ಗೋಣಿಕೊಪ್ಪಲು, ಆ. 10: ಈ ಬಾರಿ ಸುರಿದ ಆಶ್ಲೇಷ ಮಳೆಗೆ ಮಳೆ ಹಾಗೂ ಭಾರಿ ಗಾಳಿಗೆ ಗೋಣಿಕೊಪ್ಪ ಚೆಸ್ಕಾಂನ ಉಪ ವಿಭಾಗಕ್ಕೆ ಒಳಪಡುವ ಪೊನ್ನಂಪೇಟೆ, ಹುದಿಕೇರಿ, ಶ್ರೀಮಂಗಲ, ಬಾಳೆಲೆಯ ನಾಲ್ಕು ಹೋಬಳಿಗಳಲ್ಲಿ 295ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿ ಹಾನಿಯಾಗಿದ್ದು, ಇದರೊಂದಿಗೆ 14 ಟ್ರಾನ್ಸ್‍ಫಾರ್ಮರ್‍ಗಳು ಸೇರಿದಂತೆ ಹಲವು ಕಿ.ಮೀ.ಗಳ ಉದ್ದದ ವಿದ್ಯುತ್ ತಂತಿಗಳು ತುಂಡಾಗಿ ನಷ್ಟಗೊಂಡಿವೆ. ಪ್ರವಾಹದಿಂದ ದ್ವೀಪದಂತಾಗಿರುವ ಗ್ರಾಮಗಳ ಜನರು ಇನ್ನೂ ಕೂಡ 4 ದಿನಗಳ ಕಾಲ ಕತ್ತಲೆಯಲ್ಲಿಯೇ ಕಾಲಕಳೆಯಬೇಕಾಗಿದೆ. ಮಳೆಯೊಂದಿಗೆ ಬೀಸಿದ ಗಾಳಿಗೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಕಂಬಗಳು ನೆಲದ ಪಾಲಾಗಿವೆ. ನಗರ ಪ್ರದೇಶಗಳಾದ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ವಿದ್ಯುತ್ ಮಾರ್ಗಗಳನ್ನು ಎರಡೇ ದಿನದಲ್ಲಿ ದುರಸ್ತಿಪಡಿಸಲು ಯಶಸ್ವಿಯಾಗಿರುವ ಸಿಬ್ಬಂದಿಗಳು ಗ್ರಾಮೀಣ ಭಾಗಕ್ಕೆ ವಿದ್ಯುತ್ ನೀಡಲು ಕಷ್ಟಪಡುತ್ತಿದ್ದಾರೆ.

