ಸೋಮವಾರಪೇಟೆ, ಆ. 13: ಕಳೆದ ಮೂರು ದಿನಗಳಿಂದ ಶಾಂತವಾಗಿದ್ದ ವರುಣ ಇಂದು ನಿಧಾನಗತಿಯಲ್ಲಿ ತನ್ನ ಆರ್ಭಟ ತೋರುತ್ತಿದೆ. ಕೆಲವೊಮ್ಮೆ ಬಿರುಸಿನಿಂದ ಮಳೆ ಸುರಿಯುತ್ತಿದ್ದರೆ, ಗಾಳಿಯೂ ರಭಸಗೊಳ್ಳುತ್ತಿದೆ.
ಗಾಳಿ-ಮಳೆಗೆ ತಾಲೂಕಿನ ಯಡವನಾಡು ಗ್ರಾಮದ ಚೆರಿಯಮನೆ ಕಿರಣ್ ಕಾರ್ಯಪ್ಪ ಅವರಿಗೆ ಸೇರಿದ ಹೊಲದಲ್ಲಿ ಬೆಳೆದಿದ್ದ ಜೋಳದ ಬೆಳೆಗೆ ಹಾನಿಯಾಗಿದೆ. ಗಾಳಿಗೆ ಫಸಲು ಬಿಟ್ಟಿದ್ದ ಜೋಳ, ತಳಭಾಗದಿಂದಲೇ ನೆಲಕ್ಕುರುಳಿದ್ದು, ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಜೋಳದ ಬೆಳೆ ನಷ್ಟಗೊಂಡಿದೆ ಎಂದು ಕಿರಣ್ ಅವರು ಅಳಲು ತೋಡಿಕೊಂಡಿದ್ದಾರೆ.
ಇನ್ನು ಗದ್ದೆಗಳ ಬದಿಯಲ್ಲಿ ಹರಿಯುವ ತೋಡುಗಳಲ್ಲಿ ನೀರು ಉಕ್ಕಿ, ಅಕ್ಕಪಕ್ಕದ ಗದ್ದೆಗಳಿಗೆ ನೀರು ನುಗ್ಗುತ್ತಿರುವದರಿಂದ ನಾಟಿ ಮಾಡಿದ್ದ ಪೈರುಗಳು ನಾಶವಾಗುತ್ತಿವೆ. ಅಲ್ಲಲ್ಲಿ ಬರೆಕುಸಿದು ಗದ್ದೆಗಳಿಗೆ ಜರುಗುತ್ತಿದೆ.
ಕೃಷಿ ಕಾರ್ಯ ಚುರುಕು: ಮಳೆಯ ಆರ್ಭಟ ಕಡಿಮೆಯಾಗಿ ಸಾಧಾರಣ ಮಳೆ ಬೀಳುತ್ತಿರುವ ಹಿನ್ನೆಲೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಯಗಳು ಚುರುಕುಗೊಳ್ಳುತ್ತಿವೆ. ಗದ್ದೆಗಳನ್ನು ಹದಗೊಳಿಸುವದು, ಪೈರು ನಾಟಿ ಮಾಡುವ ಕಾರ್ಯದಲ್ಲಿ ಕೃಷಿಕರು ತೊಡಗಿಸಿಕೊಂಡಿದ್ದಾರೆ.
ತಾಲೂಕಿನ ಶಾಂತಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ ಹೋಬಳಿ, ಮಾದಾಪುರ, ಸುಂಟಿಕೊಪ್ಪ ಹೋಬಳಿಯಾದ್ಯಂತ ಗದ್ದೆಗಳಲ್ಲಿ ಕೃಷಿ ಕಾರ್ಯ ಬಿಡುವಿಲ್ಲದಂತೆ ನಡೆಯುತ್ತಿದೆ.