ಮಡಿಕೇರಿ, ಆ.7: ದಕ್ಷಿಣ ಕೊಡಗಿನಾದ್ಯಂತ ಮಳೆ-ಗಾಳಿ ಮುಂದುವರಿದಿದ್ದು, ಏರಿಕೆಯಾಗಿರುವ ನೀರಿನ ಮಟ್ಟ ಹಾಗೂ ಬೀಳುತ್ತಿರುವ ಮರಗಳು, ವಿದ್ಯುತ್ ಕಂಬಗಳು, ಮತ್ತಿತರ ಹಲವು ಕಾರಣಗಳಿಂದಾಗಿ ವೀರಾಜಪೇಟೆ ತಾಲೂಕಿನೆಲ್ಲೆಡೆ ಬರಪೂರ ಸಮಸ್ಯೆಗಳು ಎದುರಾಗುತ್ತಿವೆ. ಸಿದ್ದಾಪುರ ವಿಭಾಗ, ಗೋಣಿಕೊಪ್ಪಲು, ಬಲ್ಯಮಂಡೂರು ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ವೀರಾಜಪೇಟೆ ನಗರ ವ್ಯಾಪ್ತಿಯ ಆಯಕಟ್ಟಿನ ಪ್ರದೇಶಗಳು ಸೇರಿದಂತೆ ತಾಲೂಕಿನ ಇನ್ನಿತರ ಕಡೆಯಲ್ಲಿ ಅಪಾಯದಂಚಿನ ಸ್ಥಳಗಳಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ತಾಲೂಕಿನ ಗ್ರಾಮೀಣ ಭಾಗಗಳಲ್ಲೂ ಹೆಚ್ಚಿನ ತೊಂದರೆಯಾಗುತ್ತಿರುವ ಕುರಿತು ವರದಿಯಾಗಿದೆ. ವೀರಾಜಪೇಟೆ : ನೆಹರೂ ನಗರದಲ್ಲಿ ಮರಬಿದ್ದು ಮನೆ ಜಖಂ

ವೀರಾಜಪೇಟೆ ವಿಭಾಗದಲ್ಲಿ ನಿನ್ನೆರಾತ್ರಿ ಸುರಿದ ಭಾರೀ ಮಳೆಗೆ ನೆಹರೂ ನಗರದಲ್ಲಿ ಶಾವುಲ್ ಹಮೀದ್ ಎಂಬವರಿಗೆ ಸೇರಿದ ಮನೆಯ ಮೇಲೆ ಮರ ಬಿದ್ದು ಜಖಂಗೊಂಡಿದೆ. ಮಲೆತಿರಿಕೆ ಬೆಟ್ಟದಲ್ಲಿ ಮನೆಯೊಂದರ ಕೆಳಗೆ ಮಣ್ಣು ಕುಸಿದು ಜಖಂಗೊಂಡಿದೆ. ಇಲ್ಲಿನ ಅಪ್ಪಯ್ಯಸ್ವಾಮಿ ರಸ್ತೆಯ ಕೀರ್ತಿ ಲೇಔಟ್‍ನಲ್ಲಿ ಬರೆ ಬಿದ್ದು ತಡೆಗೋಡೆ ಜಖಂಗೊಂಡು ಬೆಟ್ಟದ ನೀರು ಮನೆಯೊಳಗೆ ಹರಿಯುತ್ತಿದೆ ಎಂದು ಅಲ್ಲಿನ ನಿವಾಸಿಯೊಬ್ಬರು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದಾರೆ. ಅರಸುನಗರ, ಮಲೆತಿರಿಕೆ ಬೆಟ್ಟ ಹಾಗೂ ನೆಹರೂ ನಗರದ ಬೆಟ್ಟದ ಪ್ರದೇಶದಲ್ಲಿ ಕೆಲವು ಕುಟುಂಬಗಳು ಭಾರೀ ಮಳೆಯಿಂದಾಗಿ ಭಯದ ವಾತಾವರಣದಲ್ಲಿ (ಮೊದಲನೇ ಪುಟದಿಂದ) ಜೀವನ ಸಾಗಿಸುತ್ತಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಗಂಜಿ ಕೇಂದ್ರಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ.

