ಮಡಿಕೇರಿ, ಆ. 10: ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಹಾಗೂ ಅವರ ಪತ್ನಿ ಶಾಂತ ಸಹಿತ ಕಣ್ಮರೆಯಾಗಿರುವ ಇತರ ಇಬ್ಬರ ಪತ್ತೆಗಾಗಿ ಐದನೇ ದಿನವಾದ ಇಂದು ಸಂಜೆ ತನಕ ಕಾರ್ಯಾಚರಣೆ ನಡೆದರೂ; ಕೆಲವು ವಸ್ತುಗಳ ಹೊರತು ಕಣ್ಮರೆಯಾದವರ ಸುಳಿವು ಪತ್ತೆಯಾಗಿಲ್ಲ; ಬದಲಾಗಿ ಈಗಾಗಲೇ ಮನೆಯೊಳಗೆ ಜೀವಂತ ಸಮಾಧಿಯಾಗಿದ್ದ ಆನಂದ ತೀರ್ಥ ಅವರ ಶವಹೊರತೆಗೆಯಲಾಗಿದ್ದ ಸ್ಥಳದಲ್ಲಿ ಇಂದಿನ ಕಾರ್ಯಾಚರಣೆ ಯಲ್ಲಿ ಈಗಾಗಲೇ ಕಳೇಬರ ಪತ್ತೆಯಾಗಿರುವ ಆನಂದತೀರ್ಥರು ಬರೆದಿರುವ ಸಾಕ್ಷೀ ಚೈತನ್ಯ ಗ್ರಂಥ ಸಹಿತ ಗೃಹೋಪಯೋಗಿ ವಸ್ತುಗಳು, ಪಂಚೆ ಇನ್ನಿತರ ಬಟ್ಟೆಗಳು ಕಂಡು ಬಂತು. ಈ ಎಲ್ಲವನ್ನು ಸ್ಥಳದಲ್ಲೇ ಲಭಿಸಿದ ಪಂಚೆಗಳಿಂದ ಎರಡು ಪ್ರತ್ಯೇಕ ಗಂಟು ಕಟ್ಟಿ ಪೊಲೀಸ್ ವಶಕ್ಕೆ ನೀಡಲಾಯಿತು. ಮುಂದುವರಿದ ಕಾರ್ಯಾಚರಣೆಯಲ್ಲಿ ಮಂಚದ ತುಣುಕುಗಳು, ಸ್ಟೀಲ್ ಪಾತ್ರೆಗಳು, ನಿತ್ಯೋಪಯೋಗಿ ವಸ್ತುಗಳು ಕೆಸರಿನ ನಡುವೆ ಹುದುಗಿರುವ ದೃಶ್ಯ ಹಿಟಾಚಿ ಯಂತ್ರದಡಿ ಎದುರಾಯಿತು. ಇಂದು ಎನ್ಡಿಆರ್ಎಫ್, ಎನ್ಡಿಆರ್ಎಫ್ ತಂಡಗಳೊಂದಿಗೆ ಭಾಗಮಂಡಲ ಪೊಲೀಸರೂ ಕಾರ್ಯಾಚರಣೆಯಲ್ಲಿ ಕೈಜೋಡಿಸಿದರು.
ಸಂಜೆಯ ತನಕವೂ ಹಿಟಾಚಿ ಯಂತ್ರಗಳ ಸಹಿತ ಶೋಧ ಕಾರ್ಯ ನಡೆಯಿತಾದರೂ, ಮಳೆ ಮತ್ತು ಮೋಡದ ಅಡಚಣೆಯಿಂದ ಯಾವದೇ ಕುರುಹು ಲಭಿಸಲಿಲ್ಲ. ಕಾರ್ಯಾಚರಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ
(ಮೊದಲ ಪುಟದಿಂದ) ಪ್ರತಾಪ್ ಸಿಂಹ, ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸಹಿತ ಗ್ರಾಮಸ್ಥರು, ನಾರಾಯಣಾಚಾರ್ ಮಕ್ಕಳು, ಕುಟುಂಬ ವರ್ಗ ಕುತೂಹಲದಿಂದ ಕಣ್ಮರೆಯಾದವರ ಸುಳಿವಿಗೆ ಕಾಯ್ದಿದ್ದರು. ಹವಾಮಾನ ಅಡಚಣೆಯಿಂದ ಕಾರ್ಯಾಚರಣೆ ಸ್ಥಗಿತವಾಗಿದ್ದು, ತಾ. 11 ರಂದು (ಇಂದು) ಬೆಳಿಗ್ಗೆ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಸಚಿವರಿಂದ ಸಾಂತ್ವನ
ಅನೇಕ ದಶಕಗಳಿಂದ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾಗಿ, ಸಮಾಜದ ಹಿರಿಯ ರಾಗಿ ಎಲ್ಲರಿಗೆ ಮಾರ್ಗದರ್ಶಕರಾಗಿದ್ದ ಟಿ.ಎಸ್. ನಾರಾಯಣಾಚಾರ್ ಕುಟುಂಬಕ್ಕೆ ಪ್ರಸಕ್ತ ಸಂಭವಿಸಿರುವ ದುರಂತ ಬರಬಾರದಿತ್ತು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಗದ್ಗದಿತರಾಗಿ ನುಡಿದರು. ವಿದೇಶದಿಂದ ತಾಯ್ನಾಡಿಗೆ ಆಗಮಿಸಿರುವ ಅರ್ಚಕ ದಂಪತಿಯ ಪುತ್ರಿಯರಾದ ನಮಿತಾ ಮತ್ತು ಶಾದರಾರನ್ನು ಸಂತೈಸುತ್ತಾ ಅವರು ಮಾತನಾಡಿದರು.
