ಸೋಮವಾರಪೇಟೆ,ಆ.11: ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದಲ್ಲಿ ಈ ಹಿಂದೆ ಪತ್ತೆಯಾಗಿದ್ದ ಕಳ್ಳಭಟ್ಟಿ ಅಡ್ಡೆಗಳ ಮೇಲೆ ಅಬಕಾರಿ ಇಲಾಖಾ ಅಧಿಕಾರಿಗಳು ಕಣ್ಗಾವಲಿಟ್ಟಿದ್ದು, ಆಗಾಗ್ಗೆ ಮನೆಗಳಿಗೆ ಭೇಟಿ ನೀಡಿ, ಕಳ್ಳಭಟ್ಟಿ ಮಾರುತ್ತಿಲ್ಲ ಎಂಬದನ್ನು ಖಚಿಪಡಿಸಿ ಕೊಳ್ಳುತ್ತಿದ್ದಾರೆ.
ಇತ್ತೀಚೆಗಷ್ಟೇ ಪಂಜಾಬ್‍ನ ಚಂಡೀಘಡದಲ್ಲಿ ನಕಲಿ ಮದ್ಯ ಹಾಗೂ ಆಂದ್ರಪ್ರದೇಶದಲ್ಲಿ ಸ್ಯಾನಿಟೈಸರ್ ಸೇವಿಸಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್-19 ಹಿನ್ನೆಲೆ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದ್ದು, ಇಂತಹ ಸಂದರ್ಭದಲ್ಲಿ ನಕಲಿ ಮದ್ಯ ಹಾಗೂ ಕಳ್ಳಭಟ್ಟಿ ಮಾರಾಟ-ಸೇವನೆಗೆ ಅವಕಾಶ ನೀಡುವ ಸಾಧ್ಯತೆ ಇರುವದರಿಂದ ಈ ಹಿಂದೆ ಪತ್ತೆಯಾಗಿದ್ದ ಅಡ್ಡೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದು ಅಬಕಾರಿ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಲಾಕ್‍ಡೌನ್ ಅವಧಿಯಲ್ಲಿ ಪೆರಾಜೆ ಗ್ರಾಮದ ಮೂರು ಮನೆಗಳಲ್ಲಿ ಕಳ್ಳಭಟ್ಟಿ ಪ್ರಕರಣ ಪತ್ತೆಯಾಗಿತ್ತು. ಈ ಹಿನ್ನೆಲೆ ಮತ್ತೆ ದಿಢೀರ್ ಭೇಟಿ ನೀಡಿ ಅಂತಹ ಅಕ್ರಮಗಳು ನಡೆಯುತ್ತಿಲ್ಲ ಎಂಬ ಬಗ್ಗೆ ಖಚಿತಪಡಿಸಿ ಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಕಚೇರಿಯ ಅಬಕಾರಿ ಅಧೀಕ್ಷಕರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಜಿಲ್ಲಾ ಅಬಕಾರಿ ವಿಚಕ್ಷಣಾ ದಳ, ಮಡಿಕೇರಿ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.