ವೀರಾಜಪೇಟೆ, ಆ. 10: ಕೋವಿಡ್-19 ಪ್ರಯುಕ್ತ ಕಳೆದ 136 ದಿನಗಳಿಂದ ಪೂರ್ಣವಾಗಿ ಬಂದ್ ಮಾಡಲಾಗಿದ್ದ ಕೊಡಗು ಕೇರಳ ಅಂತರರಾಜ್ಯ ಸಂಪರ್ಕದ ರಸ್ತೆಯ ಮಾಕುಟ್ಟ ಚೆಕ್‍ಪೋಸ್ಟ್‍ನ್ನು ಕರ್ನಾಟಕ ಕೊಡಗು ಕೇರಳ ರಾಜ್ಯ ಸಂಚಾರಕ್ಕೆ ಮುಕ್ತವಾಗಿ ತೆರವು ಮಾಡಲಾಗಿದ್ದು ಈ ಅಂತರರಾಜ್ಯ ರಸ್ತೆಯಲ್ಲಿ ಸರಕು ವಾಹನ, ಬಸ್‍ಗಳು ಸೇರಿದಂತೆ ಎಲ್ಲ ರೀತಿಯ ವಾಹನಗಳನ್ನು ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.

ಕೇಂದ್ರ ಸರಕಾರದ ಎಸ್.ಓ.ಪಿ. ಅಡಿಯಲ್ಲಿ ರಾಜ್ಯ ಸರಕಾರದ ಲಾಕ್‍ಡೌನ್ 3.02 ಅಡಿಯಲ್ಲಿ ಕೊಡಗಿನ ಗಡಿಭಾಗವಾದ ಕುಟ್ಟ ಚೆಕ್‍ಪೋಸ್ಟ್ ಹಾಗೂ ಮಾಕುಟ್ಟ ಚೆಕ್‍ಪೋಸ್ಟ್ ಬಂದ್‍ನ್ನು ತೆರವುಗೊಳಿಸಲಾಗಿದ್ದು ಮುಕ್ತಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ತಿಳಿಸಿದರು.

ನಿನ್ನೆ ದಿನ ಮಾಕುಟ್ಟ ಚೆಕ್‍ಪೋಸ್ಟ್‍ನ ಬಂದ್‍ನ್ನು ತೆರವು ಮಾಡಿದ ತಕ್ಷಣ ಕೊಡಗಿನಿಂದ ಕೇರಳಕ್ಕೆ ನೂರಾರು ಸರಕು ವಾಹನಗಳು, ಖಾಸಗಿ ವಾಹನಗಳು, ಟ್ಯಾಕ್ಸಿಗಳು ಸಂಚರಿಸಿದವು.

ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುವುದನ್ನು ತಡೆಯಲು ರಾಜ್ಯ ಸರಕಾರದ ಆದೇಶದಂತೆ ಕೊಡಗಿನ ಎಲ್ಲ ಗಡಿಗಳನ್ನು ಬಂದ್ ಮಾಡಲಾಗಿತ್ತು. ಕೊಡಗಿನ ಗಡಿಗಳ ಪೈಕಿ ಮಾಕುಟ್ಟ ಚೆಕ್‍ಪೋಸ್ಟ್, ಕುಟ್ಟ ಚೆಕ್‍ಪೋಸ್ಟ್ ಪ್ರಮುಖವಾದುದ್ದಾಗಿದ್ದು ಈ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸರಕು ವಾಹನಗಳು, ಬಸ್‍ಗಳು ಸೇರಿದಂತೆ ಇತರ ವಾಹನಗಳು ಸಂಚರಿಸುತ್ತಿದ್ದವು. ಕೋವಿಡ್-19 ಹಿನ್ನೆಲೆಯಲ್ಲಿ ಗಡಿಭಾಗದ ಗೇಟ್‍ಗಳು ಬಂದ್ ಆಗಿದ್ದರಿಂದ ಕೊಡಗು ಕೇರಳದ ಸಂಬಂಧಕ್ಕೂ ಧಕ್ಕೆಯಾಗಿದ್ದು, ವಾಣಿಜ್ಯ ವ್ಯವಹಾರಗಳು ಪೂರ್ಣವಾಗಿ ಕುಂಠಿತಗೊಂಡಿತ್ತು. ಈಗ ಕೊಡಗಿನ ಚೆಕ್‍ಪೋಸ್ಟ್‍ಗಳ ಬಂದ್ ತೆರವುಗೊಂಡಿದ್ದರಿಂದ ಮುಂದೆ ಕೊಡಗು ಕೇರಳದ ವಾಣಿಜ್ಯ ವ್ಯವಹಾರಗಳು ಚೇತರಿಕೆಗೊಳ್ಳಲಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕೇರಳದ ರಾಜ್ಯ ಸಾರಿಗೆ ಸಂಸ್ಥೆ ಹಿಂದಿನಂತೆ ಪ್ರಯಾಣಿಕರ ಬಸ್‍ಗಳನ್ನು ಓಡಿಸಲು ಸಿದ್ಧತೆ ನಡೆಸಿದ್ದು, ಸಾರಿಗೆ ಸಂಸ್ಥೆಯ ಮೂಲದ ಪ್ರಕಾರ ತಾ. 12 ರಿಂದ ಎರಡು ರಾಜ್ಯಗಳ ಸಾರಿಗೆ ಸಂಸ್ಥೆ ಬಸ್‍ಗಳು ಅಂತರರಾಜ್ಯ ಓಡಾಟಕ್ಕೆ ಸಿದ್ಧತೆ ನಡೆಸಿವೆ.

ಕೇರಳ ಆಡಳಿತ ತಕರಾರು

ಕೊಡಗು-ಕೇರಳದ ಅಂತರರಾಜ್ಯ ಚೆಕ್‍ಪೋಸ್ಟ್‍ಗಳ ಬಂದ್‍ನ ಕೇಂದ್ರ ಹಾಗೂ ರಾಜ್ಯ ಸರಕಾರದ ನಿಯಮಾನುಸಾರವಾಗಿ ತೆರವುಗೊಳಿಸಿರುವುದರಿಂದ ಕೇರಳದಿಂದ ಕೊಡಗಿಗೆ ಬರುವ ವಾಹನಗಳು ಕೊಡಗಿನಿಂದ ಕೇರಳಕ್ಕೆ ತೆರಳುವ ವಾಹನಗಳು ಮುಕ್ತ ಸಂಚಾರಕ್ಕೆ ಅವಕಾಶ ಮಾಡಲಾಗಿದ್ದರೂ ಕೇರಳದ ಗಡಿ ಭಾಗದಲ್ಲಿರುವ ಇರಿಟ್ಟಿ ತಾಲೂಕು ಆಡಳಿತ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಕೇಂದ್ರ ಸರಕಾರದ ಎಸ್.ಓ.ಪಿ. ಅಡಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಎಲ್ಲ ವಾಹನಗಳಿಗೆ ಮುಕ್ತ ಅವಕಾಶ ಕಲ್ಪಿಸಿರುವುದರಿಂದ ವಾಹನಗಳ ಸಂಚಾರಕ್ಕೆ ಯಾವುದೇ ಆಡಳಿತದ ನಿರ್ಬಂಧ ಸಾಧ್ಯವಿಲ್ಲ ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ.

ಬಂದ್ ಆಗಿದ್ದ ಮಾಕುಟ್ಟ ಚೆಕ್‍ಪೋಸ್ಟ್‍ನ್ನು ಓಪನ್ ಮಾಡುವ ಸಂದರ್ಭದಲ್ಲಿ ತಹಶೀಲ್ದಾರ್ ನಂದೀಶ್, ಕಂದಾಯ ನಿರೀಕ್ಷಕ ಪಳಂಗಪ್ಪ ಪ್ರಕಾಶ್, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಯತೀಶ್, ಪೊಲೀಸರು ಹಾಜರಿದ್ದರು.