ವೀರಾಜಪೇಟೆಯ ಪಂಜರ್‍ಪೇಟೆ ಬಳಿಯ ಸುಭಾಶ್ ನಗರದಲ್ಲಿ ರಸ್ತೆಯ ಮೇಲೆ ಸುಮಾರು ಎರಡು ಅಡಿಗಳಷ್ಟು ನೀರು ಹರಿಯುತ್ತಿದ್ದು ಇಲ್ಲಿನ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ವೀರಾಜಪೇಟೆಯಿಂದ ದೇವಣಗೇರಿ ಮೈತಾಡಿ ಮುಖ್ಯ ರಸ್ತೆಯಲ್ಲಿ ಭಾರೀ ಮರವೊಂದು ಬಿದ್ದು ಕೆಲವು ಗಂಟೆಗಳ ರಸ್ತೆ ಸಂಚಾರಕ್ಕೆ ತಡೆ ಉಂಟಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಮರವನ್ನು ಕಡಿದು ರಸ್ತೆ ಸಂಚಾರಕ್ಕೆ ತೆರವು ಮಾಡಿಕೊಟ್ಟಿದ್ದಾರೆ.

ವೀರಾಜಪೇಟೆ ಬಳಿಯ ಕದನೂರು ಗ್ರಾಮದಲ್ಲಿ ನಾಟಿಗದ್ದೆ ಹಾಗೂ ಬಾಣೆಜಾಗದ ಮೇಲೆ ನೀರು ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಇದೇ ರೀತಿಯಲ್ಲಿ ಬೇಟೊಳಿ ಗ್ರಾಮದಲ್ಲಿ ನಾಟಿ ಮಾಡಿದ ಅನೇಕ ಗದ್ದೆಗಳು ಜಲಾವೃತ್ತಗೊಂಡಿದೆ.

ತಾಲೂಕು ಆಡಳಿತದಿಂದ ಇಲ್ಲಿನ ಚಿಕ್ಕಪೇಟೆಯ ಬಳಿಯ ಮಾದರಿ ಪ್ರಾಥಮಿಕ ಶಾಲೆ ಕೇಂದ್ರದಲ್ಲಿ ಗಂಜಿ ಕೇಂದ್ರವನ್ನು ಆರಂಭಿಸಿದ್ದರೂ ಕೇವಲ ಐದು ಕುಟುಂಬಗಳು ಮಾತ್ರ ಗಂಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ.

ಸಿದ್ದಾಪುರ : ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡಂಗೇರಿ ಭಾಗದ ಪ್ರವಾಹಕ್ಕೆ ಸಿಲುಕಿ ಮನೆ ಮುಳುಗಡೆಗೊಂಡಿರುವ 8 ಕುಟುಂಬಗಳನ್ನು ಕೊಂಡಂಗೇರಿ ಸರಕಾರಿ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಗ್ರಾಮಲೆಕ್ಕಿಗ ಗೌಡ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳದಲ್ಲಿ ಹಾಜರಿದ್ದು, ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಗೋಣಿಕೊಪ್ಪಲುವಿನ ಬಡಾವಣೆಗಳು ಜಲಾವೃತ.!

