ಸೋಮವಾರಪೇಟೆ, ಆ.7: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿ ಪ್ರಕರಣಗಳು ನಡೆಯುತ್ತಲೇ ಇವೆ. ಅತೀ ಶೀತದಿಂದಾಗಿ ಮನೆಗಳ ಗೋಡೆಗಳು ಕುಸಿಯುತ್ತಿದ್ದರೆ, ಭಾರೀ ಗಾಳಿಗೆ ವಾಸದ ಮನೆಯ ಛಾವಣಿ ಹಾರುತ್ತಿವೆ. ಇಂದು ಮಧ್ಯಾಹ್ನದ ನಂತರ ಮಳೆಯ ತೀವ್ರತೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ.
ಕಳೆದ 5 ದಿನಗಳಿಂದ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥ ಗೊಂಡಿದ್ದು, 4 ದಿನಗಳ ನಂತರ ಸೋಮವಾರಪೇಟೆ ಪಟ್ಟಣಕ್ಕೆ ವಿದ್ಯುತ್ ಸರಬರಾಜಾಗಿದೆ. ಆದರೂ ಆಗಾಗ್ಗೆ ವಿದ್ಯುತ್ ಕೈಕೊಡುತ್ತಿದ್ದು, ಗ್ರಾಮೀಣ ಪ್ರದೇಶಗಳು ಇನ್ನೂ ಕತ್ತಲೆಯಲ್ಲೇ ಮುಳುಗಿವೆ.ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಮರಗಳನ್ನು ತೆರವು ಗೊಳಿಸಲು ಸೆಸ್ಕ್ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಕುಶಾಲನಗರದಿಂದ ಸರಬರಾಜಾಗುವ 33 ಕೆ.ವಿ. (ಮೊದಲ ಪುಟದಿಂದ) ವಿದ್ಯುತ್ ಮಾರ್ಗದಲ್ಲಿ ದುರಸ್ತಿ ಕಾರ್ಯ ತಾತ್ಕಾಲಿಕವಾಗಿ ಪೂರ್ಣಗೊಂಡಿದ್ದು, ನಿನ್ನೆ ರಾತ್ರಿ ಪಟ್ಟಣಕ್ಕೆ ವಿದ್ಯುತ್ ಸರಬರಾಜಾಗಿದೆ.ಇಂದು ಬೆಳಿಗ್ಗೆಯೂ ಅಲ್ಲಲ್ಲಿ ಮರಗಳು ಬೀಳುತ್ತಿರುವದರಿಂದ ಆಗಾಗ್ಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇನ್ನು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ 4 ದಿನಗಳು ಕಳೆದಿವೆ. ಶಾಂತಳ್ಳಿ, ತೋಳೂರುಶೆಟ್ಟಳ್ಳಿ ವ್ಯಾಪ್ತಿಯ ಮಂದಿ ಕತ್ತಲೆಯಲ್ಲೇ ಜೀವನ ಸಾಗಿಸುವಂತಾಗಿದೆ.
ಪಟ್ಟಣದ ಮಹದೇಶ್ವರ ಬಡಾವಣೆಯ ಉದಯ ಕಾಂಪ್ಲೆಕ್ಸ್ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೇ 3 ದಿನಗಳು ಕಳೆದಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಸೆಸ್ಕ್ ಕಚೇರಿಗೆ ಕರೆ ಮಾಡಿದರೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಡಿ.ಕೆ. ಅಪ್ಪಚ್ಚು ದೂರಿದ್ದಾರೆ.
ಸ್ಥಳೀಯರಿಂದ ಸಹಕಾರ: ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಮರಗಳನ್ನು ಸೆಸ್ಕ್ ಸಿಬ್ಬಂದಿಗಳೊಂದಿಗೆ ಸ್ಥಳೀಯರೂ ಕೈಜೋಡಿಸಿ ತೆರವುಗೊಳಿಸುತ್ತಿದ್ದಾರೆ. ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಆಲೇಕಟ್ಟೆ, ಗಾಂಧಿನಗರ ಭಾಗಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗದ ಮೇಲೆ ಬಿದ್ದಿದ್ದ ಮರಗಳನ್ನು ಸ್ಥಳೀಯ ಯುವಕರು ತೆರವುಗೊಳಿಸಿದರು. ಇದರೊಂದಿಗೆ ತಂತಿಗೆ ತಾಗುತ್ತಿದ್ದ ಮರದ ಕೊಂಬೆಗಳನ್ನು ಕಡಿದು ವಿದ್ಯುತ್ ಲೈನ್ ದುರಸ್ತಿ ಮಾಡಿದ ಪರಿಣಾಮ ಮಧ್ಯಾಹ್ನದ ನಂತರ ಈ ಭಾಗಕ್ಕೆ ವಿದ್ಯುತ್ ಸರಬರಾಜಾಯಿತು.
