ವೀರಾಜಪೇಟೆ, ಆ. 12: ಕಳೆದು ಎರಡೂವರೆ ತಿಂಗಳ ಹಿಂದೆ ಇಲ್ಲಿನ ಗೋಣಿಕೊಪ್ಪ ರಸ್ತೆಯ ಮಾಂಸ ಮಾರುಕಟ್ಟೆಯ ಬಳಿಯ ಮನೆಯಲ್ಲಿ ನಡೆದ ದರೋಡೆಗೆ ವಿಫಲ ಯತ್ನ ಪ್ರಕರಣದಲ್ಲಿ ಆರೋಪಿ ಕೆ.ಎಸ್.ಶಫೀರ್ (ಚಿಪ್ಪಿ)ಗೆ ವೀರಾಜಪೇಟೆಯ ಎರಡನೇ ಅಧಿಕ ಮತ್ತು ಸೆಷನ್ಸ್ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಪಿ.ಎಸ್.ಚಂದ್ರಶೇಖರ್ ಅವರು ನಿರೀಕ್ಷಣಾ ಜಾಮೀನು ನೀಡಿದ್ದಾರೆ.
ಕಳೆದ 21-5-20 ರಂದು ಮಧ್ಯರಾತ್ರಿ 2 ಗಂಟೆಯ ಸಮಯದಲ್ಲಿ ಇಲ್ಲಿನ ಮಾಂಸ ಮಾರುಕಟ್ಟೆಯ ಬಳಿಯಿರುವ ಕಾಫಿ ಹಾಗೂ ಕರಿಮೆಣಸು ಉದ್ಯಮಿ ಶಬೀರ್ ಅಹಮ್ಮದ್ ಎಂಬವರ ಮನೆಯ ಮೊದಲ ಅಂತಸ್ತಿನ ಕಿಟಕಿಯ ಕಬ್ಬಿಣದ ಸರಳನ್ನು ಕತ್ತರಿಸಿ ಮನೆಗೆ ನುಗ್ಗಿದ ಐದು ಮಂದಿ ದರೋಡೆಕೋರರು ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಲು ಹೊಂಚು ಹಾಕುತ್ತಿದ್ದಾಗ, ಶಬೀರ್ ಅವರ ಪತ್ನಿ ಆಕಸ್ಮಿಕವಾಗಿ ನಿದ್ರೆಯಿಂದ ಎಚ್ಚೆತ್ತು ಬೊಬ್ಬೆಯಿಟ್ಟಾಗ ಡೈನಿಂಗ್ ರೂಮಿನ ಟೇಬಲ್ ಮೇಲಿದ್ದ ರೂ. 25000 ಮೌಲ್ಯದ ಮೊಬೈಲ್ ಫೋನ್‍ನೊಂದಿಗೆ ಎಲ್ಲರೂ ತಲೆ ಮರೆಸಿಕೊಂಡಿದ್ದರು.
ನಗರ ಪೊಲೀಸರು ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಿದ ನಂತರ ಪೊಲೀಸರು 4 ಮಂದಿಯನ್ನು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಎಮ್ಮೆಮಾಡು ಗ್ರಾಮದ ಕೆ.ಎಸ್.ಶಫೀರ್ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು.
ಆರೋಪಿ ಪರ ವೀರಾಜಪೇಟೆಯ ಬಿ.ರತ್ನಾಕರ ಶೆಟ್ಟಿ ವಕಾಲತ್ತು ವಹಿಸಿದ್ದಾರೆ.