ತಲಕಾವೇರಿ, ಆ. 13: ಕಳೆದ 8 ದಿನಗಳಿಂದ ತಲಕಾವೇರಿ ಪವಿತ್ರ ಕ್ಷೇತ್ರದಲ್ಲಿ ಸ್ಥಗಿತಗೊಂಡಿದ್ದ ಪೂಜಾ ಕೈಂಕರ್ಯಗಳು ಶುಕ್ರವಾರದಿಂದ (ಇಂದು) ಪುನರಾರಂಭಗೊಳ್ಳಲು ಚಾಲನೆ ದೊರೆಯಲಿದೆ. ಭೂಕುಸಿತದಿಂದಾಗಿ ಅರ್ಚಕ ಕುಟುಂಬದ ಐವರು ಸಾವಿಗೀಡಾದ ಬಳಿಕ ಕ್ಷೇತ್ರದಲ್ಲಿ ನಿತ್ಯಪೂಜೆ ಸ್ಥಗಿತಗೊಂಡಿತ್ತು. ಇದೀಗ ಕ್ಷೇತ್ರದ ನೀಲೇಶ್ವರ ಪದ್ಮನಾಭ ತಂತ್ರಿಯವರು ಶುಕ್ರವಾರ ಆಗಮಿಸುತ್ತಿದ್ದು, ಬೆಳಿಗ್ಗೆ 8 ಗಂಟೆಯಿಂದಲೇ ಕ್ಷೇತ್ರದ ಧಾರ್ಮಿಕ ಶುದ್ಧತೆಗೆ ಅಗತ್ಯವಾದ ವಿದಿವಿಧಾನಗಳನ್ನು ಕೈಗೊಳ್ಳಲಿದ್ದಾರೆ. ಶುದ್ಧೀಕರಣ ಕಾರ್ಯಕ್ಕಾಗಿ ಗಣಹೋಮ, ಪುಣ್ಯಾಹ ಹಾಗೂ ದೋಷ ಪರಿಹಾರಾರ್ಥ ಧಾರ್ಮಿಕ ಕ್ರಿಯೆಗಳನ್ನು ನಡೆಸಲಿದ್ದಾರೆ. ಈ ಕಾರ್ಯವಾದ ಬಳಿಕ ಕ್ಷೇತ್ರದಲ್ಲಿ ನಿತ್ಯಪೂಜೆಯನ್ನು ನಿರಂತರವಾಗಿ ನಡೆಸಲಾಗುವದು ಎಂದು ಸ್ಥಳದಲ್ಲಿ ಹಾಜರಿದ್ದ ಶಾಸಕ ಕೆ.ಜಿ. ಬೋಪಯ್ಯ ‘ಶಕ್ತಿ’ಗೆ ತಿಳಿಸಿದರು. ದುರ್ಘಟನೆ ಬಳಿಕ ದೇವಾಲಯಕ್ಕೆ ತೆರಳುವ ದಾರಿ ಸುಮಾರು 180 ಮೀಟರ್‍ಗಳಷ್ಟು ಭೂಕುಸಿತ ಕಲ್ಲುಗಳ ಉರುಳುವಿಕೆಯಿಂದಾಗಿ ಬಂದ್ ಆಗಿತ್ತು. ಇಂದು ಎನ್‍ಡಿಆರ್‍ಎಫ್ ತಂಡದವರು ಈ ರಸ್ತೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. (ಮೊದಲ ಪುಟದಿಂದ) ನಡೆದುಕೊಂಡು ಹೋಗಬಹುದಾಗಿದೆ. ರಸ್ತೆ ಸುಗಮಗೊಳಿಸುವ ಸಂದರ್ಭ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ದೇವಾಲಯ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಕಾರ್ಯನಿರ್ವಾಹಣಾಧಿಕಾರಿ ಅಧಿಕಾರಿ ಜಗದೀಶ್‍ಕುಮಾರ್ ಅವರೂ ಹಾಜರಿದ್ದರು. ದೇವಾಲಯ ಪರಿಸರ ವ್ಯಾಪ್ತಿಯಲ್ಲಿ ತೀವ್ರ ಮಳೆ - ಗಾಳಿಯಿಂದಾಗಿ ನೆಲವೆಲ್ಲ ಪಾಚಿ ಕಟ್ಟಿದ್ದು, ಅಲ್ಲಲ್ಲಿ ಮಣ್ಣು ರಾಶಿಯಿದ್ದು, ಈ ಎಲ್ಲವನ್ನು ಸುಮಾರು 20 ಜನ ಸ್ವಯಂಸೇವಕರು ಕಾರ್ಯನಿರತರಾಗಿ, ಶುಚಿಕರಣಗೊಳಿಸಿದರು.