ಭಾರೀ ಮಳೆಯಿಂದಾಗಿ ಗ್ರಾಮೀಣ ಭಾಗದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿವೆ. ಡಾಂಬರು ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ.
ಇಂದು ಮಧ್ಯಾಹ್ನ ನಂತರ ಮಳೆಯ ತೀವ್ರತೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಜನರಲ್ಲಿ ಸಮಾಧಾನ ಮೂಡಿಸಿದೆ. ಪುಷ್ಪಗಿರಿ ಬೆಟ್ಟಶ್ರೇಣಿಯ ಗ್ರಾಮಗಳಾದ ಹೆಗ್ಗಡಮನೆ, ಕೊತ್ನಳ್ಳಿ, ನಾಡ್ನಳ್ಳಿ, ಹಂಚಿನಳ್ಳಿ, ಕುಮಾರಳ್ಳಿ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.
ಮನೆಗಳಿಗೆ ಹಾನಿ: ಭಾರೀ ಮಳೆಗೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹಲವು ವಾಸದ ಮನೆಗಳಿಗೆ ಹಾನಿಯಾಗಿವೆ. ಭಾರೀ ಗಾಳಿಗೆ ತಾಲೂಕಿನ ಅಭಿಮಠ ಬಾಚಳ್ಳಿ ಗ್ರಾಮದ ಕಮಲಮ್ಮ ಎಂಬವರ ಮನೆಯ ಛಾವಣಿ ಹಾರಿ ಹೋಗಿದ್ದು, ಭಾರೀ ನಷ್ಟ ಸಂಭವಿಸಿದೆ. ನಿನ್ನೆ ರಾತ್ರಿ ಕಮಲಮ್ಮ ಅವರ ಕುಟುಂಬ ಮನೆಯೊಳಗೆ ಇದ್ದ ಸಂದರ್ಭ, ಜೋರಾಗಿ ಗಾಳಿ ಬೀಸಿದ್ದರಿಂದ ಮನೆಯ ಶೀಟ್ಗಳು ಹಾರಿಹೋಗಿವೆ. ಸದ್ಯ ಕುಟುಂಬಸ್ಥರು ನೆರೆಕರೆಯ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.
ಕಳೆದ ವರ್ಷವಷ್ಟೇ ಗ್ರಾಮ ಪಂಚಾಯಿತಿ ಮೂಲಕ ಮಂಜೂರಾದ ಅನುದಾನದಲ್ಲಿ ನಿರ್ಮಾಣಗೊಂಡಿದ್ದ ಮನೆ ಈ ವರ್ಷದ ಗಾಳಿ ಮಳೆಗೆ ಜಖಂಗೊಂಡಿದ್ದು, ನಷ್ಟ ಸಂಭವಿಸಿದೆ.
