ಮಡಿಕೇರಿ, ಆ. 8 : ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದಿರುವುದು ಸವಾಲಿನದ್ದಾಗಿದ್ದು, ಪರಿಹಾರ ಕಾರ್ರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಕೃತಿ ವಿಕೋಪ ಮತ್ತು ಕೋವಿಡ್ 19 ನಿರ್ವಹಣೆ ಸಂಬಂಧಿಸಿದಂತೆ ಮಾಹಿತಿ ಪಡೆದು ಸಚಿವರು ಮಾತನಾಡಿದರು.ಪ್ರಕೃತಿ ವಿಕೋಪ ಸಂಬಂಧಿಸಿ ದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದ್ದರೂ ಅವಘಡ ಸಂಭವಿಸಿದೆ. ಜನರ ನೋವು, ತೊಳಲಾಟ, ದುಗುಡ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಸಚಿವರು ನುಡಿದರು. ಬ್ರಹ್ಮಗಿರಿ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿದ್ದು, ಐವರು ಕಾಣೆಯಾಗಿದ್ದು, ಇದು ಸವಾಲಿನ ಕೆಲಸವಾಗಿದೆ. ಹಿಟಾಚಿಗಳನ್ನು ತರಿಸಿ ಶೀಘ್ರವೇ ಕಾರ್ಯ ನಿರ್ವಹಿಸಬೇಕು. ಈಗಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿ. ಹಿಟಾಚಿಗಳು ತಲಕಾವೇರಿ ಪ್ರದೇಶವನ್ನು ತಲುಪಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಪ್ರಕೃತಿ ವಿಕೋಪ ಸಂಬಂಧಿಸಿದಂತೆ ದಾನಿಗಳು ಬಟ್ಟೆ, ಬರೆ, ಇತರ ವಸ್ತುಗಳನ್ನು ನೀಡುವುದು ಬೇಡ, ಬದಲಾಗಿ ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಕಳುಹಿಸ ಬಹುದಾಗಿದೆ ಎಂದು ಸಚಿವರು ಮನವಿ ಮಾಡಿದರು. ಪರಿಹಾರ ಕೇಂದ್ರಗಳಲ್ಲಿನ ಪ್ರತಿಯೊಬ್ಬರಿಗೂ ಸಹ ಕೋವಿಡ್ ಪರೀಕ್ಷೆ ನಡೆಸಿ, ಪಾಸಿಟಿವ್ ವರದಿ ಬಂದರೆ ಆಸ್ಪತ್ರೆಗೆ ಸೇರಿಸಿ, ನೆಗೆಟಿವ್ ಬಂದವರನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ಪರಿಹಾರ ಕೇಂದ್ರಗಳಲ್ಲಿ ಇರಿಸಿ ಆರೈಕೆ ಮಾಡಲಾಗುವುದು ಎಂದು ತಿಳಿಸಿದರು.

ಇಡೀ ಜಿಲ್ಲೆಯ ಅಧಿಕಾರಿಗಳು ತಂಡವಾಗಿ ಕಾರ್ಯನಿರ್ವಹಿಸಬೇಕು. ಮತ್ತಷ್ಟು ಮುತುವರ್ಜಿ ವಹಿಸಬೇಕು. ಪರಿಹಾರ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬೇಕು. ಜಿಲ್ಲೆಯ ಸವಾರ್ಂಗೀಣ ಅಭಿವೃದ್ಧಿಯ ಜೊತೆಗೆ ಜನರ ಆರೋಗ್ಯ

(ಮೊದಲ ಪುಟದಿಂದ) ರಕ್ಷಣೆಯೂ ಮುಖ್ಯವಾಗಿದೆ. ಸರ್ಕಾರದ ಕೆಲಸ ದೇವರ ಕೆಲಸ ಎಂಬ ನಾಣ್ಣುಡಿಯಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಎಚ್ಚರಿಸಿದರು.

ಬೆಳೆ ಹಾನಿ ಪರಿಹಾರ ಸಂಬಂಧ ಮತ್ತು ಕಾಫಿ, ಕರಿಮೆಣಸು ಮತ್ತು ಜಿಲ್ಲೆಯಲ್ಲಿ ಹಾನಿಗೊಳಗಾದ ಬೆಳೆಗಳ ಸರ್ವೆ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದರು.

ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಕೆಲಸ ನಿರ್ವಹಣೆ ಸಾಧ್ಯ, ಒಬ್ಬರಿಗೊಬ್ಬರು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ತಲಕಾವೇರಿಯಲ್ಲಿ 5 ಮಂದಿ ನಾಪತ್ತೆ ಆಗಿರುವ ಘಟನೆಗೆ ಸಂಬಂಧಿಸಿದಂತೆ ಎಲ್ಲೋ ಒಂದು ಕಡೆ ನಾವು ಎಡವಿದ್ದೇವೆ ಎನಿಸುತ್ತದೆ ಎಂದು ಸಚಿವರು ನುಡಿದರು

