ಮಡಿಕೇರಿ, ಆ. 14: ರಾಜ್ಯದ ಕೊರೊನಾ ಸಾಂಕ್ರಾಮಿಕ ರೋಗ ಹರಡಿರುವ ಹಿನ್ನೆಲೆಯಲ್ಲಿ ಗೌರಿ-ಗಣೇಶೋತ್ಸವ ಆಚರಣೆ ಸಂಬಂಧ ಹಲವು ಮಾರ್ಗಸೂಚಿಗಳನ್ನು ವಿಧಿಸಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಟಿ.ಎಂ. ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಮಾರ್ಗ ಸೂಚಿಗಳು
* ಶ್ರೀ ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ ಅಥವಾ ತಮ್ಮ ಮನೆಗಳಲ್ಲಿಯೇ ಆಚರಿಸಬೇಕು.
* ಶ್ರೀ ಗಣೇಶೋತ್ಸವ ಹಬ್ಬ ಪ್ರಯುಕ್ತ ಸಾರ್ವಜನಿಕ ಸ್ಥಳ (ಉದಾ: ರಸ್ತೆ, ಗಲ್ಲಿ, ಓಣಿ, ಮೈದಾನ ಇತ್ಯಾದಿ)ಗಳಲ್ಲಿ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು.
* ಯಾವುದೇ ಕಾರಣಕ್ಕೂ ಸಾರ್ವಜನಿಕ ನದಿ, ಕೆರೆ, ಕೊಳ, ಬಾವಿ ಮತ್ತು ಕಲ್ಯಾಣಿಗಳಲ್ಲಿ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಬಾರದು.
* ಶ್ರೀ ಗಣೇಶೋತ್ಸವದಲ್ಲಿ ಶ್ರೀ ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಲಿ ಅಥವಾ ಯಾವುದೇ ಸಂದರ್ಭಗಳಲ್ಲಿ ಯಾವುದೇ ರೀತಿಯ ಮೆರವಣಿಗೆಯನ್ನು ನಡೆಸುವಂತಿಲ್ಲ.
* ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಅವರ ಮನೆ ಆವರಣದಲ್ಲಿಯೇ ವಿಸರ್ಜನೆ ಮಾಡುವುದು.
* ಗಣೇಶ ಹಬ್ಬ ಆಚರಿಸುವ ದೇವಸ್ಥಾನಗಳಲ್ಲಿ ದಿನಿತ್ಯ ಸ್ಯಾನಿಟೈಸರ್ ಮಾಡುವುದು ಹಾಗೂ ದರ್ಶನಕ್ಕಾಗಿ ಆಗಮಿಸುವ ಭಕ್ತಾದಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ದರ್ಶನಕ್ಕಾಗಿ ಬರುವ ಭಕ್ತರಿಗೆ ಕನಿಷ್ಟ 6 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಧರಿಸಿರಬೇಕು.
* ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರ ಇಲಾಖೆಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ ಪಾಲಿಸಬೇಕು.
* ಹಬ್ಬಹರಿದಿನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಉಂಟಾಗಲು ಪೂರಕ ವಾಗಿರುವುದರಿಂದ ಶ್ರೀ ಗಣೇಶೋತ್ಸವ ಹಬ್ಬವನ್ನು ಅದೇ ರೀತಿಯಿಂದಲೇ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ನೋಡಿಕೊಳ್ಳಬೇಕು.
* ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರಕಾರದ ಆದೇಶ, ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತಿನ, ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಆದೇಶದಲ್ಲಿ ತಿಳಿಸಲಾಗಿದೆ.