ವಿಪರೀತ ಮಳೆಯಿಂದ ಬ್ರಹ್ಮಗಿರಿ ಬೆಟ್ಟ ಶ್ರೇಣಿಯ ಗಜರಾಜಗಿರಿಯಲ್ಲಿ ಕಳೆದ ವರ್ಷ ಭೂಕುಸಿತದೊಂದಿಗೆ ಅಪಾಯ ಸಂಭವಿಸಿದ್ದಾಗಿ ನೆನಪಿಸಿದ ಸಚಿವರು, ಆಗಲೇ ಜಿಲ್ಲಾಡಳಿತದಿಂದ ನಾರಾಯಣಾಚಾರ್ ಅವರಿಗೆ ಮನೆ ಖಾಲಿ ಮಾಡುವಂತೆ ನೋಟೀಸ್ ನೀಡಿದ್ದಾಗಿಯೂ ವಿವರಿಸಿದರು.
ಅಲ್ಲದೆ ತಾ. 6 ರಂದು ಈ ಬಾರಿ ಭಾರೀ ದುರಂತ ಸಂಭವಿಸಿದ್ದು, ಒಂದು ದಿನ ಮುಂಚಿತವಾಗಿ ಗ್ರಾಮಸ್ಥರ ಸಹಿತ ಪಂಚಾಯಿತಿ ಆಡಳಿತ ಹಾಗೂ ಪರಿಚಿತರು ಕೂಡ ಮನೆ ತೊರೆಯುವಂತೆ ಕೇಳಿಕೊಂಡಿದ್ದಾರೆ ಎಂದು ನೆನಪಿಸುತ್ತಾ, ಈ ಕುಟುಂಬ ಸ್ಥಳ ಬಿಟ್ಟು ಬರಲು ಸಮ್ಮತಿಸಿರಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ನಾರಾಯಾಣಾಚಾರ್ ಅವರ ಹಿರಿಯ ಪುತ್ರಿ ನಮಿತಾ ಭಾವುಕರಾಗಿ ಕಣ್ಮರೆಯಾಗಿರುವ ತಂದೆ - ತಾಯಿಗಾಗಿ ಗಳಗಳನೆ ಅತ್ತು ಬಿಟ್ಟರು. ನಮಿತಾ ಪುತ್ರಿ ನಿಖಾಲ್ ನಸ್ರತ್ ಹಾಗೂ ಇನ್ನೋರ್ವ ನಾರಾಯಣಾಚಾರ್ ಪುತ್ರಿ ಶಾರದಾ ಮಗಳು ಸಾಂಶಿಯಾ ಕೂಡ ತಾ. 6 ರಂದು ಸಂಭವಿಸಿರುವ ದುರಂತ ಕುರಿತು ಸಚಿವರು ಹಾಗೂ ಸಂಸದರು ಮತ್ತು ಜಿಲ್ಲಾಧಿಕಾರಿ ಬಳಿ ಚರ್ಚಿಸಿದರು. ಕಡೆಯದಾಗಿ ತಾವು ಅಷ್ಟೊಂದು ದೂರದಿಂದ ತಾಯ್ನಾಡಿಗೆ ಬಂದಿರುವ ಕಾರಣ, ಹೆತ್ತವರ ಮುಖ ನೋಡಲು ಅವಕಾಶ ಮಾಡಿಕೊಡುವಂತೆ ಬಿನ್ನವಿಸಿದರು.
ಈ ವೇಳೆ ಜನನಾಯಕರ ಸಹಿತ ಜಿಲ್ಲಾಧಿಕಾರಿ ಕೂಡ ಈ ಕುಟುಂಬ ಸದಸ್ಯರಿಗೆ ಧೈರ್ಯ ನೀಡಿ; ಸಾಧ್ಯವಿರುವ ಎಲ್ಲಾ ಮಾರ್ಗೋಪಾಯದಿಂದ ಶೋಧ ಕಾರ್ಯ ನಡೆಸಿ, ಕಣ್ಮರೆಯಾಗಿರುವವರ ಪತ್ತೆಗೆ ಶಕ್ತಿ ಮೀರಿ ಶ್ರಮಿಸುವ ಭರವಸೆ ನೀಡಿದರು. ಅಲ್ಲದೆ ಖುದ್ದಾಗಿ ದುರಂತ ಸ್ಥಳ ವೀಕ್ಷಣೆ ಸ್ಥಳದಲ್ಲಿ ಕಾರ್ಯಾಚರಣೆ ವೀಕ್ಷಿಸಲು ಅವರುಗಳನ್ನು ಕರೆದೊಯ್ದು ತೋರಿಸಿಕೊಟ್ಟರು.
ಖುದ್ದು ವೀಕ್ಷಣೆ : ಇಂದು ಮರದ ತುಂಡುಗಳ ಮೂಲಕ ಹಿಟಾಚಿ ಯಂತ್ರ ಕಾರ್ಯಾಚರಿಸುತ್ತಿದ್ದ ಸ್ಥಳಕ್ಕೆ ಸಚಿವ ವಿ. ಸೋಮಣ್ಣ ಖುದ್ದು ಕೆಸರು ನಡುವೆ ತೆರಳಿ ವೀಕ್ಷಣೆ ಮಾಡಿದರು. ಸಚಿವರೊಂದಿಗೆ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಸೇರಿದಂತೆ ಇತರ ಪ್ರಮುಖರು, ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.
- ಚಿ.ನಾ. ಸೋಮೇಶ್, ಕುಯ್ಯಮುಡಿ ಸುನಿಲ್