ಮಡಿಕೇರಿ, ಆ. 14: ತಲಕಾವೇರಿಯ ಗಜರಾಜಗಿರಿ ಬೆಟ್ಟ ಕುಸಿತದಿಂದ ಕಣ್ಮರೆಯಾಗಿರುವ ಅರ್ಚಕ ಕುಟುಂಬದ ಮೂವರ ಯಾವುದೇ ಸುಳಿವು ಸತತ ಎಂಟನೆಯ ದಿನದ ಕಾರ್ಯಾಚರಣೆಯಿಂದ ಗೋಚರಿಸಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ಇಂದು ಐದು ತಂಡಗಳಲ್ಲಿ ಶೋಧ ಕಾರ್ಯ ನಡೆಸಿದರೂ ಯಾವುದೇ ಕುರುಹು ಕಾಣೆಯಾದವರ ಬಗ್ಗೆ ಲಭಿಸಿಲ್ಲವೆಂದು ನುಡಿದರು.(ಮೊದಲ ಪುಟದಿಂದ) ಅಲ್ಲದೆ ತಾ. 15 ರಂದು (ಇಂದು) ಜಿಲ್ಲೆಗೆ ಭೇಟಿ ನೀಡಲಿರುವ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸಿ, ಮುಂದಿನ ಕಾರ್ಯಾಚರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ವಿವರಿಸಿದರು. ವ್ಯಾಪಕ ಶೋಧ: ಇಂದು ಬೆಳಿಗ್ಗೆಯಿಂದ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸೇರಿದಂತೆ ಶೋಧ ಕಾರ್ಯ ತಂಡದ ಸದಸ್ಯರು, ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿಸಿದರು. ಭಾಗಮಂಡಲ ಕಾವೇರಿ ವಿದ್ಯಾ ಸಂಸ್ಥೆ ಬಳಿಯಿಂದ ಕೋರಂಗಾಲದ ನಾಗತೀರ್ಥ ತನಕ ನದಿ ಪಾತ್ರದ ಇಕ್ಕೆಡೆಗಳಲ್ಲಿ ಹುಡುಕಾಟ ಫಲಿಸಲಿಲ್ಲ.

ಅಲ್ಲದೆ ಮೂರು ಹಿಟಾಚಿ ಯಂತ್ರಗಳಲ್ಲಿ ನಾರಾಯಣಾಚಾರ್ ಮನೆಯಿಂದ ಕೆಳಹಂತದ ಪ್ರಪಾತದ ಮಣ್ಣು ರಾಶಿಯನ್ನು ಬೇರ್ಪಡಿಸಿ ಹುಡುಕಿದ್ದೂ ಪ್ರಯೋಜನವಾಗಲಿಲ್ಲ. ಆಗಿಂದಾಗೆ ಮಳೆ ಹಾಗೂ ದಟ್ಟ ಮೋಡ ಶೋಧ ಕಾರ್ಯಕ್ಕೆ ತೊಡಕಾದರೂ ಕಾರ್ಯಪಡೆ ಕಾಲ್ನಡಿಗೆಯಲ್ಲಿ ನಾಲ್ಕಾರು ಕಿ.ಮೀ. ಹುಡುಕಾಡಿ ಮರಳಿತು.

ಹೊಸ ಅನುಭವ: ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಗುತ್ತಿಗೆದಾರರಾದ ಯತೀಶ್ ಮತ್ತು ಕೊಟ್ಟೆರ ಕವನ್ ಹಿಟಾಚಿ ಕಾರ್ಯಾಚರಣೆ ಬಗ್ಗೆ ಸಾಧ್ಯವಿರುವ ಮಾರ್ಗೋಪಾಯ ಕುರಿತು ಚರ್ಚಿಸಿ ದರು. ಈ ವೇಳೆ ಎನ್‍ಡಿಆರ್‍ಎಫ್ ಮುಖ್ಯಸ್ಥ ಆರಾಧ್ಯ ಅವರು ಪ್ರತಿಕ್ರಿಯಿಸಿ, ತಲಕಾವೇರಿಯಲ್ಲಿ ಕಣ್ಮರೆಯಾದವರಿಗೆ ಹುಟುಕಾಟ ತಮ್ಮ ತಂಡಕ್ಕೆ ಹೊಸ ಅನುಭವದೊಂದಿಗೆ ತೀವ್ರ ಸವಾಲಾಗಿದೆ ಎಂದರು. ಅಲ್ಲದೆ ಸೂಕ್ತ ವ್ಯವಸ್ಥೆ ಕೊರತೆ ಮತ್ತು ಹವಮಾನ ವೈಪರೀತ್ಯದಿಂದ ಕಾರ್ಯಾಚರಣೆ ಫಲಿಸದಾಗಿದೆ ಎಂದು ಬೇಸರಪಟ್ಟರು.

ತಂತ್ರಿಗಳು ದಿಗ್ಭ್ರಮೆ: ಕ್ಷೇತ್ರದಲ್ಲಿ ಇಂದು ಪೂಜೆಗೆ ಆಗಮಿಸಿದ್ದ ನೀಲೇಶ್ವರ ಪದ್ಮನಾಭ ತಂತ್ರಿಗಳ ಸಹಿತ ವಿವಿಧೆಡೆಯ ಭಕ್ತರು ದುರಂತ ಸ್ಥಳ ಕಂಡು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದ ಚಿತ್ರಣ ಎದುರಾಯಿತು. ತಂತ್ರಿಗಳು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿ ಕಳೆದ ಮೂರು ದಶಕಗಳ ಒಡನಾಟದಲ್ಲಿ ಪ್ರತಿಬಾರಿ ಕ್ಷೇತ್ರಕ್ಕೆ ಬಂದಾಗ ಟಿ.ಎಸ್. ನಾರಾಯಣಾಚಾರ್ ಮನೆಯಲ್ಲಿ ಆತಿಥ್ಯ ಸ್ವೀಕರಿಸುತ್ತಿದ್ದು, ಪ್ರಸ್ತುತ ದೃಶ್ಯ ಆಘಾತಕಾರಿಯೆಂದು ವಿಷಾದಿಸಿದರು.