ಗೋಣಿಕೊಪ್ಪಲು, ಆ. 13: ಮುಂಜಾನೆ 9.30ರ ಸಮಯದಲ್ಲಿ ಬಸ್ ನಿಲ್ದಾಣದಲ್ಲಿರುವ ಹಾಲಿನ ಕೇಂದ್ರದಲ್ಲಿ ಹಾಲು ತೆಗೆದುಕೊಳ್ಳಲು ಆಗಮಿಸಿದ ಮೈಕಲ್ ಎಂಬ ವ್ಯಕ್ತಿ ಯೋರ್ವರು ತನ್ನ ಸ್ಕೂಟಿಯನ್ನು ಅಂಗಡಿ ಸಮೀಪದಲ್ಲಿ ನಿಲ್ಲಿಸಿ ಸ್ಕೂಟಿಯಲ್ಲಿಯೇ ಕೀಯನ್ನು ಬಿಟ್ಟು ಹಾಲಿನ ಕೇಂದ್ರಕ್ಕೆ ತೆರಳುತ್ತಿ ದ್ದಂತೆಯೇ ಹೊಂಚು ಹಾಕಿ ಕಾಯುತ್ತಿದ್ದ ಯುವಕನೋರ್ವ ಕ್ಷಣಾರ್ಧದಲ್ಲಿ ಸ್ಕೂಟಿಯನ್ನು ಕದ್ದೊಯ್ದು ನಂತರ ಮಹಿಳೆಯರಿಗೆ ಸಿಕ್ಕಿಬಿದ್ದ ಘಟನೆ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಕೂಟಿಯನ್ನು ಕದ್ದೊಯ್ದ ಯುವಕ ಶಹನಾಸ್(25) ಮೂಲತಃ ಮಟ್ಟನ್ನೂರು,ಇರಿಟಿಯವನೆಂದು ತಿಳಿದು ಬಂದಿದೆ. (ಮೊದಲ ಪುಟದಿಂದ) ಗುರುವಾರ ಮುಂಜಾನೆ ಕೇರಳದಿಂದ ಕುಟ್ಟ ಮಾರ್ಗವಾಗಿ ವಾಣಿಜ್ಯ ನಗರ ಗೋಣಿಕೊಪ್ಪಕ್ಕೆ ಆಗಮಿಸಿದ್ದ ಆರೋಪಿ ಶಹನಾಸ್ ಬಸ್ ನಿಲ್ದಾಣದ ಎದುರಿನಲ್ಲಿರುವ ಅಂಗಡಿಯ ಬಳಿ ನಿಂತು ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಎನ್ನಲಾಗಿದೆ.ಹಾಲಿಗಾಗಿ ಆಗಮಿಸಿದ ಮೈಕಲ್ ಸ್ಕೂಟಿ ನಿಲ್ಲಿಸಿದ್ದನ್ನು ಕಂಡು ಅದನ್ನು ಕ್ಷಣಾರ್ಧದಲ್ಲಿ ಚಾಲಿಸಿಕೊಂಡು ಉಮಾಮಹೇಶ್ವರಿ ದೇವಸ್ಥಾನ ಬಳಿಯ ಬೈಪಾಸ್ ರಸ್ತೆಗೆ ತೆರಳಿದ್ದಾನೆ. ಅಲ್ಲಿಂದ ಪೊನ್ನಂಪೇಟೆ ಜಂಕ್ಷನ್‍ನಲ್ಲಿ ಹೈವೇ ಪೆಟ್ರೋಲ್ ಪೊಲೀಸ್ ವಾಹನ ಎದುರಾಗುತ್ತಿದ್ದಂತೆ ಗಾಬರಿಗೊಂಡ ಈತ ಸ್ಕೂಟಿಯೊಂದಿಗೆ ಮಗುಚಿ ಬಿದ್ದಿದ್ದಾನೆ. ನಂತರ ಅಲ್ಲಿಂದ ಸಾವರಿಸಿಕೊಂಡು ಎದ್ದ ಈತ ಮೈಸೂರು ರಸ್ತೆಯತ್ತ ಸ್ಕೂಟಿಯನ್ನು ತಿರುಗಿಸಿದ್ದಾನೆ. ಹರಿಶ್ಚಂದ್ರಪುರದ ಕಡೆಗೆ ತಿರುಗಿದ ಈತ ನಂತರ ಇನ್ನಷ್ಟು ಗಾಬರಿಗೊಂಡು ವಾಪಸ್ಸಾಗಿ ಅನ್ಯ ಮಾರ್ಗವಿಲ್ಲದೆ ಈತ ಮೈಸೂರು,ಗೋಣಿಕೊಪ್ಪ ಮುಖ್ಯ ರಸ್ತೆಯ ಎಂಎಂ ಲೇಔಟ್ ಬಳಿ ಸ್ಕೂಟಿ ನಿಲ್ಲಿಸಿ ಅಲ್ಲಿಂದ ಕೀರೆ ಹೊಳೆ ದಾಟಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾನೆ.
