ಮಡಿಕೇರಿ, ಆ. 13: ದಿನಂಪ್ರತಿ ತೋಟ - ಗದ್ದೆಗಳಿಗೆ ಹಿಂಡು ಹಿಂಡಾಗಿ ಆಗಮಿಸಿ ಕೃಷಿ ಫಸಲುಗಳನ್ನು ಧ್ವಂಸಗೊಳಿಸುತ್ತಿರುವ ಕಾಡಾನೆಗಳು ಇದೀಗ ಗಾಳಿ- ಮಳೆಯ ನಡುವೆ ಮನೆಯ ಅಂಗಳಕ್ಕೆ ಲಗ್ಗೆಯಿಡುತ್ತಿವೆ. ಕಳೆದ ರಾತ್ರಿ ಅರೆಕಾಡು ಗ್ರಾಮದಲ್ಲಿ ಅಲ್ಲಿನ ನಿವಾಸಿ ಬಿದ್ದಂಡ ಭೀಮಯ್ಯ ಅವರ ಮನೆಯ ಅಂಗಳಕ್ಕೆ ಬಂದಿರುವ ಕಾಡಾನೆ, ಮನೆಯ ಒತ್ತಿನಲ್ಲಿದ್ದ ಹೂ ಕುಂಡಗಳು, ಮತ್ತಿತರ ಸಾಮಗ್ರಿಗಳನ್ನು ಎಳೆದಾಡಿರುವ ಘಟನೆ ವರದಿಯಾಗಿದೆ. ಮನೆಯಲ್ಲಿ ಇವರ ಕುಟುಂಬದಲ್ಲಿ ಇಳಿವಯಸ್ಸಿನವರು ಇದ್ದು, ಮನೆಯ ಸಜ್ಜೆಗೆ ಆನೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಮನೆ ಮಂದಿ ಆತಂಕಗೊಳ್ಳುವಂತಾಗಿದೆ.

ತೋಟ- ಗದ್ದೆಗಳಿಗೆ ಆನೆಗಳು ಹಿಂಡು ಹಿಂಡಾಗಿ ದಿನಂಪ್ರತಿ ಆಗಮಿಸುತ್ತಿರುವುದು, ಕಾಫಿ ಮತ್ತಿತರ ಬೆಳೆ ನಾಶ ಸಾಮಾನ್ಯವಾಗಿದೆ. ಆದರೆ ಇದೀಗ ಜನ ವಾಸವಿರುವ ಮನೆಗೇ ಧಾವಿಸಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಭೀಮಯ್ಯ ಅವರ ಪತ್ನಿ ರೂಪಾ ‘ಶಕ್ತಿ’ಗೆ ತಿಳಿಸಿದ್ದಾರೆ. ಆನೆಗಳ ಉಪಟಳದ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಲಾಗುತ್ತಿದ್ದು, ಸಿಬ್ಬಂದಿಗಳು ಆಗಮಿಸಿ ತೆರಳುತ್ತಿದ್ದಾರೆಯೇ ಹೊರತಾಗಿ ಆನೆಗಳ ಉಪಟಳ ಕಡಿಮೆಯಾಗುತ್ತಿಲ್ಲ. ಈ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸಿ ಈ ಆನೆಗಳನ್ನು ಓಡಿಸಬೇಕಲ್ಲದೆ, ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಮನೆಯ ಸಜ್ಜೆಯಲ್ಲಿದ್ದ ಹೂಕುಂಡ, ಪೊರಕೆ, ಮತ್ತಿತರ ಸಾಮಗ್ರಿಗಳನ್ನು ಅಂಗಳಕ್ಕೆ ಬಿಸುಟಿರುವ ಆನೆ, ಮನೆಯ ಸುತ್ತಮುತ್ತಲು ತಿರುಗಾಡಿದ್ದು, ನಷ್ಟ ಉಂಟು ಮಾಡಿರುವುದಲ್ಲದೆ, ಭೀತಿಯನ್ನೂ ಸೃಷ್ಟಿಸಿರುವುದಾಗಿ ತಿಳಿಸಿದ್ದಾರೆ.