ಇದರೊಂದಿಗೆ ಯಡವನಾಡು ಗ್ರಾಮದ ಆಶಾ ಎಂಬವರ ವಾಸದ ಮನೆಯ ಗೋಡೆ ಹಾಗೂ ಛಾವಣಿ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಮನೆಯ ಹೆಂಚುಗಳು ಒಡೆದು ಹೋಗಿದ್ದು, ಗೋಡೆಯ ಒಂದು ಪಾಶ್ರ್ವ ಕುಸಿದು ಬಿದ್ದಿದೆ. ಮನೆಯೊಳಗೆ ವಾಸ ಮಾಡಲು ಅಯೋಗ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ ಕಲ್ಲಾರೆ ಗ್ರಾಮದ ಶಾಂತಿ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿದುಬಿದ್ದಿದ್ದು, ನಷ್ಟ ಸಂಭವಿಸಿದೆ. ಮಳೆಯಿಂದಾಗಿ ಅತೀ ಶೀತಗೊಂಡಿದ್ದ ಮನೆಯ ಗೋಡೆ ಇಂದು ಮುಂಜಾನೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾ.ಪಂ. ಮಾಜೀ ಸದಸ್ಯೆ ಮಂಜುಳಾ ಸುಬ್ರಮಣಿ ಭೇಟಿ ನೀಡಿದ್ದು, ಕಂದಾಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಶಾಂತಳ್ಳಿ ಹೋಬಳಿಯಾದ್ಯಂತ 8 ಮನೆಗಳಿಗೆ ಹಾನಿಯಾಗಿದೆ. ದೊಡ್ಡತೋಳೂರು ಗ್ರಾಮದ ಕೆ.ಎಂ. ಚಂಗಪ್ಪ ಎಂಬವರ ಮನೆ ಸಂಪೂರ್ಣ ಕುಸಿದುಬಿದ್ದಿದ್ದು, ಭಾರೀ ನಷ್ಟ ಸಂಭವಿಸಿದೆ. ಅವಘಡದ ಸ್ಥಳಗಳಿಗೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ರೆವಿನ್ಯೂ ಇನ್ಸ್ಪೆಕ್ಟರ್ ಗಣೇಶ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಲೂಕಿನ ಬೆಟ್ಟದಳ್ಳಿಯ ಕೆ.ಯು. ಪುಪ್ಪಯ್ಯ ಎಂಬವರಿಗೆ ಸೇರಿದ ಜಾನುವಾರು ಅತೀ ಶೀತದಿಂದ ಸಾವನ್ನಪ್ಪಿದೆ.
ಅಪಾಯದ ಅಂಚಿನಲ್ಲಿ ತೂಗು ಸೇತುವೆ
ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ತೆಪ್ಪದಕಂಡಿ ಬಳಿಯ ತೂಗು ಸೇತುವೆಯು ಮುಳುಗುವ ಭೀತಿಯಲ್ಲಿದೆ. ನಿರಂತರವಾಗಿ ಮಳೆ ಸುರಿದರೆ ನೀರಿನ ಸೆಳೆತ ಹೆಚ್ಚಾದರೆ ಸೇತುವೆ ಮೇಲೆ ನೀರು ಹರಿಯಲಿದೆ. ಮೈಸೂರು ಜಿಲ್ಲೆಗೆ ಸೇರಿದ ನೂರಾರು ಏಕರೆ ಪ್ರದೇಶದಲ್ಲಿ ಬೆಳೆದ ಭತ್ತ, ಶುಂಠಿ, ಬಾಳೆ, ಜೋಳದ ಬೆಳೆಗಳು ನಾಶವಾಗಿವೆ.
ಭಾರೀ ಮಳೆಗೆ ಕಾವೇರಿ ಪ್ರವಾಹ ಹೆಚ್ಚಾಗಿ ರಸ್ತೆಯಲ್ಲಿ ನೀರು ನುಗ್ಗಿ ಸಿದ್ದಾಪುರ ಮಾರ್ಗ ಸಂಪೂರ್ಣ ಬಂದ್ ಆಗಿದೆ. ತೆಪ್ಪದ ಕಂಡಿ ಬಳಿ ಹಲವು ಮನೆಗಳು ನೀರಿನಲ್ಲಿ ಮುಳುಗಿವೆ. ಗಂಧದ ಕೋಟೆ ಬಳಿ ರಸ್ತೆ ಬಂದ್ ಆಗಿ ವಾಹನಗಳು ಗುಮ್ಮನಕೊಲ್ಲಿ, ಹಾರಂಗಿ, ಗುಡ್ಡೆಹೊಸೂರು ಮಾರ್ಗವಾಗಿ ಚಲಿಸುತ್ತಿವೆ.
