*ಕೊಡ್ಲಿಪೇಟೆ, ಆ. 8: ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದಲ್ಲಿರುವ ಕೆರೆಯ ಕಟ್ಟೆ ಒಡೆದ ಪರಿಣಾಮ ಸುತ್ತಮುತ್ತಲಿನ 20 ಎಕರೆಗೂ ಅಧಿಕ ಭೂಮಿಯಲ್ಲಿದ್ದ ಕೃಷಿಗೆ ಹಾನಿಯಾಗಿದೆ.

ಕೆರೆ ಏರಿ ಒಡೆದ ಪರಿಣಾಮ ರಾಮೇನಹಳ್ಳಿ ಗ್ರಾಮದ ಸರ್ವೆ ನಂ. 28 ರಲ್ಲಿರುವ ಗದ್ದೆಗಳು ಹಾಗೂ ಅದರ ಕೆಳಭಾಗದಲ್ಲಿರುವ ಮಳ್ಳಲ್ಲಿ ಗ್ರಾಮದ ಒಟ್ಟು 20 ಎಕರೆ ಕೃಷಿ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ಭತ್ತ ಹಾಗೂ ಶುಂಠಿ ಬೆಳೆಗೆ ಹಾನಿಯಾಗಿದೆ.

ಮಳೆಗಾಲಕ್ಕೂ ಒಂದು ತಿಂಗಳ ಮುಂಚಿತವಾಗಿ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿ ಕೆರೆ ಅಭಿವೃದ್ದಿ ಹಾಗೂ ಹೂಳೆತ್ತುವ ಕಾಮಗಾರಿ ನಡೆಸಲಾಗಿತ್ತು.

ಕಾಂಕ್ರೀಟ್ ಅಥವಾ ಕಲ್ಲಿನಿಂದ ಕೆರೆಯ ಕೋಡಿ ನಿರ್ಮಿಸದೇ ಮಣ್ಣನ್ನು ಹಾಕಿ ಕಟ್ಟೆ ನಿರ್ಮಿಸಿದ್ದಾರೆ. ಕಳೆದೆರಡು ವರ್ಷ ಇದಕ್ಕಿಂತ ಹೆಚ್ಚು ಮಳೆ ಬಂದಿದ್ದರೂ ಯಾವದೇ ತೊಂದರೆಯಾಗಿರಲಿಲ್ಲ.

ಈ ಬಾರಿ ಗ್ರಾಮ ಪಂಚಾಯಿತಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ, ಮಳೆಯ ನೀರು ತುಂಬಿ ಮಣ್ಣಿನ ಕಟ್ಟೆ ಒಡೆದು ಕೆರೆಯ ನೀರು ಕೃಷಿ ಜಮೀನುಗಳಿಗೆ ನುಗ್ಗಿ ನಷ್ಟವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕು. ಗ್ರಾಮ ಪಂಚಾಯಿತಿಯಿಂದ ನಿರ್ವಹಿಸಿದ ಕೆರೆ ಕಾಮಗಾರಿಯ ಬಗ್ಗೆ ಮೇಲಧಿಕಾರಿಗಳು ಪರಿಶೀಲಿಸಿ, ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯ ಕೃಷಿಕರಾದ ಪಾಲಾಕ್ಷ, ಸ್ವಾಮಿಗೌಡ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.