ಪರಿಹಾರ ಕೇಂದ್ರ ಆರಂಭ

ಕಳೆದ ಐದು ದಿನಗಳಿಂದ ಒಂದೇ ಸಮನೆ ಸುರಿಯುತ್ತಿದ್ದ ವರುಣನ ಅಬ್ಬರಕ್ಕೆ ಗೋಣಿಕೊಪ್ಪಲುವಿನ ಕೆಲವು ಬಡಾವಣೆಗಳು ಜಲಾವೃತಗೊಂಡಿದೆ. ಮುಂಜಾನೆಯಿಂದಲೇ ಸ್ಥಳೀಯ ಜಿ.ಪಂ.ಸದಸ್ಯರಾದ ಸಿ.ಕೆ.ಬೋಪಣ್ಣ ಜಲಾವೃತ ಬಡಾವಣೆಗೆ ತೆರಳಿ ನೀರು ನುಗ್ಗಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತುರ್ತು ಕ್ರಮಕೈಗೊಳ್ಳುವ ಸಲುವಾಗಿ ರೆವಿನ್ಯೂ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪಂಚಾಯಿತಿ ಪಿಡಿಒಗೆ ನಿರ್ದೇಶನ ನೀಡಿದರು.ಕೀರೆಹೊಳೆಯ ಪ್ರವಾಹದ ನೀರು ನಗರದ ಎರಡನೇ ವಿಭಾಗದ ಗುಡಿಸಲು ಮನೆಗಳಿಗೆ ನುಗ್ಗಿದ ಪರಿಣಾಮ 7 ಗುಡಿಸಲು ವಾಸಿಗಳನ್ನು ಸರಕಾರಿ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು.

ಕೀರೆಹೊಳೆಯ ನೀರಿನ ಹರಿವು ಗಂಟೆಗೊಮ್ಮೆ ಹೆಚ್ಚಾಗುತ್ತಿದ್ದು ಕೀರೆಹೊಳೆಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಯ ನೀರು 2ನೇ ವಿಭಾಗ, ನೇತಾಜಿ ಹಾಗೂ ಕಾವೇರಿ ಹಿಲ್ಸ್ ಬಡಾವಣೆಯ ಕೆಲವು ಮನೆಗಳಿಗೆ ನುಗ್ಗಿದ ಹಿನ್ನೆಲೆಯಲ್ಲಿ ಮನೆಯವರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳಲು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಮನವಿ ಮಾಡಿದರು. ಇನ್ನೂ ಕೂಡಾ ಮಳೆಯ ರಭಸ ಅಧಿಕಗೊಳ್ಳುವ ನಿರೀಕ್ಷೆಯಿರುವುದರಿಂದ ಎಚ್ಚರಿಕೆ ವಹಿಸಲು ತಿಳಿಸಿದರು.ನೀರು ನುಗ್ಗಿದ ಬಹುತೇಕ ಮನೆಯವರು ಅಗತ್ಯ ಸಾಮಗ್ರಿಗಳೊಂದಿಗೆ ಬಂಧುಗಳ ಮನೆಯಲ್ಲಿ ಆಶ್ರಯ ಪಡೆಯಲು ತೆರಳಿದರು.

ಗೋಣಿಕೊಪ್ಪ, ಪೆÇನ್ನಂಪೇಟೆ ಸಂಪರ್ಕ ರಸ್ತೆಯ ಕೈತೋಡು ತುಂಬಿದ ಕಾರಣ ಸಮೀಪದ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದವು,ಇದರಿಂದಾಗಿ ಗೋಡೌನ್‍ನಲ್ಲಿ ಶೇಖರಿಸಿಟ್ಟಿದ್ದ ಕರಿಮೆಣಸು,ಕಾಫಿಯನ್ನು ಲಾರಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಯಿತು. ಕೀರೆಹೊಳೆಯನ್ನು ಕಳೆದ ಬಾರಿ ಹೂಳು ತೆಗೆದು ಶುಚಿ ಮಾಡಿದ್ದರೂ ನೀರಿನ ಪ್ರಮಾಣ ಹೆಚ್ಚಾದ ಕಾರಣ ಬೈಪಾಸ್ ರಸ್ತೆಯ ಕೈತೋಡು ಕೂಡ ತುಂಬಿ ಬಂದವು,ನಾಲ್ಕನೇ ವಿಭಾಗದ ಪಟೇಲ್ ನಗರದ ಮಲ್ಚಿರ ಗಾಂಧಿ ದೇವಯ್ಯ ಅವರ ಸರ್ವೀಸ್ ಸ್ಟೇಷನ್‍ಗೆ ನೀರು ನುಗ್ಗಿದೆ.