ಶೋಧ ಕಾರ್ಯ ಮುಂದುವರಿಕೆ

ಈ ನಡುವೆ ದಿವಂಗತ ನಾರಾಯಣಾಚಾರ್ ಅವರ ಪತ್ನಿ ಶಾಂತಾ ಮತ್ತಿಬ್ಬರು ಸಹಾಯಕ ಅರ್ಚಕರ ಪಾರ್ಥಿವ ಶರೀರಗಳಿಗಾಗಿ ಇಂದು ಶೋಧ ಕಾರ್ಯ ಮುಂದುವರಿಯಿತು; ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಹಾಗೂ ಜಿಲ್ಲಾ ಪೊಲೀಸ್ ತಂಡಗಳು ಸೇರಿದಂತೆ ಮೂರು ಕಡೆ ಶೋಧ ಕಾರ್ಯ ನಡೆಸಲಾಯಿತು. ದುರ್ಘಟನೆಯ ಮನೆ ಅವಶೇಷ ಆದ ಕಡೆ ಚೇರಂಗಾಲದ ಬಳಿ ಹಾಗೂ ಕಾವೇರಿ ನದಿ ತೀರಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಯಿತು. ಆದರೆ ಯಾವುದೇ ಪಾರ್ಥಿವ ಶರೀರ ಗೋಚರವಾಗಲಿಲ್ಲ. ಮೃತ ಶ್ರೀನಿವಾಸ್ ಪಡಿಲಾಯ ಅವರಿಗೆ ಸೇರಿದ ಒಂದು ಪರ್ಸ್ ಮಾತ್ರ ಲಭ್ಯವಾಯಿತು. ಆ ಪರ್ಸ್‍ನಲ್ಲಿ ಪಡಿಲಾಯ ಅವರ ಐಡಿಕಾರ್ಡ್ ಮತ್ತು ಪಾನ್‍ಕಾರ್ಡ್ ಮಾತ್ರ ಇದ್ದವು. ಶೋಧ ಕಾರ್ಯಾಚರಣೆ ಸಂದರ್ಭ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಪರಿಹಾರದ ಉಸ್ತುವಾರಿ ವಹಿಸಿಕೊಂಡಿರುವ ಅನನ್ಯ ವಾಸುದೇವ್, ಡಿವೈಎಸ್‍ಪಿ ದಿನೇಶ್‍ಕುಮಾರ್, ತಾಲೂಕು ತಹಶೀಲ್ದಾರ್ ಮಹೇಶ್, ಸಿಐ ದಿವಾಕರ್, ಭಾಗಮಂಡಲ ಎಸ್‍ಐ ಮಹದೇವ್ ಮೊದಲಾದವರು ಹಾಜರಿದ್ದರು.

ನಾರಾಯಣಾಚಾರ್ ಸ್ಮರಣೆ

ಇಂದು ಘಟನೆಯ ಸ್ಥಳಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ್ ಹಾಗೂ ಜನಸೇವಾ ವಿದ್ಯಾಕೇಂದ್ರದ ಸಂಘಟನಾ ಕಾರ್ಯದರ್ಶಿ ನಿರ್ಮಲ್‍ಕುಮಾರ್ ಆಗಮಿಸಿದ್ದರು. ಸಂಘಟನೆಯಲ್ಲಿ ನಾರಾಯಣಾಚಾರ್ ಅವರ ಪಾತ್ರ ಹಾಗೂ ಅತಿಥಿ ಸತ್ಕಾರದಲ್ಲಿ ಅವರ ಪತ್ನಿ ಶಾಂತಾ ಅವರ ಸೇವೆಯನ್ನು ನೆನಪಿಸಿಕೊಂಡು ನಿರ್ಮಲ್ ಅವರು ದುಃಖತಪ್ತರಾದರು.

ಸಮಿತಿಯಿಂದ ಊಟದ ವ್ಯವಸ್ಥೆ

ಈ ನಡುವೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯು ಭಾಗಮಂಡಲದಲ್ಲಿ ಅಡುಗೆ ತಯಾರಿಕೆಗೆ ವ್ಯವಸ್ಥೆ ಮಾಡಿ ಅಲ್ಲಿಂದ ಸುಮಾರು 400 ಮಂದಿಗೆ ಆಗುವಷ್ಟು ಊಟದ ವ್ಯವಸ್ಥೆಯನ್ನು ತಲಕಾವೇರಿಯಲ್ಲಿ ಕಲ್ಪಿಸಿತ್ತು. ಕಾರ್ಯಾಚರಣ ತಂಡಕ್ಕೆ ಈ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಇಂದು ಘಟನಾ ಸ್ಥಳಕ್ಕೆ ಆಗಮಿಸಿದ್ದ ಮೈಸೂರು ವಿಭಾಗದ ಐಜಿ ವಿಪುಲುಕುಮಾರ್ ಸೇರಿದಂತೆ ಪ್ರಮುಖರು ತಲಕಾವೇರಿಯಲ್ಲಿಯೇ ಊಟ ಮಾಡಿದ್ದು ವಿಶೇಷವಾಗಿತ್ತು.