ಪಾಕ್‍ಗೆ ತೈಲ ನೀಡಲ್ಲವೆಂದ ಸೌದಿ

ನವದೆಹಲಿ, ಆ. 12: ಇನ್ನು ಮುಂದೆ ತಾನು ಪಾಕ್‍ಗೆ ಹಣದ ಸಾಲ ಅಥವಾ ತೈಲ ಪೂರೈಕೆ ಮಾಡುವುದಿಲ್ಲ ಎಂದು ಸೌದಿ ಅರೇಬಿಯಾ ಹೇಳಿದೆ. ಈ ಬಗ್ಗೆ ಮಿಡ್ಲ್ ಈಸ್ಟ್ ಮಾನಿಟರ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ಸ್ನೇಹ ಸಂಬಂಧ ಕೊನೆಗೂ ಅಂತ್ಯವಾಗಿದ್ದು, ಪಾಕಿಸ್ತಾನಕ್ಕೆ ಇನ್ನು ಮುಂದೆ ತಾನು ಹಣದ ಸಾಲ ಅಥವಾ ತೈಲ ಪೂರೈಕೆ ಮಾಡುವುದಿಲ್ಲ ಎಂದು ಸೌದಿ ಅರೇಬಿಯಾ ಘೋಷಣೆ ಮಾಡಿದೆ ಎಂದು ಹೇಳಿದೆ. 2018ರ ನವೆಂಬರ್‍ನಲ್ಲಿ ಸೌದಿ ಅರೇಬಿಯಾವು ಘೋಷಣೆ ಮಾಡಿದ್ದ 6.2 ಬಿಲಿಯನ್ ಡಾಲರ್ ಪ್ಯಾಕೇಜ್‍ನ ಭಾಗವಾಗಿತ್ತು ಆ ಸಾಲ. ಅದರಲ್ಲಿ 3 ಬಿಲಿಯನ್ ಹಣದ ರೂಪದ ಸಾಲ ಹಾಗೂ 3.2 ಬಿಲಿಯನ್ ಮೊತ್ತದ ತೈಲವನ್ನು ನೀಡುವ ಒಪ್ಪಂದ ಅದಾಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಈಗ ಪಾಕಿಸ್ತಾನಕ್ಕೆ ತಾನು ಹಣದ ಸಾಲ ಮತ್ತು ಇಂಧನ ಪೂರೈಕೆ ಮಾಡುವುದಿಲ್ಲ ಎಂದು ಸೌದಿ ಘೋಷಣೆ ಮಾಡಿದೆ.

ಗುಂಡಿನ ಚಕಮಕಿಯಲ್ಲಿ ಯೋಧ ಹುತಾತ್ಮ

ಶ್ರೀನಗರ, ಆ. 12: ದಕ್ಷಿಣ ಕಾಶ್ಮೀರ ಜಿಲ್ಲೆಯ ಪುಲ್ವಾಮಾದಲ್ಲಿ ತೀವ್ರ ಶೋಧ ಕಾರ್ಯಾಚರಣೆ ವೇಳೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹಿರಿಯ ಕಮಾಂಡರ್ ಹತನಾಗಿದ್ದು, ಓರ್ವ ಸೈನಿಕ ಸಾವನ್ನಪ್ಪಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹತನಾದ ಪುಲ್ವಾಮಾದ ಲಾಲ್‍ಹಾರ ಕಾಕ್‍ಪೋರಾ ನಿವಾಸಿಯಾದ ಹಿಜ್ಬುಲ್ ಕಮಾಂಡರ್ ಆಜಾದ್ ಲಲ್‍ಹಾರಿ, ದಕ್ಷಿಣ ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿರುವುದರಿಂದ ಕಾರ್ಯಾಚರಣೆ ದೊಡ್ಡ ಯಶಸ್ಸು ಕಂಡಿದೆ ಎಂದು ಪೊಲೀಸ್ ಮಹಾನಿರ್ದೇಶಕ ದಿಲ್‍ಬಾಗ್ ಸಿಂಗ್ ಹೇಳಿದ್ದಾರೆ. ಪುಲ್ವಾಮಾದ ಕಮ್ರಾಜಿಪೊರಾದಲ್ಲಿ ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಆರ್ಪಿಎಫ್, ವಿಶೇಷ ಕಾರ್ಯಾಚರಣಾ ತಂಡ (ಎಸ್‍ಒಜಿ) ರಾಷ್ಟ್ರೀಯ ರೈಫಲ್ಸ್ ಪಡೆಗಳು ಜಂಟಿಯಾಗಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದವು.

