ಮಡಿಕೇರಿ, ಆ. 14: ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿಯ ಗಜರಾಜಗಿರಿ ಬೆಟ್ಟ ಕುಸಿತದಿಂದ ತಾ. 6 ರಂದು ಸಂಭವಿಸಿದ್ದ ದುರಂತದ ಪರಿಣಾಮ ಎಂಟು ದಿನಗಳಿಂದ ಕ್ಷೇತ್ರದಲ್ಲಿ ನಿಂತು ಹೋಗಿದ್ದ ನಿತ್ಯಪೂಜೆ ಇಂದಿನಿಂದ ಆರಂಭಗೊಂಡಿತು.ಕೊಡಗು ಸೀಮೆಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪ್ರಾಯಶ್ಚಿತ್ತÀದೊಂದಿಗೆ; ಕ್ಷೇತ್ರಶುದ್ಧಿಗೆ ಮುನ್ನ ನಡೆ ತೆರೆಯುವುದರೊಂದಿಗೆ ದೇವ ಸನ್ನಿಧಿಯ ಎಲ್ಲ ನೆಲೆಗಳಿಗೆ ತುಷ್ಟೀಯವಾಗಿ ತೀರ್ಥ ಪ್ರೋಕ್ಷಣೆ ನೆರವೇರಿಸಲಾಯಿತು.ಆ ಮುನ್ನ ಸ್ವತಃ ತಂತ್ರಿಗಳು ಕಾವೇರಿ ಸ್ನಾನದೊಂದಿಗೆ ಬ್ರಹ್ಮಕುಂಡಿಕೆಯಿಂದ ಬೆಳ್ಳಿ ಕೊಡದಲ್ಲಿ ತೀರ್ಥ ಕೊಂಡೊಯ್ದು ಶ್ರೀ ಅಗಸ್ತ್ಯೇಶ್ವರ, ಮಹಾಗಣಪತಿ, ಚಾಮುಂಡಿ, ಶಾಸ್ತಾವು ಸನ್ನಿಧಿಗಳ ಬಿಂಭಶುದ್ಧಿಗೊಳಿಸಿ ಜ್ಯೋತಿ ಬೆಳ ಗಿಸಿದರು. ಆ ಮೂಲಕ ಮುಷ್ಟಿಯಾದಿ ದೇವನೆಲೆಗಳನ್ನು ಶುದ್ಧಿಗೊಳಿಸಿ ಈ ದಿನದ ಉಷಾ ಕಾಲದ ಪೂಜೆಗೆ ಅಣಿಗೊಳಿಸಿದರು. ಆ ಬೆನ್ನಲ್ಲೇ ಮಹಾಗಣಪತಿ ಹೋಮ, ಪ್ರಾಯಶ್ಚಿತ್ತ ಪ್ರಾರ್ಥನೆಯೊಂದಿಗೆ ಶ್ರೀ ಅಗಸ್ತ್ಯೇಶ್ವರ ನಿಗೆ ಏಕಾದಶ ರುದ್ರಾಭಿಷೇಕ, ಸಾನ್ನಿಧ್ಯ ಕಲಶ ಪೂಜೆ, ನೈವೇದ್ಯ ಸಮರ್ಪಣೆ ಬಳಿಕ ಮಹಾಪೂಜೆ ನೆರವೇರಿಸಿದರು. ಶ್ರೀ ಕಾವೇರಿ ಮಾತೆಗೂ ವಿಶೇಷ ಸಂಕಲ್ಪ ಪೂಜೆ ಕೈಗೊಂಡರು.

ಸರ್ವರ ಒಳಿತಿಗೆ ಪ್ರಾರ್ಥನೆ

ಮಹಾಪೂಜೆ ನೆರವೇರಿಸಿ ಸರ್ವರ ಒಳಿತಿಗೆ ದೈವ ಪ್ರಾರ್ಥನೆ ಮಾಡಿದ ಪದ್ಮನಾಭ ತಂತ್ರಿಗಳು, ತಲಕಾವೇರಿ ಕ್ಷೇತ್ರದ ಗಜರಾಜಗಿರಿ ಬೆಟ್ಟ ಶ್ರೇಣಿ ಕುಸಿತವೂ ಸೇರಿದಂತೆ ದೇಶದ ವಿವಿಧೆಡೆ ಸಂಭವಿಸಿರುವ ಪ್ರಾಕೃತಿಕ ವಿಕೋಪ, ಜಾಗತಿಕ ಕೊರೊನಾ ಸೋಂಕು ಇತ್ಯಾದಿ ಉಂಟಾಗಿದ್ದು, ಈ ಎಲ್ಲ ದುರಂತಗಳನ್ನು

