ಸೋಮವಾರಪೇಟೆ,ಆ.11: ಭಾರೀ ಗಾಳಿ ಮಳೆಯಿಂದ ಹಾನಿಗೊಳಗಾಗಿರುವ ತಾಲೂಕಿನ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಪ್ರದೇಶಗಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎರಡೂ ಹೋಬಳಿಗಳ ವ್ಯಾಪ್ತಿಯಲ್ಲಿ ಹಾನಿಗೊಳಗಾಗಿರುವ ಸಾರ್ವಜನಿಕ ರಸ್ತೆ, ಮಣ್ಣು ಕುಸಿತ, ಮನೆಗಳಿಗೆ ಹಾನಿಯಾಗಿರುವ ಸ್ಥಳಗಳನ್ನು ವೀಕ್ಷಿಸಿದರು. ಮನೆಗಳಿಗೆ ಹಾನಿಯಾಗಿರುವ ಪ್ರಕರಣಗಳನ್ನು ತುರ್ತಾಗಿ ಪರಿಗಣಿಸಿ, ಪರಿಹಾರ ಕಾರ್ಯ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿ ಗ್ರಾಮಕ್ಕೆ ತೆರಳುವ ಮುಖ್ಯರಸ್ತೆಯ ಬದಿಯಲ್ಲಿ ಬರೆಕುಸಿತವಾಗಿರುವದನ್ನು ವೀಕ್ಷಿಸಿದ ರಂಜನ್, ಮಳೆಹಾನಿ ಪರಿಹಾರದಲ್ಲಿ ಅಗತ್ಯ ಕಾಮಗಾರಿ ಕೈಗೊಳ್ಳುವಂತೆ ಅಭಿಯಂತರರಿಗೆ ಸೂಚಿಸಿದರು.

ರಸ್ತೆ ಬದಿಯಲ್ಲಿ ಹರಿಯುವ ತೋಡಿನಿಂದಾಗಿ ಬರೆ ಕುಸಿದಿದ್ದು, ತಕ್ಷಣಕ್ಕೆ ಎಂ.ಸ್ಯಾಂಡ್‍ನ್ನು ಚೀಲಗಳಲ್ಲಿ ತುಂಬಿ ತಡೆಗೋಡೆ ನಿರ್ಮಿಸಲಾಗಿದೆ. ಇದು ತಾತ್ಕಾಲಿಕವಾಗಿದ್ದು ಶಾಶ್ವತ ಪರಿಹಾರ ಅಗತ್ಯವಿದೆ. ತಪ್ಪಿದ್ದಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಕುಸಿಯಲಿದೆ ಎಂದು ಸ್ಥಳೀಯ ನಿವಾಸಿ ಎಸ್.ಬಿ. ಭರತ್‍ಕುಮಾರ್ ಅವರು, ಶಾಸಕರ ಗಮನ ಸೆಳೆದರು.

ಇದರೊಂದಿಗೆ ಸೇತುವೆಗೂ ಅಪಾಯ ತಂದೊಡ್ಡಿದ್ದು, ಪರಿಹಾರ ಕಾರ್ಯ ಕೈಗೊಳ್ಳದಿದ್ದಲ್ಲಿ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸ್ಥಳೀಯರು ಗಮನಕ್ಕೆ ತಂದರು. ಮುಂದಿನ ಕ್ರಿಯಾಯೋಜನೆಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ಶಾಸಕರು ಜಿ.ಪಂ. ಅಭಿಯಂತರ ವೀರೇಂದ್ರ ಅವರಿಗೆ ಸೂಚಿಸಿದರು.

