ಕುಶಾಲನಗರ, ಆ 13: ಬೆಂಗಳೂರಿನಲ್ಲಿ ನಡೆದ ದಾಂಧಲೆ ಪ್ರಕರಣವನ್ನು ಖಂಡಿಸಿ ಕುಶಾಲನಗರ ವಿವಿಧ ಹಿಂದೂಪರ ಸಂಘಟನೆಗಳಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.

ಸ್ಥಳೀಯ ಗಣಪತಿ ದೇವಾಲಯ ಮುಂಭಾಗ ಪ್ರತಿಭಟನೆ ನಡೆಸಿದ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರಕಾರ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳನ್ನು ಕೂಡಲೇ ನಿಷೇಧಿಸುವಂತೆ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಜಿ.ಎಲ್.ನಾಗರಾಜ್, ಪೊಲೀಸ್ ಠಾಣೆ ಮತ್ತು ಶಾಸಕರ ನಿವಾಸದ ಮೇಲೆ ದಾಳಿ ನಡೆಸಿದ ಪಟ್ಟಭದ್ರ ಹಿತಾಸಕ್ತಿ ವಿರುದ್ಧ ರಾಜ್ಯ ಸರಕಾರ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಬೇಕಿದೆ. ಯೋಗಿ ಆದಿತ್ಯನಾಥ ಸರಕಾರ ಗೂಂಡಾಗಳನ್ನು ನಿಗ್ರಹಿಸಲು ಕೈಗೊಂಡಿರುವ ಕ್ರಮದಂತೆ ರಾಜ್ಯದಲ್ಲಿ ಕೂಡ ಕೈಗೊಳ್ಳಬೇಕಿದೆ. ಆ ಮೂಲಕ ಸಮಾಜ ಸ್ವಾಸ್ಥ್ಯ ಕೆಡಿಸುತ್ತಿರುವವರನ್ನು ಮಟ್ಟ ಹಾಕಬೇಕೆಂದರು.

ವಕೀಲ ಬಿ.ಪಿ.ಕೃಷ್ಣಮೂರ್ತಿ ಮಾತನಾಡಿ, ಸಮಾಜದಲ್ಲಿ ಹಾದಿ ತಪ್ಪಿದ ಕೆಲವು ಮುಸಲ್ಮಾನ ಯುವಕರು ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ. ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಗಳ ಮುಖವಾಡ ಹೊಂದಿರುವ ಭಯೋತ್ಪಾದಕರು ಮೇಲಿಂದ ಮೇಲೆ ಇಂತಹ ಕೃತ್ಯ ಎಸಗುತ್ತಿದ್ದಾರೆ. ಇದಕ್ಕೆ ಅಂತ್ಯ ಹಾಡಬೇಕಿದೆ ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿ ಕಾರ್ಯಕರ್ತರು ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಸದಸ್ಯೆ ಮಂಜುಳಾ, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಸದಸ್ಯ ವೈಶಾಖ್, ವಿ.ಡಿ.ಪುಂಡರೀಕಾಕ್ಷ, ಗ್ರಾಪಂ ಸದಸ್ಯೆ ರುದ್ರಾಂಬಿಕೆ, ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರಾದ ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ಕಂಠಿ ಕಾರ್ಯಪ್ಪ, ಚಿಲ್ಲನ ಗಣಿಪ್ರಸಾದ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಅಜಿತ್, ಅನೀಶ್, ರಾಜೀವ್, ನವನೀತ್, ಕೆ.ಡಿ.ಪ್ರಶಾಂತ್, ನಿಡ್ಯಮಲೆ ದಿನೇಶ್, ಶಿವಾಜಿ ಮತ್ತಿತರರು ಇದ್ದರು.

ವೀರಾಜಪೇಟೆ : ಬೆಂಗಳೂರಿನ ಕೆ.ಜಿ.ಹಳ್ಳಿ, ಪುಲಿಕೇಶಿನಗರದಲ್ಲಿ ಎಸ್.ಡಿ.ಪಿ.ಐ ಹಾಗೂ ಹಿಂದೂ ವಿರೋಧಿ ಕಾರ್ಯಕರ್ತರು ಹಿಂದೂಗಳ ಮೇಲೆ ನಡೆಸಿದ ಹಿಂಸಚಾರ- ದೌರ್ಜನ್ಯ, ಪೊಲೀಸ್ ವಾಹನ ಸೇರಿದಂತೆ ಇತರ ಎಲ್ಲ ವಾಹನಗಳಿಗೆ ಬೆಂಕಿ ಹಚ್ಚಿರುವುದು ಪೂರ್ವ ನಿಯೋಜಿತ ಕೃತ್ಯವಾಗಿದ್ದು ಈ ಘಟನೆಯನ್ನು ಹಿಂದೂ ಸಂಘಟನೆಗಳು ಖಂಡಿಸುತ್ತದೆ. ಪೊಲೀಸರು ನಿಷ್ಪಕ್ಷಪಾತವಾಗಿ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಹಿಂದೂ ಸಂಘಟನೆಗಳ ಪರವಾಗಿ ವಕೀಲ ಕೃಷ್ಣಮೂರ್ತಿ ಸರಕಾರವನ್ನು ಆಗ್ರಹಿಸಿದರು.

ವೀರಾಜಪೇಟೆ ವಲಯದ ಭಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ಇತರ ವಿವಿಧ ಹಿಂದೂ ಸಂಘನೆಗಳಿಂದ ಇಲ್ಲಿನ ಗಡಿಯಾರ ಕಂಬದ ಬಳಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರತಿಭಟನೆಯ ನಂತರ ಪ್ರತಿಭಟನೆ ಸಂಘಟಿತರು ತಾಲೂಕು ಕಚೇರಿಯ ಪ್ರಬಾರ ತಹಶೀಲ್ದಾರ್ ಎಚ್.ಕೆ. ಪೊನ್ನು ಅವರಿಗೆ ಹಿಂದೂಗಳಿಗೆ ರಕ್ಷಣೆ ಕೋರಿ ರಾಜ್ಯಪಾಲರಿಗೆ ಮನವಿ ಕಳುಹಿಸುವಂತೆ ಮನವಿ ನೀಡಿದರು.

ಪ್ರತಿಭಟನೆಯಲ್ಲಿ ವೀರಾಜಪೇಟೆ ಬಿಜೆಪಿ ನಗರ ಸಮಿತಿ ಅಧ್ಯಕ್ಷ ಟಿ.ಪಿ. ಕೃಷ್ಣ, ವಿವಿಧ ಹಿಂದೂ ಸಂಘಟನೆಯ ದಿನೇಶ್ ನಾಯರ್, ಬಿ.ಜಿ. ಸಾಯಿನಾಥ್, ಬಿ.ಎಂ. ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಕೆ.ಬಿ. ಹರ್ಷವರ್ಧನ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.