(ಮೊದಲ ಪುಟದಿಂದ) ಮತ್ತು ಜನಕೋಟಿಯ ಕಷ್ಟವನ್ನು ದೇವರು ದೂರಗೊಳಿಸಿ, ಭವಿಷ್ಯದಲ್ಲಿ ಇಂತಹ ಸಂಕಷ್ಟಗಳು ಬಾರದಂತೆ ಅನುಗ್ರಹಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ನಿತ್ಯ ಪೂಜೆ: ಅಲ್ಲದೆ ಇಂದಿನಿಂದ ಚಾಲನೆ ಲಭಿಸಿರುವ ಕ್ಷೇತ್ರ ಪೂಜೆಯೊಂದಿಗೆ, ನಿತ್ಯಪೂಜೆಯನ್ನು ಅನುಕೂಲಕ್ಕೆ ಪೂರಕವಾಗಿ ವಿಘ್ನ ಬಾರದಂತೆ ಅರ್ಚಕರು ಮುಂದುವರಿಸಿಕೊಂಡು ಹೋಗಬೇಕೆಂದು ನಿರ್ದೇಶಿಸಿದರು.

ಅಷ್ಟಮಂಗಲದಂತೆ ವ್ಯವಸ್ಥೆ

ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಈ ಹಿಂದಿನ ಅಷ್ಟಮಂಗಲ ನಿರ್ಣಯ ದಂತೆ ಎಲ್ಲ ಕೈಂಕರ್ಯಗಳನ್ನು ಸುಸೂತ್ರವಾಗಿ ನಿರ್ವಹಿಸಲು ಸರಕಾರದ ಪ್ರತಿನಿಧಿಯಾಗಿ ಶಾಸಕ ಕೆ.ಜಿ. ಬೋಪಯ್ಯ ಅವರು ವ್ಯವಸ್ಥಾಪನಾ ಸಮಿತಿಗೆ ಎಲ್ಲ ಸಹಕಾರ ನೀಡುವಂತೆಯೂ ನೀಲೇಶ್ವರ ತಂತ್ರಿಗಳು ಕೋರಿದರು.

ಕೆ.ಜಿ.ಬಿ. ಆಶಯ: ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಶಾಸಕ ಕೆ.ಜಿ. ಬೋಪಯ್ಯ ಅವರು, ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ಟಿ.ಎಸ್. ನಾರಾಯಣಾಚಾರ್ ಅವರು ಸೇರಿದಂತೆ ಕುಟುಂಬಸ್ಥರು ಕಣ್ಮರೆಯಾದ ದಿವಸದಿಂದ ರಸ್ತೆ ಸಂಪರ್ಕ ಇತ್ಯಾದಿ ತೊಡಕುಗಳ ನಿವಾರಣೆಯೊಂದಿಗೆ ಇಂದಿನಿಂದ ನಿತ್ಯಪೂಜೆ ಆರಂಭಿಸಿರುವುದು ಒಂದಿಷ್ಟು ನೆಮ್ಮದಿಯಾಗಿದೆ ಎಂದರು. ಅಲ್ಲದೆ ತಂತ್ರಿಗಳ ಮಾರ್ಗದರ್ಶನ ದಂತೆ ಪರಂಪರಾಗತ ಸೇವೆಯನ್ನು ಎಂದಿ ನಂತೆ ಉತ್ತರೋತ್ತರ ಮುಂದುವರೆಸಲು ದೇವರು ಮತ್ತು ಕಾವೇರಿ ಮಾತೆಯ ಅನುಗ್ರಹ ಈ ಮೂಲಕ ಲಭಿಸಿದೆ ಎಂದು ಆಶಯ ನುಡಿ ಯಾಡಿದರು. ಜಾಗತಿಕ ಕೊರೊನಾ ಸೇರಿದಂತೆ ಭವಿಷ್ಯದಲ್ಲಿ ಎಲ್ಲ ಕಷ್ಟಗಳನ್ನು ಕಾವೇರಿ ತಾಯಿ ನಿವಾರಿಸಲೆಂದು ಪ್ರಾರ್ಥಿಸಿದರು.