ಅಬ್ಯಾಲದಲ್ಲಿ ರಸ್ತೆ ಬದಿ ಕುಸಿತ
ಚೆಟ್ಟಳ್ಳಿ: ನಿರಂತರವಾಗಿ ಸುರಿಯುತ್ತಿರವ ಮಳೆಗೆ ಮಡಿಕೇರಿ-ಸಿದ್ದಾಪುರ ಸಂಪರ್ಕ ಕಲ್ಪಿಸುವ ಚೆಟ್ಟಳ್ಳಿ ಸಮೀಪದ ಅಬ್ಯಾಲದಲ್ಲಿ ರಸ್ತೆ ಬದಿ ಕುಸಿತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಅಬ್ಯಾಲದಲ್ಲಿ ಮೇಲ್ಭಾಗದಿಂದ ಗುಡ್ಡ ಕುಸಿಯುತ್ತಿದೆ.
ಚೆಟ್ಟಳ್ಳಿಯಿಂದ -ಕತ್ತಲೆಕಾಡುವರೆಗೆ ಅಲ್ಲಲ್ಲಿ ರಸ್ತೆಗಳ ಬದಿ ಬಿರುಕು ಬಿಟ್ಟಿದೆ. ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಆಗಸ್ಟ್ 25ರವರೆಗೆ ವಾಹನ ಸಂಚಾರ ನಿಬರ್ಂಧಿಸಲಾಗಿದೆ.
ಚೆಟ್ಟಳ್ಳಿ: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಚೆಟ್ಟಳ್ಳಿ ನಿವಾಸಿ ಸುರೇಶ ಎಂಬವರಿಗೆ ಸೇರಿದ ಗದ್ದೆ ನೀರು ತುಂಬಿ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಕೃಷಿ ಮಾಡಿದ ಭತ್ತದ ಸಸಿಗಳು ಸಂಪೂರ್ಣವಾಗಿ ನಾಶವಾಗಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುನಿತಾ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಳ್ಳೂರು ಇಂಟಿ ನಾಯಕನ ಕೆರೆ ಭರ್ತಿ
ಶನಿವಾರಸಂತೆ: ನಿಡ್ತ ಗ್ರಾ.ಪಂ.ವ್ಯಾಪ್ತಿಯ ಇತಿಹಾಸ ಹಿನ್ನೆಲೆ ಹೊಂದಿರುವ ಮುಳ್ಳೂರು ಇಂಟಿ ನಾಯಕನ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ. ಕುಶಾಲನಗರ-ಶನಿವಾರಸಂತೆ ಹೆದ್ದಾರಿ ಪಕ್ಕದಲ್ಲಿರುವ ಇಂಟಿ ನಾಯಕನ ಕೆರೆಯ ನೀರನ್ನು ನಾಲೆಯ ಮೂಲಕ ಮುಳ್ಳೂರು ಗ್ರಾಮದ ನೂರಾರು ಹೆಕ್ಟರ್ ಜಮೀನುಗಳಿಗೆ ಒದಗಿಸಲಾಗುತ್ತಿದೆ. ಹೆಚ್ಚುವರಿ ನೀರು ಗಾರೆಕಟ್ಟೆ ಹೊಳೆಗೆ ಸೇರಿಕೊಳ್ಳುತ್ತದೆ. ಕೆರೆ ಸಂಪೂರ್ಣವಾಗಿ ಭರ್ತಿಯಾಗಿದ್ದ ಹಿನ್ನೆಲೆ ನೀರನ್ನು ಬಿಡಲಾಗುತ್ತಿದೆ.
ಕಣಿವೆ ತೂಗುಸೇತುವೆ - ಸಂಚಾರಕ್ಕೆ ನಿರ್ಬಂಧ
ಕೂಡಿಗೆ: ಕುಶಾಲನಗರ ಡಿವೈಎಸ್ಪಿ ಶೈಲೇಂದ್ರ, ವೃತ ನಿರೀಕ್ಷಕ ಮಹೇಶ್ ಗ್ರಾಮಾಂತರ ಪೆÇಲೀಸ್ ಠಾಣಾಧಿಕಾರಿ ನಂದೀಶ್ ಕುಮಾರ್ ಅವರ ನೇತೃತ್ವದಲ್ಲಿ ಪೆÇಲೀಸ್ ಎನ್.ಡಿ.ಆರ್.ಎಫ್. ತಂಡ ಕಣಿವೆಯ ತೂಗುಸೇತುವೆ ಹತ್ತಿರ ಕಾವೇರಿ ನದಿ ತುಂಬಿ ಹರಿಯುತ್ತಿರುವುದನ್ನು ಪರಿಶೀಲನೆ ನಡೆಸಿದರು.
