ಮಡಿಕೇರಿ, ಆ. 7: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮಳೆಗಾಲದ ತೀವ್ರತೆಯೇ ಇಲ್ಲದಂತೆ ಕಂಡುಬಂದಿತ್ತು. ಆದರೆ ಆಗಸ್ಟ್ 2ರ ಅಪರಾಹ್ನದ ನಂತರ ವಾತಾವರಣ ದಲ್ಲಿ ದಿಢೀರ್ ಬದಲಾವಣೆಯಾಗುವು ದರೊಂದಿಗೆ ಭಾರೀ ಗಾಳಿ - ಮಳೆ ಜಿಲ್ಲೆಯಲ್ಲಿ ಅಲ್ಲೋಲ - ಕಲ್ಲೋಲವನ್ನುಂಟುಮಾಡಿದೆ. ಕೇವಲ ಐದು ದಿನಗಳಲ್ಲಿ ಜಿಲ್ಲೆ ಮುಂಗಾರಿನ ಪ್ರತಾಪದಿಂದ ಜರ್ಜರಿತಗೊಂಡಿದ್ದು, ಸಾಕಷ್ಟು ಅನಾಹುತಗಳು ಘಟಿಸಿಹೋಗಿವೆ. ಕೇವಲ ಐದು ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 26.27 ಇಂಚಿನಷ್ಟು ಭಾರೀ ಮಳೆಯಾಗಿದೆ. ಮಳೆಯೊಂದಿಗೆ ಬಿರುಗಾಳಿಯ ರೀತಿಯಲ್ಲಿ ವಾಯುವಿನ ಅಬ್ಬರವೂ ಸೇರಿ ಕೊಂಡಿದ್ದು, ಅನಾಹುತಗಳು ಮುಂದುವರಿಯುತ್ತಿವೆ. ಜಿಲ್ಲಾ ಸರಾಸರಿ 26.27 ಇಂಚಿನಷ್ಟಾಗಿದ್ದರೆ, ಐದು ದಿನಗಳ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 32.89 ಇಂಚು, ವೀರಾಜಪೇಟೆಯಲ್ಲಿ 25.16 ಇಂಚು ಹಾಗೂ ಸೋಮವಾರ ಪೇಟೆ ತಾಲೂಕಿನಲ್ಲಿ 20.78 ಇಂಚಿನಷ್ಟು ಧಾರಾಕಾರ ಮಳೆ ಸುರಿದಿದೆ.

ತಾ. 6ರಂದು ಸರಾಸರಿ 7.22 ಇಂಚು ಜಿಲ್ಲೆಯಲ್ಲಿ ತಾ.5ರ ಬೆಳಿಗ್ಗೆ 8.30ರಿಂದ ತಾ.6ರ ಬೆಳಿಗ್ಗೆ 8.30ರ ವೇಳೆಗೆ 24 ಗಂಟೆಗಳ ಅವಧಿಯಲ್ಲಿ 6.49 ಇಂಚು ಸರಾಸರಿ ಮಳೆ ಯಾಗಿದ್ದರೆ, ತಾ.7ರಂದು ಈ ಪ್ರಮಾಣ 7.22 ಇಂಚಿನಷ್ಟಾಗಿದೆ. ಜಿಲ್ಲಾ ಸರಾಸರಿ 7.22 ಇಂಚಾದರೆ, ಮಡಿಕೇರಿ ತಾಲೂಕಿನಲ್ಲಿ 9.87 ಇಂಚು, ವೀರಾಜಪೇಟೆ 7.13 ಹಾಗೂ ಸೋಮವಾರಪೇಟೆಗೆ 4.67 ಇಂಚಿನಷ್ಟು ಸರಾಸರಿ ಮಳೆ 24 ಗಂಟೆಯ ಅವಧಿಯಲ್ಲಿ ಸುರಿದಿದೆ.

ಭಾಗಮಂಡಲಕ್ಕೆ ಮತ್ತೆ 16 ಇಂಚು (ಮೊದಲ ಪುಟದಿಂದ) ಭಾಗಮಂಡಲ ಹೋಬಳಿಗೆ ನಿನ್ನೆ 19.16 ಇಂಚು ಮಳೆಯಾಗಿದ್ದರೆ, ಮರುದಿನವಾದ ಇಂದು ಮತ್ತೆ 16 ಇಂಚಿನಷ್ಟು ಭಾರೀ ಮಳೆಯಾಗಿದೆ. ಉಳಿದಂತೆ ಜಿಲ್ಲೆಯ ಇತರ ಹೋಬಳಿಗಳಲ್ಲೂ ಕಳೆದ 24 ಗಂಟೆಗಳಲ್ಲಿ ಸುರಿದಿರುವ ಮಳೆ ದಾಖಲೆಯ ಪ್ರಮಾಣದಲ್ಲಿದೆ.

ಮಡಿಕೇರಿ ತಾಲೂಕಿನ ಮಡಿಕೇರಿ ಕ.ಸ.ಬಾ. 9.41, ಸಂಪಾಜೆ 5.2, ನಾಪೋಕ್ಲು 8.80, ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಕ.ಸ.ಬಾ. 7.12, ಹುದಿಕೇರಿ ಹೋಬಳಿಗೆ 7.92, ಅಮ್ಮತ್ತಿ 4.44, ಪೊನ್ನಂಪೇಟೆ 8.40, ಶ್ರೀಮಂಗಲ 8.34, ಬಾಳೆಲೆಗೆ 6.60 ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಸೋಮವಾರಪೇಟೆ ಕ.ಸ.ಬಾ. 3.15, ಶಾಂತಳ್ಳಿ 10.92, ಕೊಡ್ಲಿಪೇಟೆ 5.76, ಶನಿವಾರಸಂತೆ 4.10, ಕುಶಾಲನಗರ 1.48 ಹಾಗೂ ಸುಂಟಿಕೊಪ್ಪ ಹೋಬಳಿಗೆ 2.61 ಇಂಚು ಮಳೆಯಾಗಿದೆ.