ಕಡಂಗ, ಆ. 13: ಕೊಡಗಿನಲ್ಲಿ ಮುಂದೆ ಯಾವುದೇ ಪ್ರಕೃತಿ ದುರಂತ ಸಂಭವಿಸದಿರಲಿ. ವರುಣ ಶಾಂತನಾಗಿ ಜನತೆ ಸುರಕ್ಷಿತವಾಗಿರಲು ದೇವರ ಅನುಗ್ರಹವಿರಲಿ ಎಂದು ಸಂಕಲ್ಪಿಸಿ ಕೊಡಗು ಜಿಲ್ಲಾ ಪಂಚಾಯಿತಿಯ ಸದಸ್ಯರು ಶ್ರೀ ಇಗ್ಗುತ್ತಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಜಿ.ಪಂ. ಸದಸ್ಯರಾದ ಬಿ.ಎನ್. ಪ್ರಥ್ಯು, ಮುಕೋಂಡ ವಿಜು ಸುಬ್ರಮಣಿ, ಸಿ.ಕೆ. ಬೋಪಣ್ಣ ಮತ್ತು ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರು ಕಕ್ಕಬ್ಬೆ ಸಮೀಪವಿರುವ ಶ್ರೀ ಪಾಡಿ ಇಗ್ಗುತ್ತಪ್ಪ ದೇವಸ್ಥಾನಕ್ಕೆ ತೆರಳಿ ಕೊಡಗಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಪ್ರಕೃತಿ ವಿಕೋಪದ ದುರಂತಗಳು ಸಂಭವಿಸುತ್ತಿದೆ. ಇದರಿಂದ ಅಮೂಲ್ಯವಾದ ಮನುಷ್ಯನ ಜೀವಕ್ಕೂ ಹಾನಿಯಾಗುತ್ತಿದೆ. ಅಲ್ಲದೆ ಪ್ರಾಣಿ-ಪಕ್ಷಿಗಳು ದುರಂತಕ್ಕೆ ಬಲಿಯಾಗುತ್ತಿವೆ. ಆದ್ದರಿಂದ ಈ ರೀತಿಯ ದುರಂತಗಳು ಮುಂದೆಂದೂ ಮರುಕಳಿಸಬಾರದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ದೇವರಲ್ಲಿ ಮೊರೆಯಿಟ್ಟು ಪ್ರಾರ್ಥಿಸಿದರು. ಅಲ್ಲದೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕು ಕೂಡಲೇ ನಿರ್ಮೂಲನೆಯಾಗಿ ಜನರ ಆತಂಕ ದೂರವಾಗಲಿ ಎಂದು ಕೂಡ ಪ್ರಾರ್ಥಿಸಿದರು. ಈ ಸಂದರ್ಭ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಪ್ರಧಾನ ಅರ್ಚಕ ಕುಶಭಟ್, ಅರ್ಚಕ ಶ್ರೀಕಾಂತ್ ಹೆಬ್ಬಾರ್, ದೇವಸ್ಥಾನದ ಪಾರ್ಪತ್ಯಗಾರ ಪರದಂಡ ಪ್ರಿನ್ಸ್ ತಮ್ಮಪ್ಪ ಹಾಜರಿದ್ದರು.