ಪಾರದರ್ಶಕ ತೆರಿಗೆ ವೇದಿಕೆ ಉದ್ಘಾಟನೆ

ನವದೆಹಲಿ, ಆ. 13: ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ “ಪಾರದರ್ಶಕ ತೆರಿಗೆ-ಪ್ರಾಮಾಣಿಕರಿಗೆ ಗೌರವ ವೇದಿಕೆ” ಉದ್ಘಾಟಿಸುವ ಮೂಲಕ ತೆರಿಗೆ ಸುಧಾರಣೆ ನಿಟ್ಟಿನಲ್ಲಿ ಹೊಸ ಅಧ್ಯಾಯ ಬರೆಯಲು ಮುಂದಾಗಿದ್ದಾರೆ. ಇದರಿಂದ ತೆರಿಗೆ ವ್ಯವಸ್ಥೆ ಸುಧಾರಣೆಯಾಗುವುದಲ್ಲದೆ, ಪಾವತಿ ವಿಧಾನವನ್ನು ಸರಳಗೊಳಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ನೇರ ತೆರಿಗೆ ಸುಧಾರಣೆಯ ಮುಂದಿನ ಹಂತವಾದ ತೆರಿಗೆ ಪಾವತಿ ವಿಧಾನ ದಲ್ಲಿರುವ ಕ್ಲಿಷ್ಟತೆಯನ್ನು ಸರಳಗೊಳಿಸುವ ಮತ್ತು ಪ್ರಾಮಾಣಿಕ ತೆರಿಗೆ ಪಾವತಿ ದಾರರಿಗೆ ಪ್ರಶಂಸೆ, ಕೊಡುಗೆ ನೀಡುವ ತೆರಿಗೆ ಪಾವತಿದಾರರ ಚಾರ್ಟರ್ ಮತ್ತು ಫೇಸ್‍ಲೆಸ್ ಮೌಲ್ಯಮಾಪನವನ್ನು ಅನಾವರಣಗೊಳಿಸಿದರು. ಕೋವಿಡ್ -19ನ ಆರ್ಥಿಕ ಸಂಕಷ್ಟದ ಈ ಸಮಯದಲ್ಲಿ ಅರ್ಥವ್ಯವಸ್ಥೆಯನ್ನು ಮರು ನಿರ್ಮಾಣ ಮಾಡುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜನರ ಕ್ಷಮೆ ಕೋರಿದ ಶಾಸಕ ಅಖಂಡ

ಬೆಂಗಳೂರು, ಆ. 13: ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ತನ್ನ ಕ್ಷೇತ್ರದ ಜನರ ಬಳಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ. ಇಂದು ಪುಂಡರ ಕೃತ್ಯಕ್ಕೆ ಬಲಿಯಾಗಿರುವ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಯನ್ನು ಮಹಜರ್ ಮಾಡಲು ಪೊಲೀಸರು ಆಗಮಿಸಿದ್ದರು. ಜೊತೆಗೆ ಸುಟ್ಟ ವಾಹನಗಳು ಹಾನಿಯಾಗಿರುವ ಸಾರ್ವಜನಿಕ ಆಸ್ತಿಪಾಸ್ತಿಗಳ ವೀಕ್ಷಣೆ ಮಾಡಿದರು. ಈ ವೇಳೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಅಖಂಡ ಶ್ರೀನಿವಾಸ್ ಅವರು ಮನೆ ನೋಡಲು ಬಂದಿದ್ದರು. ಈ ವೇಳೆ ಹಲವಾರು ಬೆಂಬಲಿಗರು, ಸ್ಥಳೀಯ ನಿವಾಸಿಗಳು ಅವರ ಮನೆಯ ಹತ್ತಿರ ಸೇರಿದ್ದರು. ಸ್ಥಳೀಯರ ಮಾತುಗಳನ್ನು ಕೇಳಿಸಿಕೊಂಡು ಮೌನವಾಗಿದ್ದ ಶ್ರೀನಿವಾಸ್ ಅವರು, ನಂತರ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಹಿರಂಗವಾಗಿ ಜನರಲ್ಲಿ ಕ್ಷಮೆಯಾಚಿಸಿದರು. ಆಗ ಸ್ಥಳೀಯರು ಕ್ಷಮೆ ಕೇಳುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನೀವೇ ನಿಂತು ಸಮಸ್ಯೆಯನ್ನು ಬಗೆಹರಿಸಿ ಎಂದು ಹೇಳಿದರು. ಇದೇ ವೇಳೆ ಶಾಸಕರ ಮನೆ ಸುತ್ತಮುತ್ತ ಜನರು ಜಮಾಯಿಸಿದ್ದರು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಜಾರ್ಚ್ ಮಾಡಿದರು.

