ಮಡಿಕೇರಿ, ಆ. 11: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ದುರಂತದ ಮರುಘಳಿಗೆಯಿಂದಲೇ ತಲಕಾವೇರಿಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜಿಲ್ಲೆಯ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ವೇಳೆ ಖುದ್ದು ಮೊಕ್ಕಾಂ ಹೂಡಿದ್ದಾರೆ. ಇಂದು ಬೆಳಿಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಭಾಗಮಂಡಲದಲ್ಲಿ ಶೋಧ ಕಾರ್ಯ ಯಶಸ್ವಿಗಾಗಿ ಶ್ರೀ ಭಗಂಡೇಶ್ವರನ ಮೊರೆ ಹೊಕ್ಕು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಆ ಬೆನ್ನಲ್ಲೇ ಟಿ.ಎಸ್. ನಾರಾಯಣಾಚಾರ್ ಅವರ ಕುಟುಂಬದೊಂದಿಗೆ ಈ ಸಂಬಂಧ ಸಮಾಲೋಚನೆ ನಡೆಸಿದರು. ಬಳಿಕ ತಲಕಾವೇರಿಗೆ ತೆರಳಿ ಖುದ್ದು ಕಾರ್ಯಾಚರಣೆಯತ್ತ ಗಮನ ಹರಿಸಿದರು. ಆ ಬೆನ್ನಲ್ಲೇ ಅರ್ಚಕ ಕುಟುಂಬಕ್ಕೆ ಸೇರಿದ ಗೃಹೋಪಯೋಗಿ ವಸ್ತುಗಳು, (ಮೊದಲ ಪುಟದಿಂದ) ಕೃಷಿ ಸಾಮಗ್ರಿಗಳು, ವಾಹನಗಳ ಸಹಿತ ಕೊನೆಗೂ ಟಿ.ಎಸ್. ನಾರಾಯಣಾಚಾರ್ ಪಾರ್ಥಿವ ಶರೀರ ಗೋಚರಿಸಿದಾಗ ನಿಟ್ಟುಸಿರು ಬಿಟ್ಟರು. ಅಲ್ಲದೆ ಶೋಧ ಕಾರ್ಯವನ್ನು ಇನ್ನು ಕಣ್ಮರೆಯಾಗಿರುವ ಮೂವರು ಪತ್ತೆಯಾಗುವ ತನಕ ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದರು. ಸ್ವತಃ ಕಾರ್ಯತಂಡಕ್ಕೆ ಉಣಬಡಿಸಿ ಕೃತಜ್ಞತೆ ಸಲ್ಲಿಸಿದರು.

ವ್ಯಾಪಕ ಪ್ರಶಂಸೆ : ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ತಲಕಾವೇರಿ ದುರಂತ ಬೆನ್ನಲ್ಲೇ, ಸಂಸದ ಪ್ರತಾಪ್‍ಸಿಂಹ ಜತೆಗೂಡಿ ತೀವ್ರ ಮಳೆ - ಗಾಳಿಯ ನಡುವೆ ಕೊಡಗಿನಲ್ಲಿ ಮೊಕ್ಕಾಂ ಹೂಡಿರುವ ಕುರಿತು ಜನವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತಗೊಂಡಿದೆ. ರಾಜಧಾನಿ ಬೆಂಗಳೂರು ಮೂಲದವರಾದ ಸಚಿವ ಸೋಮಣ್ಣ ತಮ್ಮ ಇಳಿವಯಸ್ಸಿನಲ್ಲಿ ಯುವ ಸಂಸದ ಪ್ರತಾಪ್‍ಸಿಂಹ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ತಂಡಕ್ಕೆ ಮಾರ್ಗದರ್ಶನ ನೀಡುತ್ತಾ ಛಲಬಿಡದೆ ಶೋಧ ಕಾರ್ಯಕ್ಕೆ ಸಾಥ್ ನೀಡಿದ್ದು, ಪ್ರತ್ಯಕ್ಷದರ್ಶಿಗಳಿಗಂತೂ ಮತ್ತಷ್ಟು ಸ್ಫೂರ್ತಿಯಾಯಿತು.