ಯಾವ ಹಂತದ ಅಧಿಕಾರಿಗಳಿಗೆ ಕೆಲಸ ವಹಿಸಲಾಗಿದೆ ಅವರು ನಿಭಾಯಿಸಬೇಕು. ದುಗುಡ ಕಡಿಮೆ ಮಾಡಲು ಸವಾಲುಗಳನ್ನು ಎದುರಿಸಬೇಕು. ಸರ್ಕಾರ ಎಂದರೆ ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಜನರಲ್ಲಿ ವಿಶ್ವಾಸ ಬರುವ ರೀತಿಯಲ್ಲಿ ಕೆಲಸ ಮಾಡಬೇಕು. ಪ್ರಕೃತಿ ವಿಕೋಪ ನಿರ್ವಹಣೆ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ತಡೆಗೋಡೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಕಾಫಿ ಬೆಳೆ ನಷ್ಟ ಸಂಬಂಧಿಸಿದಂತೆ ನಿಖರ ಮಾಹಿತಿ ನೀಡುವಂತೆ ಸೂಚಿಸಿದರು. ರೈತರಿಗೆ ತೊಂದರೆ ಆಗದಂತೆ ಗಮನಹರಿಸಬೇಕು ಎಂದರು.

ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಮಾತನಾಡಿ ಜಿಲ್ಲೆಯಲ್ಲಿ ಹಾನಿಗೊಳಗಾದ ಭಾಗಮಂಡಲ, ಸಂಪಾಜೆ ಭಾಗದ ರಸ್ತೆಗಳನ್ನು ಶೀಘ್ರವೇ ಸರಿಪಡಿಸಲು ಸೂಚಿಸಿದರು.

ಬಿಎಸ್‍ಎನ್‍ಎಲ್ ಸೇವೆಯನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಸಂಸದರು ನಿರ್ದೇಶನ ನೀಡಿದರು.

ಬಿಎಸ್‍ಎನ್‍ಎಲ್ ವತಿಯಿಂದ ಟವರ್‍ಗಳನ್ನು ಆರಂಭಿಸಿ. ಹಳ್ಳಿ ಪ್ರದೇಶದಲ್ಲಿ ನೆಟ್‍ವರ್ಕ್ ಸಮಸ್ಯೆಯಾಗದಂತೆ ಎಚ್ಚರ ವಹಿಸಿ ಎಂದು ಭಾರತ್ ಸಂಚಾರ ನಿಗಮ ಲಿಮಿಟೆಡ್‍ನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಟವರ್‍ಗಳಿಗೆ ಡೀಸೆಲ್ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಿಗೆ ಜಿಲ್ಲಾಡಳಿತದ ವತಿಯಿಂದ ಡೀಸೆಲ್ ಒದಗಿಸಲಾಗುವುದು. ತಕ್ಷಣವೇ ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯ ಪ್ರವೃತ್ತರಾಗುವಂತೆ ತಿಳಿಸಿದರು.

ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಮಡಿಕೇರಿ ವೀರಾಜಪೇಟೆ ವಲಯದಿಂದ 33 ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಸಿದ್ಧವಾಗಿದೆ. ಈ ತಂಡದಲ್ಲಿ 176 ಜನ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಈಗಾಗಲೇ 257 ಮರಗಳು ರಸ್ತೆ, ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದು, ಮರಗಳನ್ನು ತೆರವುಗೊಳಿಸಲಾಗಿದೆ. ಅರಣ್ಯ ಇಲಾಖೆಯ ರ್ಯಾಪಿಡ್ ರೆಸ್ಪಾನ್ಸ್ ಟೀಂ 24 ಗಂಟೆಗಳೂ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ವಿದ್ಯುತ್ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆ ಮತ್ತು ಗಾಳಿಯಿಂದಾಗಿ 1800 ವಿದ್ಯುತ್ ಕಂಬಗಳು ಹಾನಿಯಾಗಿದೆ ಎಂದು ಮಾಹಿತಿ ನೀಡಿದರು. ವಿದ್ಯುತ್ ಅವಘಡ ಉಂಟಾದಲ್ಲಿ ನಿರ್ವಹಿಸಲು 200 ರಿಂದ 300 ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ಕರೆಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಕೊಡಗು ಸೂಕ್ಷ್ಮ ಪ್ರದೇಶವಾಗಿದೆ. ಜನ ತಿಂಗಳುಗಳಗಟ್ಟಲೆ ಕತ್ತಲೆಯಲ್ಲಿರು ವಂತಾಗಬಾರದು. ಈ ಬಗ್ಗೆ ಗಮನಹರಿಸಿ, ವಿದ್ಯುತ್ ಸಂಬಂಧ ಯಾವುದೇ ಸಮಸ್ಯೆಗಳಿದ್ದರೂ ಸಹ ಬಗೆಹರಿಸಿ ಎಂದರು.

ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ಸಮಸ್ಯೆಯಾಗದಂತೆ ಎಚ್ಚರ ವಹಿಸಿ. ವಿದ್ಯುತ್ ಅತ್ಯವಶ್ಯಕವಾಗಿದ್ದು, ಸಮರ್ಪಕ ವಿದ್ಯುತ್ ಪೂರೈಕೆ ಬಗ್ಗೆ ಎಚ್ಚರ ವಹಿಸಿ. ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಬಾರದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಗೋವಿಂದರಾಜು ಇತರರು ಇದ್ದರು.