ಮಡಿಕೇರಿ, ಆ.10: ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ತಲಕಾವೇರಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ, ಪರಿಹಾರ ಕೇಂದ್ರಗಳ ನಿರ್ವಹಣೆ ಮತ್ತಿತರ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಶಾಸಕರು, ಸಂಸದರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಹಿಟಾಚಿ ಆಗಮಿಸಿರುವ ಹಿನ್ನೆಲೆ ಕಾರ್ಯಾಚರಣೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಕಾರ್ಯಾಚರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಕಾಲ ಕಾಲಕ್ಕೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ಈಗಾಗಲೇ ಪಾಳಿಯಲ್ಲಿ ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಲಾಗಿದೆ. ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಸರಿಯಾದ ಸಮಯಕ್ಕೆ ಊಟೋಪಚಾರ, ಕುಡಿಯುವ ನೀರು ಒದಗಿಸುವಂತೆ ಸೂಚನೆ ನೀಡಿದರು.
ತಹಶೀಲ್ದಾರರು ಕಾರ್ಯಾಚರಣೆ ಸ್ಥಳದಲ್ಲಿಯೇ ಮೊಕ್ಕಾಂ ಹೂಡಬೇಕು. ಕಾಲ ಕಾಲಕ್ಕೆ ಮಾಹಿತಿ ನೀಡಬೇಕು ಎಂದು ಸಚಿವರು ಸೂಚಿಸಿದರು. ಕಾರ್ಯಾಚರಣೆ ಮುಗಿಯುವವರೆಗೆ ತಾವು ಜಿಲ್ಲೆಯಲ್ಲಿಯೇ ಇರುವುದಾಗಿ ಅವರು ಹೇಳಿದರು.
ಈಗಾಗಲೇ ನಿಯೋಜಿಸಿರುವ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು.
ಕಾರ್ಯಾಚರಣೆ ಸಂದರ್ಭದಲ್ಲಿ ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್ ಸ್ಥಳದಲ್ಲಿಯೇ ಇರಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಂಬ್ಯುಲೆನ್ಸ್ ಒದಗಿಸಬೇಕು ಎಂದು ಸಚಿವರು ಸೂಚಿಸಿದರು.
ಪರಿಹಾರ ಕೇಂದ್ರದಲ್ಲಿ ಯಾವುದೇ ದೂರುಗಳು ಬರದಂತೆ ಅಧಿಕಾರಿಗಳು ಗಮನಹರಿಸಬೇಕು. ಜಿಲ್ಲೆಯ ಯಾವ ಯಾವ ಭಾಗದಲ್ಲಿ ಮನೆಗೆ ನೀರು ನುಗ್ಗಿದೆ ಅಂತಹ ಮನೆಗಳ ಮಾಹಿತಿ ತಕ್ಷಣ ಒದಗಿಸುವಂತೆ ವಿ.ಸೋಮಣ್ಣ ಸೂಚಿಸಿದರು.
ಕಾರ್ಯಾಚರಣೆ ಬಗ್ಗೆ ಡಿವೈಎಸ್ಪಿ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಕಾರ್ಯಾಚರಣೆ ಸ್ಥಳದಲ್ಲಿ ತಾತ್ಕಾಲಿಕ ಟೆಂಟ್ ಸಿದ್ದಪಡಿಸುವಂತೆ ಸಚಿವರು ಸಲಹೆ ಮಾಡಿದರು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಕಾರ್ಯಾಚರಣೆಯನ್ನು ನಮಗೆ ತಿಳಿಸದೆ ಸ್ಥಗಿತಗೊಳಿಸ ಬಾರದು. ಕಾರ್ಯಾಚರಣೆ ಚುರುಕುಗೊಳಿಸಬೇಕು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು. ಅಲ್ಲದೆ, ಕಳೆದ ವರ್ಷ ಪ್ರಕೃತಿ ವಿಕೋಪ ಸಂದರ್ಭದ ಕಾಮಗಾಗಿ ಹಣ ಇನ್ನೂ ಗುತ್ತಿಗೆ ದಾರರಿಗೆ ಪಾವತಿ ಆಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ಸ್ಪಂದಿಸಿದ ಸಚಿವ ಸೋಮಣ್ಣ, ಹಣ ಪಾವತಿಗೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿ ಸುವ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅಧಿಕಾರಿಗಳು ತಮಗೆ ವಹಿಸಲಾಗಿ ರುವ ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.
ಅರಣ್ಯ ಇಲಾಖೆಯ 25 ಸಿಬ್ಬಂದಿಗಳು, ಅಗ್ನಿ ಶಾಮಕ ಇಲಾಖೆ ಯಿಂದ 8 ಮಂದಿ, ಎನ್ಡಿಆರ್ಎಫ್ ನಿಂದ 23 ಮಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ತಲಕಾವೇರಿ ಬಳಿ ಇರುವ ಅರಣ್ಯ ಇಲಾಖೆ ಪ್ರವಾಸಿ ಮಂದಿರವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ತಿಳಿಸಿದರು.
ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ತಾ.ಪಂ.ಇಒ ಲಕ್ಷ್ಮೀ ಲೋಕೋಪ ಯೋಗಿ ಇಲಾಖೆ ಎಂಜಿನಿಯರ್ ಮದನ್ ಮೋಹನ್, ಡಿವೈಎಸ್ಪಿ ದಿನೇಶ್ ಕುಮಾರ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಚಂದನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ತಹಶೀಲ್ದಾರ್ ಮಹೇಶ್, ಭಾಗಮಂಡಲ ಪಿಡಿಒ ಅಶೋಕ್ ಕುಮಾರ್, ಕಂದಾಯ ಇಲಾಖೆ ಅಧಿಕಾರಿಗಳು ಇತರರು ಇದ್ದರು.