ತಲಕಾವೇರಿಯಲ್ಲಿ ಭಯಾನಕ ದುರಂತದೊಂದಿಗೆ ಜೀವಂತ ಸಮಾಧಿಯಾಗಿ, ತಾ. 8 ರಂದು ಕಾರ್ಯಾಚರಣೆ ವೇಳೆ ಮೊದಲಿಗೆ ಪತ್ತೆಯಾಗಿದ್ದ ಅರ್ಚಕ ಕುಟುಂಬದ ಹಿರಿಯರಾದ ಆನಂದ ತೀರ್ಥ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಇಂದು ನೆರವೇರುವದರೊಂದಿಗೆ ಪಂಚಭೂತಗಳಲ್ಲಿ ಲೀನವಾದರು. ಪ್ರಧಾನ ಅರ್ಚಕ ಡಿ.ಎಸ್. ನಾರಾಯಣಾಚಾರ್ ಅವರ ಪುತ್ರಿಯರ ಕೋರಿಕೆ ಮೇರೆಗೆ ಜಿಲ್ಲಾಡಳಿತವು, ಈ ಮೃತದೇಹವನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಶವಗಾರದ ಸಂಸ್ಕರಣ ಘಟಕದಲ್ಲಿ ಇರಿಸಿತ್ತು. ಇಂದು ಇಲ್ಲಿಂದ ತಲಕಾವೇರಿಗೆ ಕೊಂಡೊಯ್ದು, ಆನಂದ ತೀರ್ಥರಿಗೆ ಸಂಬಂಧಿಸಿದ ತೋಟದಲ್ಲಿ (ಬಟ್ಟೆಕಾಡು) ಕುಟುಂಬಸ್ಥರು ಹಾಗೂ ಬಂಧುಗಳ ಸಮ್ಮುಖ ಅಂತ್ಯಕ್ರಿಯೆ ನಡೆಸಲಾಯಿತು. ಆನಂದ ತೀರ್ಥರ ಸೋದರ ಸಂಬಂಧಿ ಸುಧಾಕರ ಆಚಾರ್ ಮೃತರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.