ಕೊರೊನಾ ಪಾಸಿಟಿವ್ ಬಂತೆಂದು ಹೆದರಬೇಕಾದ ಅಗತ್ಯವೇ ಇಲ್ಲ. ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆಯೊಂದಿಗೆ ನಾವೂ ಸ್ವಯಂ ಜಾಗೃತಿ ವಹಿಸಿದಲ್ಲಿ ಇದರಿಂದ ಮುಕ್ತವಾಗಿ ಹೊರಬರಬಹುದು ಎಂದು 36 ವರ್ಷ ಪ್ರಾಯದ ಕುಶಾಲನಗರ ಮೂಲದ ಗುಣಮುಖರಾದ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡರು.
ತಮ್ಮ ಹೆಸರನ್ನು ಉಲ್ಲೇಖಿಸಲು ಇಚ್ಚಿಸದ ಇವರು ತಾವು ಮಹಾರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದು ರಜೆ ಮೂಲಕ ಜಿಲ್ಲೆಗೆ ಬಂದಾಗ ಯಾವುದೇ ಲಕ್ಷಣಗಳಿಲ್ಲದಿದ್ದರೂ ಸರಕಾರದ ನಿಯಮ ಪಾಲನೆಗೆ ಕೋವಿಡ್ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಂಡ ಸಂದರ್ಭ ಪಾಸಿಟಿವ್ ಬಂತು. ಆದರಿಂದಾಗಿ ಕೆಲದಿನ ಆಸ್ಪತ್ರೆ ಹಾಗೂ ಬಳಿಕ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕಾಯಿತು. ಆಸ್ಪತ್ರೆಯಲ್ಲಿ ವೈದ್ಯ ಸಮೂಹ ಉತ್ತಮ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಇವರ ಸಲಹೆಯೊಂದಿಗೆ ನಾವೂ ಸ್ವಯಂ ಕಾಳಜಿ ತೋರಬೇಕು. ಬಿಸಿನೀರು, ಪ್ರೋಟೀನ್ ಯುಕ್ತ ಆಹಾರ ಸೇವನೆ ಉತ್ತಮ. ಇದು ಸಾಮಾನ್ಯ ರೀತಿಯ ಶೀತ, ಜ್ವರದ ಮಾದರಿಯ ಒಂದು ರೋಗವಷ್ಟೆ. ಆದರೆ ಅಂಟುರೋಗ ಎಂಬ ಕಾರಣಕ್ಕಾಗಿ ಮಾತ್ರ ಜನರಿಂದ ದೂರ ಇಡಲು ಐಸೋಲೇಷನ್‍ನಲ್ಲಿ ಇರಿಸಲಾಗುತ್ತದೆ ಎಂಬದು ತಮ್ಮ ಅನುಭವವಾಗಿದೆ. ಇದೀಗ ತಾವು ಸಂಪೂರ್ಣ ಗುಣಮುಖರಾಗಿದ್ದು, ಮುಂದಿನ ವಾದರಲ್ಲಿ ಮತ್ತೆ ಹಿಂದಿನಂತೆ ಕೆಲಸಕ್ಕೆ ಮರಳಲಿರುವುದಾಗಿ ಅವರು ಉತ್ಸಾಹಭರಿತರಾಗಿ ನುಡಿದರು. ಚೇತರಿಕೆ ಖಚಿತ ಆದರೆ ರಕ್ತದೊತ್ತಡ, ಮಧುಮೇಹ ದಂತಹ ಸಮಸ್ಯೆ ಇದ್ದಲ್ಲಿ ಒಂದಷ್ಟು ಜಾಗ್ರತೆ ಅಗತ್ಯ ಎಂದು ಅವರು ಕಿವಿಮಾತು ಹೇಳಿದರು.