ತಲಕಾವೇರಿಯಲ್ಲಿ ತಮ್ಮ ಮನೆ, ಆಡಿನಲಿದ ಅಂಗಳ, ತಂದೆ, ತಾಯಿ, ದೊಡ್ಡಪ್ಪ ಸೇರಿದಂತೆ ಐವರು ಭೂಸಮಾಧಿಯೊಂದಿಗೆ ಕಣ್ಮರೆಯಾಗಿರುವ ಭಯಾನಕ ದೃಶ್ಯ ಕಂಡು, ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಅವರ ಪುತ್ರಿಯರು ಮತ್ತು ಮೊಮ್ಮಕ್ಕಳು ಇಂದು ಕಣ್ಣೀರಕೋಡಿ ಹರಿಸುತ್ತಾ, ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು.ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ ಹಾಗೂ ಇತರರೊಂದಿಗೆ ತಲಕಾವೇರಿಯ ದುರಂತ ಸ್ಥಳ ವೀಕ್ಷಿಸಿದ ಸದಸ್ಯರು, ನಂಬಲಸಾಧ್ಯ ದೃಶ್ಯದಿಂದ ಚಿಂತಾಕ್ರಾಂತ ನೋಟದೊಂದಿಗೆ ದಿಗ್ಭ್ರಮೆಗೀಡಾದರೂ, ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಲಭಿಸಿರುವ ವಸ್ತುಗಳು ಮತ್ತು ಹೆತ್ತವರ ವಸ್ತ್ರಗಳನ್ನು ನೋಡಿ ಮತ್ತಷ್ಟು ಭಾವುಕರಾಗಿ ಅಶ್ರುಧಾರೆ ಹರಿಸಿದರು.
ಈ ದೃಶ್ಯ ಜೊತೆಗಿದ್ದ ವರಲ್ಲಿಯೂ ಕಣ್ಣಾಲಿಗಳಲ್ಲಿ ನೀರಹನಿ ತೊಟ್ಟಿಕ್ಕಿಸಿತು. ಎಲ್ಲರಲ್ಲಿ ನೀರವ ಮೌನ ಮೂಡಿಸಿತು.