ಇದೇ ಗ್ರಾ.ಪಂ. ವ್ಯಾಪ್ತಿಯ ಕೋಟೆಯೂರು ಕೆರೆಯ ಏರಿ ಕುಸಿಯುತ್ತಿರುವದನ್ನು ಶಾಸಕರು ವೀಕ್ಷಿಸಿದರು. ಚೆನ್ನಾಪುರ ಕಾಲೋನಿಯಲ್ಲಿ ಭಾರೀ ಮಳೆಯಿಂದಾಗಿ ಹಾನಿಗೀಡಾಗಿರುವ ಗೌರಮ್ಮ ದೊಡ್ಡಯ್ಯ ಅವರ ಮನೆಯನ್ನು ವೀಕ್ಷಿಸಿದ ರಂಜನ್, ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೇ, ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯವರಿಗೆ ಸೂಚಿಸಿದರು. ಈಜಲಪುರ ಗ್ರಾಮದಲ್ಲಿ ಸಂಪೂರ್ಣವಾಗಿ ಕುಸಿತಗೊಂಡಿರುವ ಸಿದ್ದಮ್ಮ ಈರಯ್ಯ ಅವರ ಮನೆ, ಬೆಸೂರು ಗ್ರಾಮ ಪಂಚಾಯಿತಿಯ ಬಿಟ್ಟಿಗನಹಳ್ಳಿ ಗ್ರಾಮದ ಮಂಜುಳಾ ಮಂಜುನಾಥ್ ಅವರ ಮನೆ, ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದ್ರೆ ಗ್ರಾಮದಲ್ಲಿ ಕುಸಿದಿರುವ ಕೆಂಚಮ್ಮ ನಿಂಗಯ್ಯ ಅವರ ಮನೆ, ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತೂರು ಗ್ರಾಮದ ಸುಶೀಲಮ್ಮ ಅವರಿಗೆ ಸೇರಿದ ಮನೆ, ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಬಡುಬನಹಳ್ಳಿ ಸಾವಿತ್ರಿ ಅವರುಗಳ ಮನೆಗಳು ಗಾಳಿ, ಮಳೆಯಿಂದ ಹಾನಿಯಾಗಿರುವದನ್ನು ಶಾಸಕರು ಪರಿಶೀಲಿಸಿದರು.

ಮಳೆಯಿಂದಾಗಿ ವಾಸಕ್ಕೆ ಅಯೋಗ್ಯವಾಗಿರುವ ಮನೆಗಳಿಗೆ ಹೆಚ್ಚಿನ ಪರಿಹಾರ ಒದಗಿಸಲಾಗು ವದು. ಕಂದಾಯ ಇಲಾಖೆಯವರು ವಾಸ್ತವಾಂಶವನ್ನು ವರದಿ ಮಾಡಬೇಕು. ಸರ್ಕಾರದಿಂದ ಸಂತ್ರಸ್ಥರಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವದು ಎಂದು ಶಾಸಕರು ತಿಳಿಸಿದರು.

ಮಳೆಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಜಿ.ಪಂ. ಸದಸ್ಯೆ ಸರೋಜಮ್ಮ, ತಾ.ಪಂ. ಸದಸ್ಯ ಕುಶಾಲಪ್ಪ, ತಾಲೂಕು ತಹಸೀಲ್ದಾರ್ ಗೋವಿಂದರಾಜು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್, ಸಮಾಜಕಲ್ಯಾಣ ಇಲಾಖಾಧಿಕಾರಿ ಶೇಖರ್, ಕಂದಾಯ ಅಧಿಕಾರಿಗಳು, ಲೋಕೋಪಯೋಗಿ ಇಲಾಖಾ ಎಇಇ ಮೋಹನ್‍ಕುಮಾರ್, ಜಿ.ಪಂ. ಎಇಇ ಟಿ.ಪಿ. ವೀರೇಂದ್ರ,ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಕಿಬ್ಬೆಟ್ಟ ಮಧು, ಎಸ್.ಎನ್. ರಘು, ಭುವನೇಶ್ವರಿ, ಗೌಡಳ್ಳಿ ಸುನಿಲ್, ಕೊಡ್ಲಿಪೇಟೆ ನಾಗರಾಜು, ಬಾಬುರಾಜೇಂದ್ರ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.