ಮಡಿಕೇರಿ, ಆ. 11: ಕೊಡಗಿನ ಕುಲದೇವಿ ಕಾವೇರಿಯ ಉಗಮಸ್ಥಳ ತಲಕಾವೇರಿ ಸನ್ನಿಧಿಯಲ್ಲಿ ವಂಶಪಾರಂಪರೆಯ ಪ್ರಧಾನ ಅರ್ಚಕರಾಗಿದ್ದು, ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರಕ್ಕೆ ದೇಶದ ಪ್ರಧಾನಿಯಿಂದ ಭೂಮಿ ಪೂಜೆಯ ಬೆನ್ನಲ್ಲೇ ತಾ. 5ರ ಸಂಜೆ ಕಾವೇರಿ ಮಾತೆಗೆ ವಿಶೇಷ ಪೂಜೆ ಬಳಿಕ, ತಾ. 6 ರಂದು ಕುಟುಂಬ ಸಮೇತ ಜೀವಂತ ಭೂಸಮಾಧಿಗೊಂಡಿದ್ದ ಟಿ.ಎಸ್. ನಾರಾಯಣಾಚಾರ್ ಅವರ ಮೃತದೇಹ ಇಂದು ಪತ್ತೆಯಾಗಿದೆ.ತಾ. 6 ರಂದು ದುರಂತ ಗೋಚರಿಸಿದ ಬೆನ್ನಲ್ಲೇ ಕೊಡಗು ಪೊಲೀಸ್, ಎನ್‍ಡಿಆರ್‍ಎಫ್, ಅಗ್ನಿಶಾಮಕದಳ, ಎಸ್‍ಡಿಆರ್‍ಎಫ್, ಸ್ಥಳೀಯರ (ಮೊದಲ ಪುಟದಿಂದ) ಸಹಿತ ಕಣ್ಮರೆಯಾದವರ ಪತ್ತೆಗಾಗಿ ವಿಪರೀತ ಮಳೆ - ಗಾಳಿಯೊಂದಿಗೆ ಪ್ರತಿಕೂಲ ಹವಾಮಾನ ನಡುವೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆ ಬೆನ್ನಲ್ಲೇ ತಾ. 8 ರಂದು ದುರ್ಘಟನೆಯ ಮೂರನೆಯ ದಿನ ಪ್ರಧಾನ ಅರ್ಚಕರ ಹಿರಿಯ ಸೋದರ ಆನಂದ ತೀರ್ಥ ಸ್ವಾಮೀಜಿ ಅವರ ಕಳೇಬರವು, ಅವರು ನಿತ್ಯ ಮಲಗುತ್ತಿದ್ದ ಕೋಣೆಯಲ್ಲಿ ಹಾಸಿಗೆ ಸಹಿತ ನಿದ್ದೆಗೆ ಜಾರಿರುವ ಸ್ಥಿತಿಯಲ್ಲೇ ಕಂಡು ಬಂದಿತ್ತು.

ಸತತ 6ನೇ ದಿನ : ಆ ಬಳಿಕ ಮುಂದುವರಿದ ಕಾರ್ಯಾಚರಣೆಯ ಸಂದರ್ಭ ಇದುವರೆಗೆ ಅರ್ಚಕ ಕುಟುಂಬದ ಪೂಜಾ ವಸ್ತುಗಳು, ಹಳೆಯ ಕಾಲದ ನಾಣ್ಯಗಳು, ಧಾರ್ಮಿಕ ಗ್ರಂಥಗಳು ಸೇರಿದಂತೆ, ಆರನೆಯ ದಿನವಾದ ಇಂದು ಹಗಲು ವೇಳೆಯಲ್ಲಿ ಮೂರು ವಾಹನಗಳ ಸಹಿತ ಸಾಕುನಾಯಿ ಕೂಡ ಗೋಚರಿ ಸಿತು. ಟಿ.ಎಸ್. ನಾರಾಯಣಾಚಾರ್ ಅವರ ಶೆಡ್‍ನಲ್ಲಿ ಒಂದು ಒಮ್ನಿಕಾರು, ಇನ್ನೊಂದು ಡಸ್ಟರ್ ವಾಹನ ಹಾಗೂ ದ್ವಿಚಕ್ರವಾಹನ ಸಹಿತ ಶ್ವಾನದ ಕಳೇಬರ ಲಭಿಸಿತು.

ಪ್ರತ್ಯೇಕ ತಂಡ ಶೋಧ : ಈ ನಡುವೆ ಗ್ರಾಮಸ್ಥರ ಅಭಿಪ್ರಾಯ ದೊಂದಿಗೆ ಸುಮಾರು 2 ಕಿ.ಮೀ. ದೂರದಲ್ಲಿ ಹೊಸೂರು ರಾಜ ಎಂಬವರ ಮನೆಯ ಬಳಿಯಿಂದ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಅಗ್ನಿಶಾಮಕದಳ ಹಾಗೂ ಕೊಡಗು ಪೊಲೀಸರ ಪ್ರತ್ಯೇಕ ತಂಡ ದುರ್ಗಮ ಪ್ರಪಾತದಿಂದ ಶೋಧ ಕಾರ್ಯ ಆರಂಭಿಸಿತ್ತು.