ನೀರಿನ ಮಟ್ಟ ಹೆಚ್ಚ್ಚಾಗುತ್ತಿರುವ ಹಿನ್ನೆಲೆ ಕಣಿವೆಯ ತೂಗುಸೇತುವೆಯ ಮೇಲೆ ಯಾರೂ ತಿರುಗಾಡದಂತೆ ಪೆÇಲೀಸರು ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧÀ ಮಾಡಿದ್ದಾರೆ. ಕಣಿವೆ ತೂಗುಸೇತುವೆಯ ಒಂದು ಭಾಗವು ನೀರಿನಿಂದ ಮುಳುಗಡೆಯಾಗಿದೆ ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣಾಧಿಕಾರಿ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಪೆÇನ್ನತ್ಮೊಟ್ಟೆಯಲ್ಲಿ ಮನೆ ಪಕ್ಕ ಮಣ್ಣು ಕುಸಿತ
ಚೆಟ್ಟಳ್ಳಿ,: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆ ಹಾಗೂ ಗಾಳಿಗೆ ಅಲ್ಲಲ್ಲಿ, ಭೂಕುಸಿತ ಹಾಗೂ ಬರೆ ಜರಿದಿದ್ದು, ಹಾನಿ ಉಂಟಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಚೇರಳ ಶ್ರೀಮಂಗಲದ ಪೆÇನ್ನತ್ಮೊಟ್ಟೆಯ ತೋಡು ಬದಿಯಲ್ಲಿರುವ ಐದು ಮನೆಗಳ ಪಕ್ಕದಲ್ಲೇ ಬರೆ ಕುಸಿದಿದ್ದು,ಎರಡು ಮನೆಗಳು ಅಪಾಯದ ಸ್ಥಿತಿಯಲ್ಲಿವೆ.
ಈರಳೆವಳಮುಡಿ, ಜೇನುಕೊಲ್ಲಿಯಲ್ಲಿ ಮನೆಯ ಪಕ್ಕದಲ್ಲೇ ಬರೆ ಜರಿದಿದ್ದು,ಮೂರು ಕುಟುಂಬವನ್ನು ಸ್ಥಳಾಂತರಿಸಲಾಗಿದೆ. ಬಕ್ಕಾ ಬೆಟ್ಟದ ಮೇಲೆ ವಾಸಿಸುತ್ತಿರುವ ಎರಡು ಮನೆಗಳು ಅಪಾಯ ಸ್ಥಿತಿಯಲ್ಲಿದ್ದು, ಚೆಟ್ಟಳ್ಳಿ ಗ್ರಾಮ ಪಂಚಾಯತಿಯಿಂದ ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರ ಮಾಡಲಾಗುವುದೆಂದು ಗ್ರಾಮ ಪಂಚಾಯತಿ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ಹೇಳಿದ್ದಾರೆ.
ಚೆಟ್ಟಳ್ಳಿ-ಮಡಿಕೇರಿ ಸಂಪರ್ಕ ಕಲ್ಪಿಸುವ ಅಬ್ಯಾಲದಲ್ಲಿ ಈಗಾಗಲೇ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿತ್ತು, ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ರಸ್ತೆಯ ಬದಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿತ ಸಂಭವಿಸಿದೆ.
ನಿರಂತರವಾಗಿ ಸುರಿಯುತ್ತಿರುವ ,ಭಾರೀ ಮಳೆ ಗಾಳಿಗೆ ಅಲ್ಲಲ್ಲಿ ಮರಬಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ಕಳೆದ ಐದು ದಿನಗಳಿಂದ ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ,ಕಂಡಕರೆ ,ಪೆÇನ್ನತ್ಮೊಟ್ಟೆ, ಕೂಡ್ಲೂರು ಚೆಟ್ಟಳ್ಳಿ, ಈರಳೆವಳಮುಡಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗ್ರಾಮಗಳಲ್ಲಿ ವಿದ್ಯುತ್ ಇಲ್ಲದೆ ಕಾರ್ಗತ್ತಲೆ ಆವರಿಸಿದೆ.