4 ಹೋಬಳಿಯ ನೂರಾರು ಕಂಬಗಳು ಹಾಗೂ ಟ್ರಾನ್ಸ್‍ಫಾರ್ಮ್‍ರ್‍ಗಳಿಗೆ ಹಾನಿ ಆಗಿರುವುದರಿಂದ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿರುವ ಕುಗ್ರಾಮಗಳಿಗೂ ಬೆಳಕು ಮೂಡಿಸಲು ಚೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹರ ಸಾಹಸ ಪಡುತ್ತಿದ್ದಾರೆ. ಈ ಭಾಗದಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ವಿದ್ಯುತ್ ಕಂಬದ ಸಮೀಪವಿದ್ದ ಭಾರಿ ಗಾತ್ರದ ಮರಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ಹಾಗೂ ಎಕ್ಸ್‍ಪ್ರೆಸ್ ಲೈನ್‍ನ ಭಾರಿ ಗಾತ್ರದ ವಿದ್ಯುತ್ ತಂತಿಗಳು ನೆಲಕ್ಕುರುಳಿವೆ. ಇದರಿಂದ ಈ ಭಾಗದಲ್ಲಿ 295ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕಳೆದ 7 ದಿನಗಳಿಂದ ಬಾಳೆಲೆ, ಕಿರುಗೂರು, ನಲ್ಲೂರು, ಹುದಿಕೇರಿ, ಬಿರುನಾಣಿ, ಶ್ರೀಮಂಗಲ, ಸೇರಿದಂತೆ ಇನ್ನಿತರ ಗ್ರಾಮಗಳಿಗೆ ವಿದ್ಯುತ್ ಕಲ್ಪಿಸಲು ಈಗಾಗಲೇ ಖಾಯಂ ಸಿಬ್ಬಂದಿಗಳೊಂದಿಗೆ ತಾತ್ಕಾಲಿಕವಾಗಿ ನೇಮಕಗೊಂಡಿರುವ 25ಕ್ಕೂ ಅಧಿಕ ಚೆಸ್ಕಾಂ ಸಿಬ್ಬಂದಿಗಳು ಮುಂಜಾನೆಯಿಂದಲೇ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ. ನಗರ ಪ್ರದೇಶಗಳಾದ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ನಿರಂತರ ವಿದ್ಯುತ್ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದು ಮಳೆ ನೀರನ್ನೇ ಅವಲಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಫಿ ತೋಟದೊಳಗೆ ಮರಗಳು ಉರುಳಿ ಬಿದ್ದಿರುವುದರಿಂದ ಈ ಭಾಗದಲಿರುವ ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡಲು ಕಾಡಾನೆಗಳ ಹಾವಳಿ ಸಿಬ್ಬಂದಿಗಳಿಗೆ ಎದುರಾಗಿದೆ. ಆದರೂ ಭಯದಿಂದಲೇ ವಿದ್ಯುತ್ ತಂತಿಯನ್ನು ಸರಿಪಡಿಸಲು ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಕಳೆದ 3 ದಿನಗಳಿಂದ ವರುಣನ ಆರ್ಭಟ ಕಡಿಮೆ ಇರುವುದರಿಂದ ಚೆಸ್ಕಾಂ ಸಿಬ್ಬಂದಿಗಳಿಗೆ ಕೆಲಸ ನಿರ್ವಹಿಸಲು ಅನುಕೂಲವಾಗಿದೆ. ಕಾಫಿ ತೋಟದೊಳಗೆ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವುದರಿಂದ ಇದನ್ನು ಸರಿಪಡಿಸಲು ಬಹುತೇಕ ಸಮಯಗಳು ವ್ಯರ್ಥವಾಗುತ್ತಿವೆ. ಹಲವೆಡೆ ದುರಸ್ತಿ ಕಾರ್ಯ ನಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಸಿದ್ದಾಪುರ: ಪ್ರವಾಹಕ್ಕೆ ಸಿಲುಕಿ ಕರಡಿಗೋಡಿನ ನದಿತೀರದ ನಿವಾಸಿಯೊಬ್ಬರ ಮನೆ ಕುಸಿದು ನೆಲಸಮಗೊಂಡಿದೆ. ಕರಡಿಗೋಡು ಗ್ರಾಮದ ನಿವಾಸಿ ಅಜೀಜ್ ಎಂಬವರಿಗೆ ಸೇರಿದ ಮನೆಯು ಪ್ರವಾಹದ ನೀರಿನಿಂದ ಮುಳುಗಡೆ ಗೊಂಡಿತ್ತು. ಇದೀಗ ನೀರು ನಿಂತು ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿದ್ದಾಪುರ: ಕಳೆದ ಕೆಲವು ದಿನಗಳಿಂದ ಸುರಿದ ಮಹಾಮಳೆಗೆ ಸಿದ್ದಾಪುರ ವ್ಯಾಪ್ತಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ ಅಲ್ಲದೆ ವಿದ್ಯುತ್ ತಂತಿಗಳ ಮೇಲೆ ಗಾಳಿ ಮಳೆಗೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮಳೆಯ ನಡುವೆಯೇ ಸಿದ್ದಾಪುರ ವ್ಯಾಪ್ತಿಯ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಜೂನಿಯರ್ ಇಂಜಿನಿಯರ್ ಚಂಪಾ ನೇತೃತ್ವದಲ್ಲಿ ಸಿಬ್ಬಂದಿಗಳು ಕಂಬಗಳನ್ನು ದುರಸ್ತಿಪಡಿಸಿ ತಂತಿಗಳ ಮೇಲೆ ಬಿದ್ದ ಮರಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಗುಹ್ಯ ಭಾಗದಲ್ಲಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಮರಗಳನ್ನು ಚೆಸ್ಕಾಂ, ಸಿಬ್ಬಂದಿ ಹಾಗೂ ಗ್ರಾಮಸ್ಥರು ಸೇರಿ ತೆರವುಗೊಳಿಸಿ ದುರಸ್ತಿ ಪಡಿಸಿದರು. ಇದಲ್ಲದೆ ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಕೂಡ ಸಾಕಷ್ಟು ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಚೆಟ್ಟಳ್ಳಿ ಭಾಗದ ಜೂನಿಯರ್ ಇಂಜಿನಿಯರ್ ದಿನೇಶ್ ಅವರ ನೇತೃತ್ವದಲ್ಲಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲಾಯಿತು.

ಸಂಕಷ್ಟದಲ್ಲಿ ಬೇತ್ರಿ ಗ್ರಾಮಸ್ಥರು

ಕಡಂಗ: ವೀರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮವು ಸಂಪೂರ್ಣ ಜಲಾವೃತಗೊಂಡಿದ್ದು, ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾದ ಕಾರಣ ನದಿ ನೀರು ಇಳಿದಿದೆ. ಜನರೇಟರ್ ಮೂಲಕ ನೀರು ಹರಿಸಿ ಗ್ರಾಮಸ್ಥರು ಮಸೀದಿ, ದೇವಸ್ಥಾನ, ಮನೆಗಳನ್ನು ಸ್ವಚ್ಛಗೊಳಿಸಿದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಎಮ್ಮೆಮ್ಮಾಡು ಶಾಖೆಯ ಹೆಲ್ಪ್‍ಡೆಸ್ಕ್ ಕಾರ್ಯಕರ್ತರು, ಎಸ್‍ಕೆಎಸ್ಸೆಸ್ಸೆಫ್ ಅಯ್ಯಂಗೇರಿ ಶಾಖೆಯ ವಿಖಾಯ ಕಾರ್ಯಕರ್ತರು ಸಹಾಯ ಹಸ್ತ ಚಾಚಿದರು.

ಸ್ಥಳಕ್ಕಾಗಮಿಸಿದ ಕಂದಾಯ ಅಧಿಕಾರಿಗಳು, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಪಿಡಿಒ ಪರಿಶೀಲಿಸಿ ನಷ್ಟ ಪರಿಹಾರ ನೀಡುವುದಾಗಿ ತಿಳಿಸಿದರು. ಗ್ರಾಮದ ಹಲವು ಮನೆಗಳು ಹಾನಿಗೊಳಗಾಗಿದ್ದು, ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ.

ವರದಿ: ಹೆಚ್.ಕೆ. ಜಗದೀಶ್, ವಾಸು, ತಿಮ್ಮಯ್ಯ, ನೌಫಲ್