ಸುಂಟಿಕೊಪ್ಪ, ಆ. 12: ಕಂಬಿಬಾಣೆ, ಚಿಕ್ಲಿಹೊಳೆ ಜಲಾಶಯ ಭಾಗಗಳಲ್ಲಿ ಮಳೆಯಿಂದ ಕೃಷಿ ಫಸಲುಗಳು ಹಾನಿಗೊಳಗಾಗಿದ್ದು, ಆ ಪ್ರದೇಶಗಳಿಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ತಹಶೀಲ್ದಾರ್ ಗೋವಿಂದರಾಜು ಹಾಗೂ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ರಂಜನ್ ಮಾತನಾಡಿ, ಕಂಬಿಬಾಣೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ರೈತರ ಕೃಷಿ ಫಸಲು ಅತಿವೃಷ್ಟಿಗೆ ತುತ್ತಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಚೆಟ್ಟಳ್ಳಿ ಭಾಗದಲ್ಲಿ ಚರಿತ್ರೆಯಲ್ಲಿಯೇ ಹಿಂದೆಂದೂ ಕಂಡುಕೇಳರಿಯದ ಒಂದೇ ದಿನದಲ್ಲಿ 14 ಇಂಚು ಮಳೆ ಸುರಿಯುವ ಮೂಲಕ ಅತೀ ಹೆಚ್ಚು ಮಳೆ ಸುರಿದಿದ್ದು, ಈ ಭಾಗದ ರೈತರಿಗೆ ಮತ್ತಷ್ಟು ನಷ್ಟವನ್ನು ಉಂಟುಮಾಡಿದೆ ಎಂದರು. ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಕೃಷಿ ನಷ್ಟಕ್ಕೆ ಪರಿಹಾರವನ್ನು ಒದಗಿಸುವಂತೆ ಒತ್ತಾಯಿಸಲಾಗಿದೆ. ಚಿಕ್ಲಿಹೊಳೆ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಹರಿದು ಬಂದ ಪರಿಣಾಮ ಕಾಫಿ, ಅಡಿಕೆ ಮತ್ತಿತರ ಕೃಷಿಗಳು ಸಂಪೂರ್ಣ ಹಾನಿಗೀಡಾಗಿದ್ದು ಸ್ಥಳ ಪರಿಶೀಲನೆ ನಡೆಸಿದರು. ಬಿದ್ದಿರಹಳ್ಳದಲ್ಲಿ ಹಾದುಹೋಗುವ ಉಪ್ಪುತೋಡುವಿನಲ್ಲಿ ನೀರು ಸರಾಗವಾಗಿ ಹರಿಯದೆ ಮಣ್ಣು, ಕಾಡು ಗಿಡಗಂಟಿಗಳು ಬೆಳೆದು ನಿಂತಿದ್ದು, ತೆಗೆಯುವ ಕಾರ್ಯಕ್ಕೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕೃಷಿ ಇಲಾಖೆಯ ಉಪನಿರ್ದೇಶಕ ರಾಜಶೇಖರ್, ಸುಂಟಿಕೊಪ್ಪ ಕಂದಾಯ ಪರಿವೀಕ್ಷಕ ಶಿವಪ್ಪ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ತಾಲೂಕು ಬಿಜೆಪಿ ಉಪಾಧ್ಯಕ್ಷ ದಾಸಂಡ ರಮೇಶ್ ಚಂಗಪ್ಪ, ಗ್ರಾಮ ಲೆಕ್ಕಿಗರಾದ ನಸೀಮ, ಗ್ರಾಮ ಸಹಾಯಕ ಶಿವಪ್ಪ ಹಾಗೂ ಇತರರು ಹಾಜರಿದ್ದರು.