ನಾಪೆÇೀಕ್ಲು, ಆ. 14: ಕಾಡಾನೆಗಳು ನಾಲ್ಕುನಾಡಿನ ಚೇಲಾವರ, ಮರಂದೋಡ, ಯವಕಪಾಡಿ, ನಾಲಡಿ, ಪೇರೂರು, ನೆಲಜಿ ಗ್ರಾಮಗಳನ್ನು ತಮ್ಮ ತವರೂರನ್ನಾಗಿಸಿಕೊಂಡಿವೆ. ಇಲ್ಲಿಯೇ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು ಈ ಪ್ರದೇಶದಲ್ಲಿಯೇ ಕೃಷಿಕರು ಬೆಳೆದ ಎಲ್ಲಾ ಬೆಳೆಗಳನ್ನು ನಾಶ ಮಾಡುವದರೊಂದಿಗೆ ಮರಿಗಳಿಗೂ ಇಲ್ಲಿಯೇ ಜನ್ಮನೀಡುತ್ತಿವೆ.
ಈ ಹಿಂದೆ ಈ ವ್ಯಾಪ್ತಿಯ ಬೆಟ್ಟ ಪ್ರದೇಶದಲ್ಲಿ ಮಾತ್ರ ಕಾಡಾನೆಗಳು ಕಂಡು ಬರುತ್ತಿದ್ದವು. ಆದರೆ, ಈಗ ನಾಡಿಗಿಳಿದ ಕಾಡಾನೆಗಳು ಬೆಳೆಗಾರರಿಗೆ ದೊಡ್ಡ ಸಮಸ್ಯೆಯನ್ನೇ ಉಂಟು ಮಾಡಿವೆ. ನಾಲಡಿ ಗ್ರಾಮದಲ್ಲಿ ಮರಿಯಾನೆ ಗಳೊಂದಿಗೆ ಏಳು ಮತ್ತು ನಾಲ್ಕು ಕಾಡಾನೆಗಳ ಎರಡು ಹಿಂಡು ಬೀಡು ಬಿಟ್ಟಿದ್ದು, ಆ ಪ್ರದೇಶದ ಪರದಂಡ, ಕೋಡಿಮಣಿಯಂಡ ಕುಟುಂಬಸ್ಥರ ಕಾಫಿ ತೋಟ, ಬಾಳೆ ತೋಟ, ಅಡಿಕೆ, ತೆಂಗು ಸೇರಿದಂತೆ ಎಲ್ಲವನ್ನು ನಾಶಗೊಳಿಸಿರುವದಾಗಿ ಪರದಂಡ ವಿಠಲ ‘ಶಕ್ತಿ’ಗೆ ತಿಳಿಸಿದ್ದಾರೆ.
ಹಾಗೆಯೇ ಶುಕ್ರವಾರ ಬೆಳಿಗ್ಗೆ ಮೇಕೆಕೊಪ್ಪಲು ಪೈಸಾರಿ ಬಳಿ ರಸ್ತೆಯಲ್ಲಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಪೈಸಾರಿ ನಿವಾಸಿಗಳನ್ನು ಆತಂಕ್ಕೀಡು ಮಾಡಿದೆ. ಅರಣ್ಯ ಇಲಾಖೆ ಕಾಡಾನೆ ಗಳನ್ನು ಕಾಡಿಗಟ್ಟುವದರಿಂದ ಯಾವದೇ ಫಲವಿಲ್ಲ. ಆದ್ದರಿಂದ ಅರಣ್ಯ ಇಲಾಖೆ, ಸರಕಾರ ಕಾಡಾನೆಗಳನ್ನು ಶಾಶ್ವತವಾಗಿ ಇಲ್ಲಿಂದ ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಬೇಕೆಂದು ಈ ವ್ಯಾಪ್ತಿಯ ಎಲ್ಲಾ ರೈತರು, ಬೆಳೆಗಾರರು ಆಗ್ರಹಿಸಿದ್ದಾರೆ.
-ಪಿ.ವಿ.ಪ್ರಭಾಕರ್