ಈ ಭಾಗದ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ಕೀರೆಹೊಳೆಯ ತೋಡನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಕಾರಣದಿಂದಾಗಿ ಪ್ರತಿವರ್ಷ ಮಳೆಗಾಲದಲ್ಲಿ ನೀರಿನ ಪ್ರವಾಹ ಹೆಚ್ಚಾಗಲು ಕಾರಣವಾಗಿವೆ.ಬೈಪಾಸ್ ರಸ್ತೆಯ ಕೈತೋಡು ಕೂಡ ಒತ್ತುವರಿಯಿಂದ ಹೊರತಾಗಿಲ್ಲ. ತಾಲ್ಲೂಕು ರೆವಿನ್ಯೂ ಅಧಿಕಾರಿಗಳಾದ ರಾಧಕೃಷ್ಣ, ಗ್ರಾಮಲೆಕ್ಕಿಗರಾದ ಮಂಜುನಾಥ್, ಯಶ್ವಂತ್ ನಗರದಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಖುದ್ದು ಹಾಜರಿದ್ದು ಕ್ಷಣ ಕ್ಷಣದ ಮಾಹಿತಿಗಳನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಿದರು.ಪಿಡಿಒ ಶ್ರೀನಿವಾಸ್, ಪಂಚಾಯಿತಿ ಸದಸ್ಯರಾದ ರಾಮಕೃಷ್ಣ, ಸುರೇಶ್ ರೈ,ಎಂ.ಮಂಜುಳ,ಪಂಚಾಯಿತಿ ಸಿಬ್ಬಂದಿಗಳು ಪರಿಹಾರ ಕೇಂದ್ರದಲ್ಲಿ ಅಗತ್ಯ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ವಿದ್ಯುತ್ ಇಲ್ಲದ ಕಾರಣ ಕುಡಿಯುವ ನೀರಿಗೆ ತೊಂದರೆಯಾಗಿದ್ದು ಪರಿಹಾರ ಕೇಂದ್ರದಲ್ಲಿ ನೀರಿನ ವ್ಯವಸ್ಥೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಪಂಚಾಯ್ತಿ ಸಿಬ್ಬಂದಿಗೆ ಸೂಚನೆ ನೀಡಿದರು. ಪರಿಹಾರ ಕೇಂದ್ರದಲ್ಲಿ ಶುಚಿತ್ವ ಕಾಪಾಡುವುದರೊಂದಿಗೆ ಊಟದ ವ್ಯವಸ್ಥೆಗೆ ಅಡುಗೆಯವರನ್ನು ನೇಮಕಗೊಳಿಸಿ ಸಮಯಕ್ಕೆ ಸರಿಯಾಗಿ ಆಹಾರ ವಿತರಿಸುವಂತೆ ರೆವೆನ್ಯೂ ಅಧಿಕಾರಿ ರಾಧಕೃಷ್ಣ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು. ಕಳೆದ ಬಾರಿ ಸುರಿದ ಮಳೆಯಿಂದ ಈ ಪ್ರದೇಶವು ಜಲಾವೃತಗೊಂಡಿದ್ದವು.ಆ ಸಂದರ್ಭದಲ್ಲಿ ಒತ್ತುವರಿದಾರರನ್ನು ತೆರವು ಮಾಡುವ ಬಗ್ಗೆ ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು ಆದರೆ ನಂತರದಲ್ಲಿ ಈ ಕಾರ್ಯ ನೆನೆಗುದಿಗೆ ಬಿದ್ದಿತ್ತು.

