ಕಣಿವೆ, ಆ. 10: ಅಂತೂ ಇಂತೂ ಈ ಬಾರಿಯೂ ಸತತವಾಗಿ ಮೂರನೇ ಬಾರಿಯೂ ಪ್ರಕೃತಿ ಮುನಿಸಿಗೆ ಕೊಡಗಿನಲ್ಲಿ ಕಾವೇರಿ ನದಿ ಪ್ರವಹಿಸಿದ ಪರಿಣಾಮ ನದಿಪಾತ್ರದ ತಗ್ಗು ಪ್ರದೇಶಗಳ ನಿವಾಸಿಗಳಲ್ಲಿ ಆಕ್ರಂದನ ಇಮ್ಮಡಿಯಾಗಿದೆ. ಕಳೆದ ಒಂದು ವಾರದಿಂದ ಪಶ್ಚಿಮಘಟ್ಟಗಳಲ್ಲಿ ಸುರಿದ ಆಶ್ಲೇಷಾ ಮಳೆಗೆ ಕೊಡಗಿನ ಜೀವನದಿ ಕಾವೇರಿಯ ಕಾವು ಮಿತಿಮೀರಿ ಏರಿಕೆಯಾಗಿ ಹರಿಯುತ್ತಿರುವುದರಿಂದ ತನ್ನ ತೆಕ್ಕೆಗೆ ಸಿಗುವ ಎಲ್ಲವನ್ನು ಆಕ್ರಮಿಸಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳಲ್ಲಿನ ಜನವಸತಿ ಪ್ರದೇಶ, ಸಾವಿರಾರು ಎಕರೆ ಕೃಷಿ ಭೂಮಿ ಜಲಮಯವಾಗಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕುಶಾಲನಗರ ಹೋಬಳಿಯ ನಂಜರಾಯಪಟ್ಟಣ, ರಂಗಸಮುದ್ರ, ಗುಡ್ಡೆಹೊಸೂರು, ಮಾದಾಪಟ್ಟಣ, ಬೈಚನಹಳ್ಳಿ, ಕುಶಾಲನಗರ ಪಟ್ಟಣ, ಮುಳ್ಳುಸೋಗೆ, ಗುಮ್ಮನಕೊಲ್ಲಿ, ಕೂಡ್ಲೂರು ಮೊದಲಾದ ಕಡೆಗಳಲ್ಲಿ ಕಾವೇರಿ ನದಿ ಸಾಕಷ್ಟು ಸಂಕಟವನ್ನು ತಂದಿಟ್ಟು ಹರಿಯುತ್ತಿದ್ದಾಳೆ. ಇನ್ನು ಕಾವೇರಿ ಹಾಗು ಹಾರಂಗಿ ನದಿಗಳ ಸಂಗಮ ಕ್ಷೇತ್ರ ಕೂಡಿಗೆ, ಕಣಿವೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಹಾಗೂ ಮೂಡಲುಕೊಪ್ಪಲು ಗ್ರಾಮಗಳಲ್ಲಿ ಜನವಸತಿಗೆ ಒಂದಷ್ಟು ಕಡಿಮೆ ಹಾನಿಯಾದರೂ ಕೂಡ ಅಪಾರ ಪ್ರಮಾಣದ ಕೃಷಿ ಭೂಮಿ ಜಲಾವೃತಗೊಂಡಿದೆ.
