ಕುಶಾಲನಗರ, ಆ. 11: ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಓರ್ವ ಸದಸ್ಯ ಮತ್ತು ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ.ಪ.ಪಂ. ಸದಸ್ಯರು, ಅಧಿಕಾರಿ, ಸಿಬ್ಬಂದಿಗಳಿಗೆ ಕೋವಿಡ್ ತಪಾಸಣೆ ಮಾಡಿದ ಸಂದರ್ಭ ಮೂರು ಜನರಿಗೆ (ಮೊದಲ ಪುಟದಿಂದ) ಪಾಸಿಟಿವ್ ಬಂದಿದ್ದು, ಉಳಿದಂತೆ ಎಲ್ಲರಿಗೆ ನೆಗೆಟಿವ್ ವರದಿ ದೃಢಪಟ್ಟಿದೆ ಎಂದು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜು ಮಾಹಿತಿ ನೀಡಿದ್ದಾರೆ. ಮೂರು ದಿನಗಳ ಹಿಂದೆ ಮುಖ್ಯಾಧಿಕಾರಿಗಳು ಉಸ್ತುವಾರಿ ಸಚಿವರೊಂದಿಗೆ ನಗರದ ಬಡಾವಣೆಗಳಲ್ಲಿ ಸಂಚರಿಸಿದ್ದರು. ಈ ಸಂದರ್ಭ ಕ್ಷೇತ್ರ ಶಾಸಕರು, ಸಂಸದ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಜೊತೆಗಿದ್ದರು. ಕೊರೊನಾ ಸೋಂಕಿತ ಮೂವರನ್ನು ಕೂಡಿಗೆ ಕೋವಿಡ್ ಸೆಂಟರ್‍ಗೆ ದಾಖಲಿಸಿ ಪ.ಪಂ. ಕಚೇರಿ ಯನ್ನು 48 ಗಂಟೆಗಳ ಕಾಲ ಸೀಲ್‍ಡೌನ್ ಮಾಡಲಾಗುವುದು ಎಂದು ತಹಶೀಲ್ದಾರ್ ಗೋವಿಂದ ರಾಜು ಅವರು ತಿಳಿಸಿದ್ದಾರೆ. ಸೋಂಕಿತ ವ್ಯಕ್ತಿಗಳ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರ ವಿವರ ಕಲೆಹಾಕಲಾಗುತ್ತಿದೆ.