ಕೊರೊನಾ ಪರೀಕ್ಷೆ - ಕೊರೊನಾ ಸೋಂಕಿನ ಭೀತಿ ಹಿನ್ನಲೆಯಲ್ಲಿ ಸುರಕ್ಷಿತ ಕ್ರಮವಾಗಿ ಮುನ್ನಚ್ಚರಿಕೆ ವಹಿಸಲು ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಪರಿಹಾರ ಕೇಂದ್ರಕ್ಕೆ ಆಗಮಿಸುವವರನ್ನು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಲು ತಾ. ವೈದ್ಯಾಧಿಕಾರಿಗಳಾದ ಡಾಕ್ಟರ್ ಯತಿರಾಜ್‍ರವರಿಗೆ ಜಿ.ಪಂ.ಸದಸ್ಯರಾದ ಸಿ.ಕೆ.ಬೋಪಣ್ಣ ಸೂಚನೆ ನೀಡಿದರು. ಶನಿವಾರ ಮುಂಜಾನೆಯಿಂದಲೇ ಪರಿಹಾರ ಕೇಂದ್ರದಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪರೀಕ್ಷೆಗೆ ಒಳಗಾದವರು ಅನಾವಶ್ಯಕವಾಗಿ ಪರಿಹಾರ ಕೇಂದ್ರದಿಂದ ಹೊರಗೆ ಒಡಾಡದಂತೆ ಎಚ್ಚರಿಕೆ ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿ.ಕೆ.ಬೋಪಣ್ಣ ಅಧಿಕಾರಿಗಳಿಗೆ ಮನವಿ ಮಾಡಿದರು.

ಶಾಲಾ ಗೋಡೆ ಕುಸಿತ

ಗೋಣಿಕೊಪ್ಪಲು : ಎಡೆÀಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಗೋಣಿಕೊಪ್ಪಲುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಒಂದು ಗೋಡೆಯು ಮಳೆಯ ರಭಸಕ್ಕೆ ಕುಸಿದು ಬಿದ್ದಿದೆ.ಸ್ಥಳಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಕೆ.ಬೋಪಣ್ಣ, ತಾಲೂಕು ಪಂಚಾಯ್ತಿ ಸದಸ್ಯ ಜಯ ಪೂವಯ್ಯ ಹಾಗೂ ಕಂದಾಯ ಅಧಿಕಾರಿ ರಾಧಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ಗೋಣಿಕೊಪ್ಪಲು : ಸುರಿಯುತ್ತಿರುವ ಮಳೆಯಿಂದಾಗಿ ನಗರದ ಕೀರೆ ಹೊಳೆಯು ತುಂಬಿ ಹರಿಯುತ್ತಿದ್ದು, ಈ ನದಿಯ ಪಾತ್ರದ ಕಾವೇರಿ ಹಿಲ್ಸ್ ಬಡಾವಣೆಯಲ್ಲಿ ನೆಲೆಸಿರುವ ಕೆಲವು ಮಂದಿ ತಮ್ಮ ಮನೆಯಿಂದ ಬಂಧುಗಳ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡರು. ಅಗತ್ಯ ಸಾಮಗ್ರಿಗಳೊಂದಿಗೆ ಆಟೋರಿಕ್ಷಾದ ಮೂಲಕ ತೆರಳಿದರು.

ಕೊರೊನಾ ಭಯ : ಬಾರದ ಜನ

ಗೋಣಿಕೊಪ್ಪ ವರದಿ : ಶುಕ್ರವಾರ ಕೀರೆ ಹೊಳೆ ದಂಡೆಯಲ್ಲಿರುವ 11 ಮನೆಗಳಿಗೆ ನೀರು ನುಗ್ಗಿದ್ದು, ಕೊರೊನಾ ಪರೀಕ್ಷೆ ಭಯದಿಂದಾಗಿ ಪರಿಹಾರ ಕೇಂದ್ರಕ್ಕೆ ಬಾರದೆ ನೆಂಟರ ಮನೆಗೆ ತೆರಳಿರುವುದು ಅಧಿಕಾರಿ ವರ್ಗಕ್ಕೆ ತೊಂದರೆಯಾಗಿದೆ.

ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, 11 ಕುಟುಂಬಗಳ 28 ಜನ ಸದಸ್ಯರನ್ನು ಪ್ರವಾಹ ಪ್ರದೇಶದಿಂದ ಹೊರ ಬರುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಕ್ರಮಕೈಗೊಂಡಿದೆ. ಕೊರೊನಾ ಪರೀಕ್ಷೆ ಕಡ್ಡಾಯ ಎಂಬ ಕಾರಣಕ್ಕೆ ಪರಿಹಾರ ಕೇಂದ್ರಕ್ಕೆ ಬರುತ್ತಿಲ್ಲ. ಪಿಡಿಒ ಶ್ರೀನಿವಾಸ್ ಹಾಗೂ ಕಾರ್ಯಕರ್ತರುಗಳು ಅಗತ್ಯ ವಸ್ತುಗಳನ್ನು ಕೇಂದ್ರದಲ್ಲಿ ಕಾಯ್ದಿರಿಸಿದ್ದಾರೆ. ಯಾವ ಸಂದರ್ಭದಲ್ಲೂ ಅವರಿಗೆ ತೊಂದರೆಯಾಗದ ರೀತಿಯಲ್ಲಿ ಆಹಾರ ವಸ್ತುಗಳನ್ನು ತಂದು ಇಡಲಾಗಿದೆ ಎಂದು ಪಿಡಿಒ ಶ್ರೀನಿವಾಸ್ ತಿಳಿಸಿದ್ದಾರೆ.

ರಕ್ಷಣಾ ಕಾರ್ಯ

ವೀರಾಜಪೇಟೆ ವಲಯದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಘಟಕದ ವತಿಯಿಂದ ಮಳೆಯಲ್ಲಿ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.

ಸಂಯೋಜಕಿ ರೇಖಾ ಗಣೇಶ್, ಉಪಾಧ್ಯಕ್ಷ ಪಿ.ಸಿ. ರಂಜನ್ ಹಾಗೂ ಸ್ವಯಂ ಸೇವಕರಾದ ಶರತ್, ಸಬಿತಾ ನವೀನ್, ಗಣೇಶ್‍ಗೌಡ, ಮೋಹನ್, ಮನೋಜ್ ತೊಡಗಿಕೊಂಡಿದ್ದಾರೆ.

ಕಂಡಂಗಾಲ ಗ್ರಾಮದಲ್ಲಿ ಬುಧವಾರ ಮಳೆಗೆ ಬಿ. ಸಿ. ಮೊಣ್ಣಪ್ಪ ಅವರ ಮನೆ ಮೇಲೆ ಮರ ಬಿದ್ದ ಸಂದರ್ಭ ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸುವಲ್ಲಿ ನೆರವಾಗಿದ್ದಾರೆ.

ಹೆಗ್ಗಳ ಕಾಲನಿಯ ದೇವಪ್ಪ ಅವರ ಮನೆಗೆ ಕಾಲುದಾರಿ ಇರುವುದರಿಂದ ತೊಂದರೆಯಾಗಿದೆ. ಅವರಿಗೆ ಶಾಶ್ವತ ರಸ್ತೆ ನಿರ್ಮಿಸಿಕೊಡುವಂತೆ ಜಿ. ಪಂ. ಸದಸ್ಯ ಅಚ್ಚಪಂಡ ಮಹೇಶ್ ಅವರಲ್ಲಿ ಗಮನ ಸೆಳೆದಿದ್ದರು. ಕಾಲುದಾರಿಯಲ್ಲಿ ಜಲ ಇರುವುದರಿಂದ, ಮಳೆಯ ನಂತರ ರಸ್ತೆ ದುರಸ್ತಿ ಪಡಿಸುವ ಭರವಸೆ ಮಹೇಶ್ ನೀಡಿದ್ದಾರೆ. (ಏಳನೇ ಪುಟಕ್ಕೆ)