ಇದೇ ರೀತಿ ನದಿಯಾಚೆಯ ಮೈಸೂರು ಜಿಲ್ಲೆಯ ಗಡಿಗ್ರಾಮಗಳಾದ ಚಿಕ್ಕಹೊಸೂರು, ಗಿರಗೂರು, ಕೊಪ್ಪ, ಆವರ್ತಿ, ಮುತ್ತಿನಮುಳ್ಳುಸೋಗೆ, ದಿಂಡಗಾಡು, ದೊಡ್ಡಕಮರವಳ್ಳಿ ಸೇರಿದಂತೆ ನದಿ ದಂಡೆಯ ಇಕ್ಕೆಲಗಳಲ್ಲಿ ಅಪಾರ ಹಾನಿ ಕಳೆದ ಮೂರು ವರ್ಷಗಳಿಂದಲೂ ಸಂಭವಿಸುತ್ತಲೇ ಇರುವುದರಿಂದ ಈ ಭಾಗದ ಜನ ಸಾಕಷ್ಟು ನೊಂದು ಹೋಗಿದ್ದಾರೆ. ಮೊದಲೇ ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ನಲುಗಿಹೋಗಿದ್ದ ಅಪಾರ ಮಂದಿ ರೈತರಿಗೆ ಆಶ್ಲೇಷಾ ಮಳೆ ಸೃಷ್ಟಿಸಿದ ಕಾವೇರಿ ಪ್ರವಾಹ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು ಕುಶಾಲನಗರ ಪಟ್ಟಣವನ್ನು ಎಲ್ ಆಕಾರದಲ್ಲಿ ಸುತ್ತುವರೆದು ಸಾಗಿರುವ ಕಾವೇರಿ ನದಿಯ ದಂಡೆಯಲ್ಲಿನ ಹತ್ತಕ್ಕೂ ಹೆಚ್ಚು ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ. ಕಳೆದ 2018 ರಲ್ಲಿ ಇದೇ ಆಗಸ್ಟ್ ತಿಂಗಳ 16,17 ಹಾಗೂ 18 ರಂದು ಮೂರು ದಿನಗಳ ಕಾಲ ಕಳೆದ 60 ವರ್ಷಗಳ ಬಳಿಕ ಮೊದಲ ಬಾರಿಗೆ ಬಂದ ಈ ಕಾವೇರಿ ಪ್ರವಾಹಕ್ಕೆ ಇಲ್ಲಿನ ಜನ ಮಾತ್ರವಲ್ಲ ಜಿಲ್ಲಾಡಳಿತವೇ ತತ್ತರಿಸಿ ಹೋಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಆಡಳಿತ ಈ ಪ್ರವಾಹಕ್ಕೆ ಸಾಕಷ್ಟು ಮಿಡಿದಿತ್ತು. ಇನ್ನು 2019 ರ ಆಗಸ್ಟ್‍ನಲ್ಲಿ ತಾ.6,7 ಹಾಗೂ 8 ರಂದು ಮತ್ತೆ ಬಂದ ಎರಡನೇ ಬಾರಿಯ ಪ್ರವಾಹ ನದಿಯಂಚಿನ ನಿವಾಸಿಗಳನ್ನು ಅಕ್ಷರಶಃ ನಲುಗಿಸಿತ್ತು. ಈಗ ಮತ್ತೆ ಅದೇ ಆಗಸ್ಟ್ ತಿಂಗಳ 5,6,7 ಮತ್ತು 8 ರಂದೇ ಕಾಡುತ್ತಿರುವ ಪ್ರವಾಹ ಮತ್ತೆ ಮತ್ತೆ ಜನರ ನೆಮ್ಮದಿ ನೀರು ಪಾಲಾಗುತ್ತಿದೆ. ಅರ್ಧ ಜೀವನವನ್ನೇ ವ್ಯಯಿಸಿ ಸಂಪಾದಿಸಿದ ಹಣದಲ್ಲಿ ನಿವೇಶನಗಳನ್ನು ಖರೀದಿಸಿ ಕಟ್ಟಿದ ಮನೆಗಳು ಪದೇ ಪದೇ ಮಳೆಗಾಲದಲ್ಲಿ ಮುಳುಗುತ್ತಿದ್ದು ಮನೆಗಳ ಒಳಗಿನ ಪರಿಕರಗಳು ಹಾಳಾಗಿವೆ. ಜೊತೆಗೆ ಗೋಡೆಗಳು ಶೀತಕ್ಕೆ ಸಿಲುಕಿ ಶಿಥಿಲಾವಸ್ಥೆ ತಲುಪುತ್ತಿವೆ. ಮತ್ತೆ ಇದೇ ಶೀತಪೀಡಿತ ಮನೆಗಳಲ್ಲಿ ನಾವು ವಾಸಿಸೋದಾದರೂ ಹೇಗೆ ಎಂದು ಜನ ಪರದಾಡುತ್ತಿದ್ದಾರೆ. ಈಗಾಗಲೇ ಮಳೆಗಾಲದ ಆವಾಂತರಗಳ ಸಹವಾಸವೇ ಬೇಡ ಎಂದುಕೊಂಡ ಕೆಲವು ಮಂದಿ ನದಿಯಂಚಿನ ಮನೆಗಳನ್ನು ಈ ಮೊದಲೇ ಖಾಲಿ ಮಾಡಿ ಬೇರೆಡೆ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮತ್ತೆ ತಾವು ಬಿಟ್ಟು ಹೋದ ಮನೆಗಳ ಮುಂದೆ ಮನೆ ಮಾರಾಟಕ್ಕಿದೆ, ಮನೆ ಬಾಡಿಗೆಗಿದೆ ಎಂಬ ನಾಮಫಲಕ ಅಳವಡಿಸಿರುವುದು ಕಂಡು ಬರುತ್ತಿದೆ.
ಕಾವೇರಿ ನದಿಯ ದಂಡೆಯಲ್ಲಿನ ನಿವಾಸಿಗಳಿಗೆ ಕಾವೇರಿ ಪ್ರವಾಹ ಬರದಂತೆ ತಡೆಯಲು ಸರ್ಕಾರಗಳಿಗೂ ಸಾಧ್ಯವಾಗುತ್ತಿಲ್ಲ. ಕಳೆದ 2 ವರ್ಷಗಳಿಂದ ಪ್ರವಾಹ ಪೀಡಿತ ಸ್ಥಳಗಳಿಗೆ ಸಂಸದರು, ಸಚಿವರುಗಳು ಭೇಟಿ ನೀಡಿದ್ದರು. ಈ ವರ್ಷವೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಶ್ವತ ಯೋಜನೆಗಳನ್ನು ಯಾವ ಸರಕಾರಗಳಿಂದಲೂ ನೀಡುವುದಕ್ಕೆ ಆಗಿಲ್ಲ. ಆದ್ದರಿಂದ ಪ್ರವಾಹ ಪೀಡಿತರು ಯಾವುದೇ ಆಶ್ವಾಸನೆಗಳಿಗೂ ಕಾಯದೇ, ಸರ್ಕಾರದ ಯಾವುದೇ ಯೋಜನೆಗಳಿಗೂ ಕಾದು ಕೂರದೇ ಪ್ರವಾಹದ ನಂತರದ ಜೀವನವನ್ನು ರೂಪಿಸಿಕೊಳ್ಳಲು ಮುಂದಾಗಬೇಕಿದೆ ಅಷ್ಟೇ. ಒಟ್ಟಾರೆ ಈಗ ಮಳೆ ಬಂದು ಮುಳುಗಿದ ಮನೆಗಳಲ್ಲಿ ಆದ ನಷ್ಟÀದ ಜೊತೆಗೆ ಮುಳುಗಿರುವ ರೈತರ ಕೃಷಿ ಫಸಲುಗಳಿಗೆ ನ್ಯಾಯೋಚಿತವಾದ ಪರಿಹಾರ ಧನಗಳನ್ನು ಶೀಘ್ರವಾಗಿ ನೀಡುವ ಕೆಲಸಗಳು ಜಿಲ್ಲಾಡಳಿತದಿಂದ ಆಗಬೇಕಷ್ಟೇ.
-ಕೆ.ಎಸ್. ಮೂರ್ತಿ