ವೀಣಾ ಅಚ್ಚಯ್ಯ ಪ್ರಾರ್ಥನೆ

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕೂಡ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು, ತಲಕಾವೇರಿಯ ದುರಂತ ಮತ್ತೆ ಮರುಕಳಿಸದಂತೆ ಕಾವೇರಿ ಮಾತೆ ಹಾಗೂ ಪರಿವಾರ ದೇವತೆಗಳು ಜನತೆಗೆ ಆಶೀರ್ವದಿಸಲೆಂದು ಪ್ರಾರ್ಥಿಸುವುದಾಗಿ ನುಡಿದರು.

ಎಂದಿನಂತೆ ಪೂಜೆ: ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಪ್ರತಿಕ್ರಿಯಿಸಿ, ತಲಕಾವೇರಿ ದುರಂತ ಆಗಬಾರದಿತ್ತು. ಇಂತಹ ಪರಿಸ್ಥಿತಿಯಲ್ಲಿ ಎಂಟು ದಿನ ನಿಂತು ಹೋಗಿದ್ದ ಪೂಜೆಗೆ ಕ್ಷೇತ್ರ ತಂತ್ರಿಗಳು ಮರು ಚಾಲನೆ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾಗಮಂಡಲ ಅರ್ಚಕರಿಂದ ನಿತ್ಯ ಪೂಜೆ ನೆರವೇರಲಿದ್ದು, ಸೂತಕ ಕಳೆದ ಬಳಿಕ ತಲಕಾವೇರಿ ಅರ್ಚಕ ಕುಟುಂಬಸ್ಥರು ಸರದಿಯಲ್ಲಿ ನಿತ್ಯ ಪೂಜೆ ಎಂದಿನಂತೆ ಕೈಗೊಳ್ಳಲಿದ್ದಾರೆ ಎಂದರು.

ಎಂಟು ದಿನ ದ್ವಿಬಾರಿ ಸೇವೆ

ಕ್ಷೇತ್ರದಲ್ಲಿ ಎಂಟು ದಿನಗಳ ಸೇವೆಯ ತೊಡಕು ನಿವಾರಿಸಲು ತಂತ್ರಿಗಳ ಸೂಚನೆಯಂತೆ ಮುಂದಿನ ಎಂಟು ದಿನಗಳ ತ್ರಿಕಾಲ ಪೂಜೆಯಲ್ಲಿ ದ್ವಿಬಾರಿಯಂತೆ ಸೇವೆ ನೈವೇದ್ಯ ಸಮರ್ಪಣೆ ಅಧಿಕವಾಗಿ ಕೈಗೊಳ್ಳಲಾಗುವುದು ಎಂದು ಅವರು ನೆನಪಿಸಿದರು.

ಶಾಸಕರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ತಹಶೀಲ್ದಾರ್ ಪಿ.ಎಸ್. ಮಹೇಶ್, ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ತಕ್ಕರಾದ ಕೋಡಿ ಮೋಟಯ್ಯ, ಪಾರುಪತ್ತೆಗಾರರಾದ ಪೊನ್ನಣ್ಣ ಹಾಗೂ ಮಹೇಶ್ ಸೇರಿದಂತೆ ಸದಸ್ಯರುಗಳಾದ ಡಾ. ಕಾವೇರಪ್ಪ, ಮೀನಾಕ್ಷಿ, ಸುಭಾಷ್, ಜಿ.ಪಂ. ಮಾಜಿ ಅಧ್ಯಕ್ಷರಾದ ರವಿಕುಶಾಲಪ್ಪ, ಶರಿನ್ ಸುಬ್ಬಯ್ಯ, ಏಕೀಕರಣ ರಂಗದ ತಮ್ಮು ಪೂವಯ್ಯ, ಪ್ರಮೋದ್ ಸೋಮಯ್ಯ, ಪಾಡಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲವಚಿಣ್ಣಪ್ಪ ಹಾಗೂ ಬಿಜೆಪಿ ಮತ್ತು ವಿವಿಧ ರಾಜಕೀಯ ಪ್ರಮುಖರು, ಸದ್ಭಕ್ತರು, ಅರ್ಚಕ ಕುಟುಂಬದವರು ಪಾಲ್ಗೊಂಡಿದ್ದರು. ನೆಲಜಿಯ ಅಪ್ಪುಮಣಿಯಂಡ ಸನ್ನಿ ಸೋಮಯ್ಯ ಹಾಗೂ ಡೈಸಿ ದಂಪತಿ ಇಂದಿನ ಅನ್ನದಾನ ಕೈಗೊಂಡಿದ್ದರು.