ಕೀರೆ ಹೊಳೆ ದಾಟಿದ ಶಹನಾಸ್ ಮುಂದಿನ ದಾರಿ ಅರಿವಾಗದೆ ಕಾವೇರಿ ಹಿಲ್ಸ್ ಬಡಾವಣೆಯ ವ್ಯಕ್ತಿಯೋರ್ವರ ಮನೆಯ ಕಾಂಪೌಂಡು ಬಳಿ ಅಡಗಿ ಕುಳಿತು ವಿಶ್ರಾಂತಿ ಪಡೆದಿದ್ದಾನೆ. ನಂತರ ಅಲ್ಲಿಂದ ರಸ್ತೆಯಲ್ಲಿ ತೆರಳುವ ಸಂದರ್ಭ ಬಡಾವಣೆಯಲ್ಲಿದ್ದ ಮಹಿಳೆಯರು,ಪುರುಷರು ಹಾಗೂ ಮಕ್ಕಳು ಅನುಮಾನಗೊಂಡು ಈತನನ್ನು ಸುತ್ತುವರೆದು ವಿಚಾರಿಸಿದಾಗ ಗಾಬರಿಗೊಂಡು ಮಾಡಿದ ತಪ್ಪನ್ನು ಒಪ್ಪಿಕೊಂಡು ಬಿಟ್ಟುಬಿಡಿ ಇನ್ನು ಈ ಕಡೆ ಬರುವುದಿಲ್ಲ ಎಂದು ಅಂಗಲಾಚಿದ್ದಾನೆ.
ಮಹಿಳೆಯರು ಕೂಡಲೇ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಆರೋಪಿಯನ್ನು ಸೆರೆ ಹಿಡಿದಿರುವ ಬಗ್ಗೆ ತಿಳಿಸಿದ್ದಾರೆ. ಅಷ್ಟೊತ್ತಿಗಾಗಲೇ ಸುದ್ದಿ ತಿಳಿದ ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಸುರೇಶ್ ಬೋಪಣ್ಣ ಹಾಗೂ ಸಿಬ್ಬಂದಿಗಳು ಕಾವೇರಿ ಹಿಲ್ಸ್ ಬಡಾವಣೆಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಮೇಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆಗಾಗಿ ಈತನನ್ನು ಸಿದ್ದಾಪುರ ಬಳಿಯ ಬಂಧುಗಳ ಮನೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಸಿಪಿಐ ರಾಮರೆಡ್ಡಿ ನಿರ್ದೇಶನದ ಮೇಲೆ ಠಾಣಾಧಿಕಾರಿ ಸುರೇಶ್ ಬೋಪಣ್ಣ,ಪೊಲೀಸ್ ಸಿಬ್ಬಂದಿಗಳಾದ ಕೃಷ್ಣ, ಮಣಿಕಂಠ, ಹೈವೆ ಪೆಟ್ರೋಲ್‍ನÀ ಎಎಸ್‍ಐ ವಸಂತ, ಚಾಲಕ ನವೀನ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ.
ವಾಹನ ಚಾಲಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡುವ ಸಂದರ್ಭ ತಮ್ಮ ವಾಹನದಲ್ಲಿ ಕೀಗಳನ್ನು ಬಿಟ್ಟು ತೆರಳದಂತೆ ಪೊಲೀಸರು ಮನವಿ ಮಾಡಿದ್ದಾರೆ.
-ಹೆಚ್.ಕೆ.ಜಗದೀಶ್