2 ಗಂಟೆ ಸುಮಾರಿಗೆ ಗೋಚರ : ಈ ಎಲ್ಲಾ ಬೆಳವಣಿಗೆ ನಡುವೆ ಬ್ರಹ್ಮಗಿರಿ ಶ್ರೇಣಿಯ ಗಜರಾಜಗಿರಿ ಬೆಟ್ಟ ಅಪ್ಪಳಿಸಿ, ಮನೆ ಸಹಿತ ತಾ. 6 ರಂದು ಭೂ ಸಮಾಧಿಯಾಗಿದ್ದ ಟಿ.ಎಸ್. ನಾರಾಯಣಾಚಾರ್ ಅವರ ಪಾರ್ಥೀವ ಶರೀರ ಮಣ್ಣಿನೊಳಗೆ ಹುದುಗಿರುವದು ಇಂದು ಮಧ್ಯಾಹ್ನ ಬಳಿಕ 2 ಗಂಟೆ ಸುಮಾರಿಗೆ ಗೋಚರಿ ಸಿತು. ಆ ಕೂಡಲೇ ಕಾರ್ಯಾಚರಣೆ ತಂಡ ನಿರಂತರ ಹರಸಾಹಸ ದೊಂದಿಗೆ ಮೃತದೇಹವನ್ನು ಹೊರ ತರುವಲ್ಲಿ ಯಶಸ್ವಿಯಾಯಿತು.

ಕಾರ್ಯಾಚರಣೆ ತಂಡಕ್ಕೆ ಪ್ರಶಂಸೆ : ಪ್ರಧಾನ ಅರ್ಚಕರ ಶವ ಪತ್ತೆಯಾದ ಸ್ಥಳದಲ್ಲಿ ಎಲ್ಲವನ್ನು ಖುದ್ದು ಗಮನಿಸುತ್ತಿದ್ದ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ಉಪ ಅಧೀಕ್ಷಕ ಬಿ.ಪಿ. ದಿನೇಶ್‍ಕುಮಾರ್ ಮೊದ ಲಾದವರು ನಾರಾಯಣಾಚಾರ್ ಶವವನ್ನು ಗುರುತಿಸಿ ಹೊರತೆಗೆದ ಕಾರ್ಯ ತಂಡಕ್ಕೆ ಪ್ರಶಂಸೆಯೊಂದಿಗೆ ಶ್ಲಾಘನೆಯ ನುಡಿಯಾಡಿದರು.

ಗ್ರಾಮಸ್ಥರ ಜಮಾವಣೆ : ಅರ್ಚಕ ಕುಟುಂಬದಲ್ಲಿ ಭೂಸಮಾಧಿ ಯೊಂದಿಗೆ ಕಣ್ಮರೆಯಾದವರ ಪತ್ತೆಗಾಗಿ ಕೇಂದ್ರ ಸರಕಾರದ ಎನ್‍ಡಿಆರ್‍ಎಫ್, ರಾಜ್ಯ ಸರಕಾರದ ಎಸ್‍ಡಿಆರ್‍ಎಫ್, ಕೊಡಗು ಪೊಲೀಸ್, ಅಗ್ನಿಶಾಮಕ ದಳ, ಲೋಕೋಪಯೋಗಿ ಹಾಗೂ ಜಿ.ಪಂ. ಸಹಿತ ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ನಡುವೆ, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಗ್ರಾಮಗಳ ಯುವಕರು ಈ ತಂಡಕ್ಕೆ

ಹೆಚ್ಚಿನ ಕಾಳಜಿಯೊಂದಿಗೆ ಸಾಥ್ ನೀಡಿದರು.

ಮಾರ್ಗದರ್ಶನ

ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರೊಂದಿಗೆ ಜಿಲ್ಲಾಧಿಕಾರಿ ಸೇರಿದಂತೆ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ, ಲೋಕೋಪಯೋಗಿ ಅಭಿಯಂತರ ಮದನ್‍ಮೋಹನ್, ಜಿಲ್ಲಾ ಪಂಚಾಯಿತಿ ಅಭಿಯಂತ ರರಾದ ಪ್ರಭು, ಚನ್ನಕೇಶವ, ತಹಶೀಲ್ದಾರ್ ಪಿ.ಎಸ್. ಮಹೇಶ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

-ಚಿತ್ರ, ವರದಿ : ಕೆ.ಡಿ. ಸುನಿಲ್