ಬಿಡುವು ನೀಡುತ್ತಾ ಸುರಿದ ಸಾಧಾರಣ ಮಳೆ
ಶನಿವಾರಸಂತೆ: ಹೋಬಳಿಯಾದ್ಯಂತ ಶುಕ್ರವಾರ ಮಳೆಯ ಪ್ರಮಾಣ ಕ್ಷೀಣಿಸಿತ್ತು. ಬೆಳಿಗ್ಗೆ ಸ್ವಲ್ಪ ಹೊತ್ತು ಜೋರಾಗಿ ಸುರಿದ ಮಳೆ ಮಧ್ಯಾಹ್ನದ ವೇಳೆಗೆ ಕ್ಷೀಣಿಸಿತ್ತು. ಸಂಜೆಯವರೆಗೂ ಆಗಾಗ್ಗೆ 10-15 ನಿಮಿಷ ಬಿಡುವು ನೀಡುತ್ತಾ, ಸಾಧಾರಣವಾಗಿ ಸುರಿಯಿತು. ಗಾಳಿಯ ರಭಸವೂ ಕಡಿಮೆಯಾಗಿತ್ತು. ಜನಜೀವನ ವಾಹನ ಸಂಚಾರ ಎಂದಿನಂತಿತ್ತು.
ಸೇತುವೆ ಮಟ್ಟಕ್ಕೆ ತುಂಬಿ ಹರಿದಿದ್ದ ಕಾಜೂರು ಹೊಳೆ, ಬಿಳಾಹ ಹೊಳೆಯಲ್ಲಿ ನೀರಿನ ಹರಿವು ತಗ್ಗಿದೆ. ಹೊಳೆಯ ಸುತ್ತಮುತ್ತ ಜಲಾವೃತ್ತಗೊಂಡಿದ್ದ ಗದ್ದೆಗಳಲ್ಲಿ ನೀರು ಖಾಲಿಯಾಗುತ್ತಾ ಬಂದಿದೆ. ನಾಟಿ ಮಾಡಿದ್ದ ಭತ್ತದ ಪೈರು ಕೊಚ್ಚಿ ಹೋಗಿದ್ದು, ಪುನಃ ಸಸಿಮಡಿ ನೆಡಬೇಕಾದ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ರೈತರು. ವಿದ್ಯುತ್ ಇಲಾಖೆ ನೌಕರರು ನೆಲಕಚ್ಚಿದ್ದ ವಿದ್ಯುತ್ ಕಂಬಗಳನ್ನು ದುರಸ್ತಿ ಪಡಿಸುತ್ತಿದ್ದು, ವಿದ್ಯುತ್ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿದಿದೆ.
ಹಾಸನ ರಸ್ತೆ ಬಂದ್
ಕುಶಾಲನಗರ ಹಾಸನ ರಾಜ್ಯ ಹೆದ್ದಾರಿಯ ಹೆಬ್ಬಾಲೆ ಬಳಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು ಶುಕ್ರವಾರ ಸಂಜೆ ಹಾಸನ ಸಂಪರ್ಕ ಬಂದ್ ಆಗಿದೆ.
ಗೋಡೆ ಕುಸಿತ : ನಷ್ಟ
ಕೂಡಿಗೆ : ಇಲ್ಲಿಗೆ ಸಮೀಪದ ಯಡವನಾಡು ಗ್ರಾಮ ಆಶಾ ಉಮೇಶ್ ಎಂಬವರಿಗೆ ಸೇರಿದ ಮನೆ ಬಾರಿ ಮಳೆಯಿಂದಾಗಿ ಮನೆ ಮುಂಭಾಗದ ಗೋಡೆ ಕುಸಿತಗೊಂಡಿದೆ. ಅಲ್ಲದೆ ಅದಕ್ಕೆ ಹೊಂದಿಕೊಂಡಂತೆ ಇದ್ದ ಮದ್ಯ ಭಾಗದ ಎಲ್ಲಾ ಮರದ ತೊಲೆಗಳು ಮುರಿದು ಬಿದ್ದಿವೆ.
ಸ್ಥಳಕ್ಕೆ ಐಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಡಿ. ರಮೇಶ್ ಸೇರಿದಂತೆ ಗ್ರಾಮದ ಮುಖ್ಯಸ್ಥರು, ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.