ಗಲಭೆಯಲ್ಲಿ ಎಸ್.ಡಿ.ಪಿ.ಐ. ಪಾತ್ರ ಬೆಳಕಿಗೆ

ಬೆಂಗಳೂರು, ಆ. 13: ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಎಸ್‍ಡಿಪಿಐ ಪಾತ್ರ ಬೆಳಕಿಗೆ ಬಂದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಡಿ.ಪಿ.ಐ.ನ ಕೈವಾಡ ಹಾಗೂ ಅದರಲ್ಲಿ ಶಾಮೀಲಾದವರ ಸಂಪರ್ಕಗಳ ಬಗ್ಗೆ ಆಳವಾದ ತನಿಖೆ ನಡೆಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಎಸ್.ಡಿ.ಪಿ.ಐ.ಗೆ ಸೇರಿದ ಜನರನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. ನಿನ್ನೆಯಿಂದ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಶಾಂತಿಯುತವಾಗಿದೆ, ಯಾವುದೇ ಅವಘಡಗಳು ನಡೆದಿಲ್ಲ. ತನಿಖೆ ಪ್ರಗತಿಯಲ್ಲಿರುವಂತೆಯೇ ಹೊಸ ಹೊಸ ಮಾಹಿತಿಗಳು ಹೊರಬರುತ್ತಿವೆ, ಎಲ್ಲವನ್ನೂ ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ, ಮುಂದಿನ ದಿನಗಳಲ್ಲಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಭೂಕಾಯ್ದೆ ವಿರುದ್ಧ ಜೆಡಿಎಸ್ ಪ್ರತಿಭಟನೆ

ಬೆಂಗಳೂರು, ಆ. 13: ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಹಾಗೂ ಕೈಗಾರಿಕಾ ಕಾಯಿದೆ ತಿದ್ದುಪಡಿ ವಿರೋಧಿಸಿ ಜೆಡಿಎಸ್ ಬೀದಿಗಿಳಿಯಲಿದೆ. ತಾ. 14 ಹಾಸನದಿಂದ ರಾಜ್ಯಾದ್ಯಂತ ರಾಜ್ಯ ಸರ್ಕಾರದ ವಿರುದ್ಧದ ಹೋರಾಟಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಚಾಲನೆ ನೀಡಲಿದ್ದಾರೆ. ನಾಳೆ ಹಾಸನದಿಂದ ಹೋರಾಟಕ್ಕೆ ಚಾಲನೆ ಸಿಗಲಿದ್ದು, ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ, ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಶಾಸಕರು, ಮಾಜಿ ಶಾಸಕರು, ಮೇಲ್ಮನೆ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಲಿದ್ದಾರೆ.

ಮಿಗ್ - 21 ಬೈಸನ್ ಹಾರಾಟ

ನವದೆಹಲಿ, ಆ. 13: ಪೂರ್ವ ಲಡಾಖ್‍ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಉದ್ವಿಗ್ನತೆಯ ನಡುವೆಯೇ, ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ರಾಕೇಶ್ ಕುಮಾರ್‍ಸಿಂಗ್ ಭದೌರಿಯಾ ಗುರುವಾರ ವೆಸ್ಟರ್ನ್ ಏರ್ ಕಮಾಂಡ್‍ನ ಮುಖ್ಯ ವಾಯುನೆಲೆಗೆ ಭೇಟಿ ನೀಡಿ ಮಿಗ್ - 21 ಬೈಸನ್ ಹಾರಾಟ ನಡೆಸಿದ್ದಾರೆ. ‘ಆರ್‍ಕೆಎಸ್ ಭದೌರಿಯಾ ವೆಸ್ಟರ್ನ್ ಏರ್ ಕಮಾಂಡ್ (ಡಬ್ಲ್ಯುಎಸಿ)ಯ ಮುಂಚೂಣಿಯ ವಾಯುನೆಲೆಗೆ ಭೇಟಿ ನೀಡಿದ್ದು, ಬೇಸ್‍ನ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ ಮತ್ತು ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದಾರೆ ಎಂದು ವಾಯುಸೇನೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಸಿಎಂ ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು, ಆ. 13: ಕೊರೊನಾ ಸೋಂಕಿನ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡನೇ ಬಾರಿಗೆ ನಡೆದ ಪರೀಕ್ಷೆಯಲ್ಲೂ ನೆಗೆಟಿವ್ ಬಂದಿದ್ದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಜ್ವರ ಹಾಗೂ ಮೂತ್ರ ಕೋಶದ ಸೋಂಕಿನ ಹಿನ್ನೆಲೆ ತಾ. 3 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಕಳೆದ ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು, ಸಿಬ್ಬಂದಿಗೆ ಸಿದ್ದರಾಮಯ್ಯ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.