ಸುಂಟಿಕೊಪ್ಪ, ಆ. 13: ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ 2 ಎತ್ತುಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರೂರು ಗ್ರಾಮದ ಚೆಪ್ಪುಡಿರ ಸತೀಶ್ ಎಂಬವರಿಗೆ ಸೇರಿದ ಜಾನುವಾರುಗಳನ್ನು ಗುರುವಾರ ಬೆಳಿಗ್ಗೆ ಕೊಟ್ಟಿಗೆಯಿಂದ ಕಾರ್ಮಿಕನು ಮೇಯಲು ಕರೆದುಕೊಂಡು ಹೋಗುವಾಗ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ದಾಟುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಕಾರ್ಮಿಕನು ದೂರ ದಿಂದ ಗಮನಿಸಿದ ಕಾರಣ ಆತನ ಪ್ರಾಣ ಉಳಿದಿದೆ. ಹೊರೂರು ಭಾಗದಲ್ಲಿ ಕಳೆದ 10 ದಿನಗಳಿಂದ ವಿದ್ಯುತ್ ಕಡಿತಗೊಂಡಿದ್ದು 12 ರಂದು ರಾತ್ರಿ ವಿದ್ಯುತ್ ಸಂಪರ್ಕ ದೊರೆತಿದೆ ಎನ್ನಲಾಗಿದೆ. ರಾತ್ರಿಯೇ ವಿದ್ಯುತ್ ತಂತಿಯ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ ವಿದ್ಯುತ್ ತಂತಿ ರಸ್ತೆಗೆ ತುಂಡಾಗಿ ಬಿದ್ದಿತ್ತು. ಇದರ ಮೇಲೆ ಎತ್ತುಗಳು ಸಾಗಿವೆÉ. ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ವೆಂಕಟರಮಣ ಹಾಗೂ ಸಿಬ್ಬಂದಿಗಳು, ಚೆಸ್ಕಾಂ ಇಂಜಿನಿಯರ್, ಪಶುವೈದ್ಯಾಧಿಕಾರಿಗಳು ಆಗಮಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.