ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ಟಿ.ಎಸ್. ನಾರಾಯಣಾಚಾರ್ ಇನ್ನು ನೆನಪು ಮಾತ್ರ ತಾ. 6 ರಂದು ಸಂಭವಿಸಿದ ದುರಂತದಲ್ಲಿ ಪತ್ನಿ ಸಹಿತ ಕಣ್ಮರೆಯಾಗಿದ್ದ ಅವರ ಮೃತದೇಹ ಇಂದು ಪತ್ತೆಯಾಗುವದರೊಂದಿಗೆ, ಕುಟುಂಬ ವರ್ಗದ ಸಮ್ಮುಖ ಮೃತರ ತೋಟ ‘ಮತ್ಸರೆ’ಯಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಆ ಮೂಲಕ ಕಳೆದ ಐದು ದಶಕಗಳಿಗೂ ಹೆಚ್ಚಿನ ಸುದೀರ್ಘ ಅವಧಿಗೆ ತಾಯಿ ಕಾವೇರಿ ಮಾತೆ ಹಾಗೂ ಅಗಸ್ತ್ಯೇಶ್ವರ, ಮಹಾಗಣಪತಿ ಸನ್ನಿಧಿಗಳಿಗೆ ನಿತ್ಯಪೂಜೆ ಸಲ್ಲಿಸುತ್ತಿದ್ದ ಅರ್ಚಕ ಕುಟುಂಬದ ಕೊಂಡಿಯೊಂದು ಕಣ್ಮರೆಯಾಯಿತು.
ತಲಕಾವೇರಿ ಸೀತಾರಾಮಾಚಾರ್ ನಾರಾಯಣಾಚಾರ್ ಅವರು ಕ್ಷೇತ್ರದ ಅರ್ಚಕರಷ್ಟೇ ಆಗಿರದೆ, ಸ್ವತಃ ಏಲಕ್ಕಿ ಬೆಳೆಗಾರರಾಗಿದ್ದರು. ಕಾಫಿ, ಒಳ್ಳೆಮೆಣಸು ಸೇರಿದಂತೆ ಉತ್ತಮ ಕೃಷಿಕರೂ ಆಗಿದ್ದರು. ಭಾಗಮಂಡಲದ ಕೊಡಗು ಜೇನು ಕೃಷಿಕರ ಸಹಕಾರ ಸಂಘ, ಕೊಡಗು ಏಲಕ್ಕಿ ಬೆಳೆಗಾರರ ಸಹಕಾರ ಸಂಘ, ಭಾಗಮಂಡಲ ವ್ಯವಸಾಯ ಸೇವಾ ಸಹಕಾರ ಸಂಘ ಸೇರಿದಂತೆ ಈ ಎಲ್ಲಾ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಆಡಳಿತ ನಿರ್ದೇಶಕರಾಗಿ ಬದುಕಿನುದ್ದಕ್ಕೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ರಾಷ್ಟ್ರೀಯ ವಿಚಾರಧಾರೆಯ ಆರ್ಎಸ್ಎಸ್ನೊಂದಿಗೆ 1964ರಿಂದ ನಿಕಟ ಒಡನಾಟ ಹೊಂದಿದ್ದ ನಾರಾಯಣಾಚಾರ್ ಕುಟುಂಬ, ಶ್ರೀರಾಮ ಜನ್ಮಭೂಮಿ ಮುಕ್ತಿ ಆಂದೋಲನದೊಂದಿಗೆ, ಇದೇ ತಾ. 5 ರಂದು ಭೂಮಿ ಪೂಜೆ ಕ್ಷಣದಲ್ಲಿಯೂ ಅಯೋಧ್ಯೆಯಲ್ಲಿ ಭವ್ಯ ಮಂದಿರಕ್ಕಾಗಿ ತುಡಿತ ಹೊಂದಿದ್ದರು.
1990ರ ದಶಕದಲ್ಲಿ ಸಕ್ರೀಯವಾಗಿ ಈ ಆಂದೋಲನದಲ್ಲಿ ಪಾಲ್ಗೊಂಡು ಹಿಂದೂ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಅವರು, ಭಾಗಮಂಡಲ ಮಂಡಲ ಪ್ರಧಾನರಾಗಿ, ಭಾರತೀಯ ಸಂಬಾರ ಮಂಡಳಿ ಸದಸ್ಯರಾಗಿ ಅನೇಕ ಸಮಾಜಮುಖಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು.
ತಾ. 6 ರಂದು ಪತ್ನಿ ಶಾಂತಾ, ಸೋದರ ಆನಂದತೀರ್ಥ, ಸಹಾಯಕರಾದ ಶ್ರೀನಿವಾಸ್ ಪಡಿಲಾಯ ಹಾಗೂ ರವಿಕಿರಣ್ ಸಹಿತ ಭೂಸಮಾಧಿಯೊಂದಿಗೆ ಜೀವಂತ ಕಣ್ಮರೆಯಾಗಿದ್ದರು. ಇಂದು ಪಾರ್ಥೀವ ಶರೀರ ಗೋಚರವಾಗಿ ಅಂತ್ಯಸಂಸ್ಕಾರದೊಂದಿಗೆ ಪಂಚಭೂತಗಳಲ್ಲಿ ಲೀನಗೊಳ್ಳುವ ಮೂಲಕ ತಮ್ಮ ಇಹಲೋಕ ಯಾತ್ರೆ ಪೂರೈಸಿದರು. ಇನ್ನು ತಲಕಾವೇರಿ ನಾರಾಯಣಾಚಾರ್ ನೆನಪು ಮಾತ್ರ. -ಶ್ರೀಸುತ