ಮಡಿಕೇರಿ, ಆ. 9: ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯನ್ನು ಅಸ್ತವ್ಯಸ್ತಗೊಳಿಸುವುದರೊಂದಿಗೆ ಸಾಕಷ್ಟು ಕಷ್ಟ-ನಷ್ಟಗಳನ್ನು ಉಂಟು ಮಾಡಿದ್ದ ಮಳೆ ಶನಿವಾರ ಒಂದಷ್ಟು ಬಿಡುವು ನೀಡಿದಂತಿತ್ತು. ಮಳೆ-ಗಾಳಿ ಕಡಿಮೆಯಾಗುವ ಲಕ್ಷಣದಿಂದಾಗಿ ಜನತೆ ತುಸು ನಿರಾಳರಾಗುತ್ತಿದ್ದರು. ಆದರೆ ಭಾನುವಾರದಂದು ಮತ್ತೆ ಮಳೆ ನಿರಂತರವಾಗಿ ಸುರಿಯಲಾರಂಭಿಸಿದ್ದು, ಆತಂಕದ ಪರಿಸ್ಥಿತಿ ಮತ್ತೊಮ್ಮೆ ಮುಂದುವರಿಯುವಂತಾಗಿದೆ. ಜಿಲ್ಲೆ ಬಹುತೇಕ ನೀರಿನಿಂದ ಆವೃತ್ತವಾದಂತಿದ್ದು, ಪ್ರವಾಹ ಪರಿಸ್ಥಿತಿಯ ಸ್ಥಳಗಳಲ್ಲಿ ನಿಧಾನಗತಿಯಲ್ಲಿ ನೀರು ಇಳಿಕೆಯಾಗುತ್ತಿದ್ದ ಬೆನ್ನಲ್ಲೆ ಮತ್ತೆ ಸ್ವಲ್ಪ ಮಟ್ಟಿಗೆ ಹೆಚ್ಚಾಗುತ್ತಿರುವುದು ಜನತೆಯಲ್ಲಿ ಇನ್ನೂ ಭೀತಿಯ ವಾತಾವರಣಕ್ಕೆ ಕಾರಣವಾದಂತಿದೆ.ಕಾವೇರಿ, ಲಕ್ಷ್ಮಣ ತೀರ್ಥ ಸೇರಿದಂತೆ ಇನ್ನಿತರ ನದಿ, ತೊರೆಗಳ ವ್ಯಾಪ್ತಿಯಲ್ಲಿ ನೀರಿನ ಹರಿವು ಅದೇ ರೀತಿ ಮುಂದುವರಿಯುತ್ತಿದೆ. ಜಲಾವೃತಗೊಂಡಿರುವ ಗದ್ದೆ, ವಿಶಾಲ ಪ್ರದೇಶಗಳು, ತೋಟಗಳಲ್ಲಿ ಇನ್ನೂ ನೀರು ಕಡಿಮೆಯಾಗಿಲ್ಲ. ಸಂಪರ್ಕ ಕಡಿತಗೊಂಡಿದ್ದ ಒಂದಷ್ಟು ಸ್ಥಳಗಳು ಮುಕ್ತವಾಗಿದ್ದರೂ ಮತ್ತೇನಾಗಲಿದೆಯೋ ಎಂಬ ಆತಂಕ ಕಾಡುತ್ತಿದೆ. ಕಳೆದ 24 ಗಂಟೆಗಳಲ್ಲಿ (ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ) ಜಿಲ್ಲೆಯಲ್ಲಿ ಸರಾಸರಿ 1.24 ಇಂಚು ಮಳೆಯಾಗಿದೆ.
(ಮೊದಲ ಪುಟದಿಂದ) ಮಡಿಕೇರಿ ತಾಲೂಕಿನಲ್ಲಿ ಸರಾಸರಿ 2.51, ವೀರಾಜಪೇಟೆಯಲ್ಲಿ 0.74, ಸೋಮವಾರಪೇಟೆಯಲ್ಲಿ 0.47 ಇಂಚು ಮಳೆ ಸುರಿದಿದೆ.
ಹೋಬಳಿವಾರು ಲೆಕ್ಕಾಚಾರದಂತೆ ಸಂಪಾಜೆಯಲ್ಲಿ 4.04 ಇಂಚು ಮಳೆಯಾಗಿದೆ. ಉಳಿದಂತೆ ಮಡಿಕೇರಿ 1.28, ಭಾಗಮಂಡಲ 3.31, ನಾಪೋಕ್ಲು 1.32 ಇಂಚು ಮಳೆಯಾಗಿದೆ. ವೀರಾಜಪೇಟೆ 1 ಇಂಚು, ಹುದಿಕೇರಿ 0.92, ಶ್ರೀಮಂಗಲ 0.86, ಶಾಂತಳ್ಳಿ 1.12 ಇಂಚು ಮಳೆಯಾಗಿದೆ. ಇತರೆಡೆ ಮಳೆಯ ಪ್ರಮಾಣ ಕಡಿಮೆ ಕಂಡುಬಂದಿದೆ.
ಪೆರಾಜೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿಂಬದಿ ಮಣ್ಣು ಕುಸಿದು ಹಾನಿ ಉಂಟಾಗಿದೆ.
ಸೇತುವೆ ಕುಸಿತ: ಪರಿಶೀಲನೆ
ಮಡಿಕೇರಿ ಪಂಚಾಯಿತಿ ವ್ಯಾಪ್ತಿಯ ಬಿಳಿಗೇರಿ ಗ್ರಾಮದ ಬಕ್ಕಬಾಣೆ ಪೈಸಾರಿಯ ಬಿಳಿಗೇರಿ, ಹಾಕತ್ತೂರು ಸೇತುವೆ ಹಾಗೂ ಹಾಕತ್ತೂರು ಪಂಚಾಯಿತಿ ವ್ಯಾಪ್ತಿಯ ಕಗ್ಗೋಡ್ಲು ಬೀಚನ ಸೇತುವೆ ಕುಸಿದಿದ್ದು, ಸ್ಥಳಕ್ಕೆ ತಾ.ಪಂ. ಸದಸ್ಯೆ ಕುಮುದ ರಶ್ಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಕಂಠಯ್ಯ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಶಾಲೆಗೆ ಹಾನಿ
ಸಂಪಾಜೆ ಗ್ರಾಮದ ಕೊಯನಾಡು ಸರಕಾರಿ ಶಾಲೆಯ ಹಿಂಭಾಗದ ಮಣ್ಣು ಕುಸಿತಗೊಂಡಿದ್ದು, ಹೊಸದಾಗಿ ನಿರ್ಮಾಣವಾದ ಕಟ್ಟಡಕ್ಕೆ ಹಾನಿ ಯಾಗಿದೆ. ಪಂಚಾಯಿತಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಪರಿಶೀಲನೆ ನಡೆಸಿದರು.