ಸಿದ್ದಾಪುರ, ಆ. 10: ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿದ್ದಾಪುರ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಹಮಾಲಿ ಕಾರ್ಮಿಕರ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಹಮಾಲಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಸರಕಾರವು ಅಸಂಘಟಿತ ಕಾರ್ಮಿಕರಾದ ಹಮಾಲಿ ಕಾರ್ಮಿಕರಿಗೆ ವಿಮೆ ಮಾಸಿಕ ರೂ. 7500 ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಭರತ್ ಒತ್ತಾಯಿಸಿದರು. ಈ ಸಂದರ್ಭ ಹಮಾಲಿ ಕಾರ್ಮಿಕ ಸಂಘಟನೆಯ ಸಿದ್ದಾಪುರ ಘಟಕದ ಅಧ್ಯಕ್ಷ ಅಯ್ಯಾ ರಾಜೇಶ್ ಇನ್ನಿತರರು ಹಾಜರಿದ್ದು, ಸಿದ್ದಾಪುರದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.