ಗೋಣಿಕೊಪ್ಪ ವರದಿ, ಆ. 13: ಹೈಸೊಡ್ಲೂರು ಗ್ರಾಮದ ಸರ್ಕಾರಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ನೆಲೆಸಿರುವ 78 ಕುಟುಂಬಗಳಿಗೆ ಹಕ್ಕುಪತ್ರ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ತಾ. 15 ರಂದು ಹುದಿಕೇರಿ ನಾಡಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ಆರಂಭಿಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಹೆಚ್.ಎಸ್. ಕೃಷ್ಣಪ್ಪ ತಿಳಿಸಿದ್ದಾರೆ.

2 ವರ್ಷದಿಂದ ಅಲ್ಲಿ ನೆಸೆಲಿರುವ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ನೀಡಿಲ್ಲ. ಮತದಾರರ ಪಟ್ಟಿಗೆ ಸೇರಿಸಲು ಹಿಂದೇಟು ಹಾಕಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಅಂದು ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವವರೆಗೂ ಪ್ರತಿಭಟನೆ ಮುಂದುವರಿಸಲಾಗವುದು ಎಂದರು. ವಿವಿಧೆಡೆ ಲೈನ್‍ಮನೆಗಳಲ್ಲಿ ವಾಸಿಸುತ್ತಿದ್ದ ಕೊಡಗಿನ ಮೂಲ ನಿವಾಸಿಗಳು ಶೆಡ್ ನಿರ್ಮಿಸಿ ಕಳೆದ ಎರಡು ವರ್ಷಗಳಿಂದ ನೆಲೆಸಿದ್ದು, ಜಿಲ್ಲಾಡಳಿತ ಮೂಲಭೂತ ಸೌಲಭ್ಯ ನೀಡಿಲ್ಲ. ಈ ಸಂಬಂಧ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನ ದೊರೆಯುತ್ತಿಲ್ಲ. ಸಾಕಷ್ಟು ಬಾರಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ಆದರೂ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಪರಶುರಾಮ್, ತಾಲೂಕು ಸಂಘಟನೆ ಸಂಚಾಲಕ ಕರ್ಕು, ಗಣೇಶ್, ಸಾಂಸ್ಕøತಿಕ ಸಮಿತಿ ಸಂಚಾಲಕ ಗಿರೀಶ್ ಇದ್ದರು.