ಲಷ್ಕರ್ ತೊಯ್ಬಾ ಉಗ್ರನ ಬಂಧನ

ಶ್ರೀನಗರ, ಆ. 12: ಕುಪ್ವಾರ ಉಗ್ರ ದಾಳಿ ಬೆನ್ನಲ್ಲೇ ಇತ್ತ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಉಗ್ರನೋರ್ವನನ್ನು ಬಂಧಿಸಿದ್ದಾರೆ. ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಜಿನ್‍ನಲ್ಲಿ ಸಕ್ರಿಯ ಎಲ್‍ಇಟಿಯ ಅಖಿಬ್ ಅಹ್ಮದ್ ರಾದರ್ ಎಂಬ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ಕುಪ್ವಾರದಲ್ಲಿ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು ಬಂಡಿಪೋರದಲ್ಲಿ ತನಿಖೆ ನಡೆಸುತ್ತಿದ್ದರು. ಈ ವೇಳೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಶೋಧ ನಡೆಸಿದಾಗ ಓರ್ವ ಸಕ್ರಿಯ ಉಗ್ರಗಾಮಿ ಪತ್ತೆಯಾಗಿದ್ದ. ಆತನನ್ನು ಕೂಡಲೇ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಹಂದ್ವಾರ ಮತ್ತು ಬಂಡಿಪೋರಾದಲ್ಲಿ ನಡೆದ ಈ ಬೃಹತ್ ಕಾರ್ಯಾಚರಣೆಗಾಗಿ 13 ರಾಷ್ಟ್ರೀಯ ರೈಫಲ್ಸ್ ತಂಡ, 32 ಆರ್‍ಆರ್ ಮತ್ತು 92 ಸಿಆರ್‍ಪಿಎಫ್ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿತ್ತು. ಹಜಿನ್ ಪ್ರದೇಶದಲ್ಲಿ ನಡೆದ ಶೋಧ ಕಾರ್ಯದಲ್ಲಿ ಉಗ್ರ ಪತ್ತೆಯಾಗಿದ್ದ ಎಂದು ಬಂಡಿಪೋರಾ ಡಿಜಿ ಹೇಳಿದ್ದಾರೆ. ಬಂಧಿತ ಉಗ್ರನಿಂದ ಶಸ್ತ್ರಾಸ್ತ್ರಗಳು, ಬುಲೆಟ್‍ಗಳು, ಕೆಲ ಸ್ಫೋಟಕ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಾಜಿ ರಾಷ್ಟ್ರಪತಿ ಸ್ಥಿತಿ ಮತ್ತಷ್ಟು ಗಂಭೀರ

ನವದೆಹಲಿ, ಆ. 12: ದೇಶದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಬುಧವಾರ ಮತ್ತಷ್ಟು ಗಂಭೀರವಾಗಿದ್ದು, ವೆಂಟಿಲೇಟರ್ ನೆರವಿನಿಂದ ಉಸಿರಾಡುತ್ತಿದ್ದಾರೆ. ದೆಹಲಿ, ಮುಂಬೈ, ಕೋಲ್ಕತಾ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮುಖರ್ಜಿ ಅವರ ಶೀಘ್ರ ಚೇತರಿಕೆಗಾಗಿ ವಿಶೇಷ ಪ್ರಾರ್ಥನೆ, ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಮುಖರ್ಜಿ ಅವರ ಬಂಗಾಳದ ಪುರಾತನ ಮನೆಯಲ್ಲಿಯೂ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಮುಖರ್ಜಿ ತಾ. 10 ರಂದು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಅದರಿಂದ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಈ ನಡುವೆ, ಅವರಿಗೆ ಕೋವಿಡ್ ಸೋಂಕು ಕೂಡ ದೃಢಪಟ್ಟಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮುಖರ್ಜಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮುಖರ್ಜಿ ಪುತ್ರಿ ಶರ್ಮಿಷ್ಟಾ ಮುಖರ್ಜಿ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ.

ಎನ್‍ಕೌಂಟರ್‍ನಲ್ಲಿ ನಾಲ್ವರು ನಕ್ಸಲರು ಬಲಿ

ಸುಕ್ಮಾ, ಆ. 12: ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ ಭದ್ರತಾ ಪಡೆಗಳು ನಾಲ್ಕು ಮಂದಿ ನಕ್ಸಲರನ್ನು ಹೊಡೆದುರುಳಿಸಿದ ಘಟನೆ ನಡೆದಿದೆ. ಛತ್ತೀಸ್‍ಘಡದ ಸುಕ್ಮಾ ಜಿಲ್ಲೆಯ ಹೊರವಲಯದ ಜಗರಗುಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಎನ್‍ಕೌಂಟರ್ ನಡೆದಿದ್ದು, ಘಟನೆಯಲ್ಲಿ ನಾಲ್ಕು ಮಂದಿ ನಕ್ಸಲರು ಹತರಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‍ಜಿ), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‍ಪಿಎಫ್) ಮತ್ತು ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಪಡೆಗಳ ಸಿಬ್ಬಂದಿಗಳು ತೊಡಗಿದ್ದರು ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಜನರಲ್ (ಬಸ್ತಾರ್) ಸುಂದರ್ ರಾಜ್ ಪಿ ಹೇಳಿದ್ದಾರೆ. ಮೂಲಗಳ ಪ್ರಕಾರ ಫುಲಂಪಾರ್ ಗ್ರಾಮದಲ್ಲಿ ಸೇನಾಪಡೆಗಳು ಗಸ್ತು ತಿರುಗುತ್ತಿದ್ದಾಗ ಅಲ್ಲಿಯೇ ಬಿಡಾರ ಹೂಡಿದ್ದ ನಕ್ಸಲರು ಏಕಾಏಕಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಈ ವೇಳೆ ನಾಲ್ಕು ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ.