947 ಆಗಸ್ಟ್ 15 ರಂದು ಭಾರತೀಯರಾದ ನಾವು ಬ್ರಿಟಿಷರ ಕಪಿಮುಷ್ಠಿಯ ಸಂಕೋಲೆಯಿಂದ ಮುಕ್ತಿ ಪಡೆದು ಸ್ವಾತಂತ್ರ್ಯರಾದೆವು. ಅಂದು ಭಾರತವನ್ನು ಸ್ವತಂತ್ರ ದೇಶವನ್ನಾಗಿ ಘೋಷಿಸಲಾಯಿತು. ಸ್ವಾತಂತ್ರ್ಯದ ಬೆಳಕು ಕಂಡು ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಆಗಸ್ಟ್ 15 ರಂದು ಮಧ್ಯರಾತ್ರಿ ಪ್ರಮಾಣ ವಚನ ಸ್ವೀಕರಿಸಿ ಇಡೀ ಭಾರತದ ರಾಜಕೀಯ ಅಧಿಕಾರ ಕೇಂದ್ರವಾದ ದೆಹಲಿಯ ಕೆಂಪುಕೋಟೆಯ ಮೇಲೆ ಮೊದಲ ರಾಷ್ಟ್ರಧ್ವಜಾರೋಹಣ ಮಾಡುತ್ತಾರೆ. ಸ್ವಾತಂತ್ರ್ಯಕ್ಕಾಗಿ ಬೆವರು ಸುರಿಸಿದ ಬಲಿದಾನಗೈದ ಸ್ವಾತಂತ್ರ್ಯ ಯೋಧರ ಕನಸುಗಳು ಎಷ್ಟರ ಮಟ್ಟಿಗೆ ಸಾಕಾರಗೊಂಡಿವೆ ತಿಳಿಯದು. ಆದರೆ ಇಂದು ಭಾರತವು ಆಧುನಿಕತೆಯ ಮುಂಚೂಣಿಯಲ್ಲಿದ್ದು ವಿಶ್ವದ ಪ್ರಭಾವಿ ರಾಷ್ಟ್ರಗಳ ಸಾಲಿನಲ್ಲಿ ತಲೆ ಎತ್ತಿ ನಿಲ್ಲುವಂತಾಗಿರುವುದು ಸತ್ಯ. ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾಗಿರುವ ನಮ್ಮ ಭಾರತವು ಪ್ರಪಂಚದಲ್ಲಿ ಎಲ್ಲಿಯೂ ಕಾಣಸಿಗದಂತಹ ಅಪಾರವಾದ ಅನನ್ಯವಾದ ಸಾಂಸ್ಕøತಿಕ ಚಾರಿತ್ರಿಕ ಮಹತ್ವವನ್ನು ಹೊಂದಿದ್ದು ಈ ದಿಶೆಯಲ್ಲಿ ಐಕ್ಯತೆಯನ್ನು ಸಾಧಿಸಿದೆ. ಭಾರತ ಸ್ವತಂತ್ರಗೊಂಡಾಗ ದೇಶದಲ್ಲಿ ಹಲವು ಸಮಸ್ಯೆಗಳಿದ್ದವು. ಹಲವು ರಾಜಮಹಾರಾಜರ, ಅನೇಕ ಪಾಳೆಯಗಾರರ ಸಂಸ್ಥಾನಗಳಿಂದ ಭಾರತವು ಕೂಡಿದ್ದರಿಂದ ಇದೊಂದು ದೇಶದ ದೊಡ್ಡ ಸಮಸ್ಯೆಯಾಗಿತ್ತು. ಆಗ ರಾಜಕೀಯ ಏಕೀಕರಣದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಎಲ್ಲಾ ರಾಜಸಂಸ್ಥಾನಗಳನ್ನು ಒಂದುಗೂಡಿಸುವ ಕಾರ್ಯ ಮಾಡಲಾಯಿತು. ದೇಶದ ಆಡಳಿತ ವ್ಯವಸ್ಥೆಯ ಹಾಗೂ ಜನತೆಯ ಹಿತದೃಷ್ಟಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಇದೆಲ್ಲದರ ಫಲವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಾಂಸ್ಕøತಿಕವಾಗಿ ಒಟ್ಟಾರೆ ಅಭಿವೃದ್ದಿಯ ಹಾದಿಯಲ್ಲಿ ತಾನು ಯಾರಿಗೂ ಕಡಿಮೆ ಇಲ್ಲವೆಂಬಂತೆ ದಾಸ್ಯದ ಪಂಜರದಿಂದ ಹೊರಬಂದು ಭಾರತ ಮುನ್ನಡೆಯುತ್ತಿದೆ.
ಭಾರತದ ಸ್ವಾತಂತ್ರ್ಯ ಎಂದಾಗ ತಟ್ಟನೆ ನೆನಪಾಗುವುದು ರಾಷ್ಟ್ರಪಿತ ಮಹಾತ್ಮಾಗಾಂಧೀಜಿ. ಆಧುನಿಕ ಭಾರತದ ಸಂದರ್ಭದಲ್ಲಿ ಜನಮಾನಸವನ್ನು ಗಾಢವಾಗಿ ಪ್ರಭಾವಿಸಿದ ವ್ಯಕ್ತಿಗಳಲ್ಲಿ ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಕೇವಲ ಸ್ವಾತಂತ್ರ್ಯ ಹೋರಾಟದ ನಾಯಕತ್ವಕ್ಕೆ ಅವರು ಸೀಮಿತಗೊಳ್ಳಲಿಲ್ಲ. ಸಮಾಜದ ಅಸಮಾನತೆ, ಅನ್ಯಾಯಗಳ ವಿರುದ್ಧ ಜನಜಾಗೃತಿ ಮೂಡಿಸಿದವರು. ಸ್ವಾವಲಂಬನೆಯ ಪಾಠ ಹೇಳಿಕೊಟ್ಟವರು. ಸರ್ವೋದಯ ಮಂತ್ರ ಜಪಿಸಿದವರು. ಮಾತು ಮತ್ತು ಆಚರಣೆಯಲ್ಲಿ ಎಚ್ಚರ ತಪ್ಪದೇ ಬದುಕಿದವರು. ಇಂತಹ ಮಹಾತ್ಮರ 150ನೇ ಜನ್ಮದಿನಾಚರಣೆ ನಡೆದಿದೆ. ಅಸಹಿಷ್ಣುತೆ, ಧರ್ಮಾಂಧತೆ ಮತ್ತು ಹಿಂಸೆ ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆ ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ಗಾಂಧೀಜಿಯವರ ಮೌಲ್ಯಗಳು ಸವಕಲಾದಂತೆ ಅನಿಸುತ್ತದೆ. ಗಾಂಧೀಜಿಯವರ ಕನಸಿನ ಹಳ್ಳಿಗಳ ಸ್ವರೂಪ ಬದಲಾಗಿದೆ. ಸರಳ ಜೀವನ ಶೈಲಿಗೆ ಬದಲಾಗಿ ಉಪಭೋಗ ಸಂಸ್ಕøತಿಯು ಸಮಾಜದ ಎಲ್ಲಾ ಸ್ತರಗಳಿಗೂ ವ್ಯಾಪಿಸಿದೆ. ಇಂತಹ ಕಾಲಘಟ್ಟದಲ್ಲಿ ಗಾಂಧೀಜಿಯವರು ಪ್ರತಿಪಾದಿಸಿದ ಮೌಲ್ಯಗಳನ್ನು ಈಗಿನ ಕಾಲಕ್ಕೆ ಸರಿದೂಗಿಸಿ ಬದುಕು ಸಾಗಿಸಬೇಕಾದುದು ಅವಶ್ಯಕವಾಗಿದೆ.
ಮಹಾತ್ಮ್ಮಾ ಗಾಂಧೀಜಿಯವರ ಸಾರಥ್ಯದಲ್ಲಿ ಅಹಿಂಸಾ ಮಾರ್ಗದಲ್ಲಿ ಚಳುವಳಿ ನಡೆಸಿ ಸ್ವಾತಂತ್ರ್ಯಗಳಿಸಿದ್ದು ಈ ಸ್ವಾತಂತ್ರ್ಯದ ಮಹಾಕಾವ್ಯದ ಮಹತ್ತರ ಅಧ್ಯಾಯ. ಇಂದು ಇಡಿಯ ವಿಶ್ವವೇ ಹಿಂಸೆಯಿಂದ ತತ್ತರಿಸಿದೆ. ಹಿಂಸೆಯೇ ಎಲ್ಲಾ ಕ್ರಿಯೆ ಪ್ರತಿಕ್ರಿಯೆಗಳನ್ನು ನಿಯಂತ್ರಿಸುತ್ತಿದೆ. ಈ ಕಾರಣದಿಂದಾಗಿಯೇ ಜಗತ್ತು ಹೆಚ್ಚು ಅಶಾಂತವಾಗಿದೆ. ಇಂತಹ ಅಶಾಂತ ಜಗತ್ತಿಗೆ ಗಾಂಧಿ ಶಾಂತಿಯ ರೂಪವಾಗಿ ಉತ್ತರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹ ಸ್ವಾತಂತ್ರ್ಯ ಇಂದು ದೇಶದಲ್ಲಿ ಯಾವ ಸ್ಥಿತಿಯನ್ನು ತಲುಪಿದೆ ಎನ್ನುವುದರತ್ತ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಕ್ರಾಂತಿವೀರರ ಶಾಂತಿದೂತರ ಕನಸು ಏನಾಗಿತ್ತು ಎಂಬುದನ್ನು ಅರಿತು ಅದನ್ನೆಲ್ಲವನ್ನೂ ಸಾಕಾರಗೊಳಿಸುವತ್ತ ನಾವು ಸಾಗಬೇಕಾಗಿದೆ.
- ಸಿ.ಎಸ್.