ಕೋವಿಡ್ ಎನ್ನುವದು ಸಾಮಾನ್ಯ ಕಾಯಿಲೆ. ಇದನ್ನು ಧೈರ್ಯದಿಂದ ಎದುರಿಸಿ, ಖಂಡಿತ ಭಯ ಪಡಬೇಕಾಗಿಲ್ಲ ಎಂದು ಕರೆ ನೀಡಿದವರು ಯಾವದೋ ಭಾಷಣಕಾರನಲ್ಲ. ಕೊರೊನಾ ಪಾಸಿಟಿವ್ಗೆ ಒಳಗಾಗಿದ್ದು, ಅಲ್ಲದೆ, ವೈದ್ಯಕೀಯ ವಿಭಾಗದ ನಿಕಟವರ್ತಿಯಾಗಿರುವ ವ್ಯಕ್ತಿಯೊಬ್ಬರು “ಶಕ್ತಿ”ಯೊಂದಿಗೆ ಮಾತನಾಡಿದಾಗ ಹೇಳಿದ ನೈಜ ಅನುಭವದ ಅಭಿಮತವಿದು.
ಮೂರ್ನಾಡುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಫಾರ್ಮೇಸಿಸ್ಟ್ ಆಗಿರುವ ವಿ.ಎ. ನೌಷದ್ (45) ಅವರು ಪತ್ನಿ, ಮೂವರು ಮಕ್ಕಳ ಸಹಿತ ಮೂರ್ನಾಡುವಿನಲ್ಲಿಯೇ ವಾಸವಾಗಿದ್ದಾರೆ. ಆರೋಗ್ಯ ಕೇಂದ್ರದಲ್ಲಿ ಓರ್ವ ಆಶಾ ಕಾರ್ಯಕರ್ತೆ ಹಾಗೂ ನೇತ್ರ ಚಿಕಿತ್ಸಾ ಸಹಾಯಕರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತು. ಇದರಿಂದ ನೌಷದ್ ಅವರಿಗೂ ಬಂದಿತು. ತನಗೆ ಶೀತ, ಜ್ವರ, ನೆಗಡಿ ಕಾಣಿಸಿಕೊಂಡಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ತಾನು ಕುಟುಂಬದೊಂದಿಗೆ ವಾಸಿಸುತ್ತಿದ್ದ ಕ್ವಾರ್ಟರ್ಸ್ನಲ್ಲಿ ಮನೆಯವರ ಕ್ಷೇಮಕ್ಕಾಗಿ ತಾನು ಪ್ರತ್ಯೇಕ ಕೋಣೆಯಲ್ಲಿದ್ದು ಪ್ರತ್ಯೇಕ ಆಹಾರ ಸೇವಿಸುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಾರೆ. ಮೂರ್ನಾಡು ಆಸ್ಪತ್ರೆಯ ವೈದ್ಯರಿಂದಲೇ ಚಿಕಿತ್ಸೆ ಪಡೆದು ಜ್ವರ-ಶೀತ ಶೇ. 70 ರಷ್ಟು ವಾಸಿಯಾಗಿತ್ತು ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ತಾನು ಗಂಟಲು ದ್ರವವನ್ನು ಮೂರ್ನಾಡುವಿನಲ್ಲಿಯೇ ವೈದ್ಯರ ಬಳಿ ನೀಡಿ ಮಡಿಕೇರಿಗೆ ಕಳುಹಿಸಲಾಗಿತ್ತು. ಆ ಸಂದರ್ಭ ಮಡಿಕೇರಿಯಲ್ಲಿ ಲ್ಯಾಬ್ ಅನ್ನು ಅಲ್ಲಿನ ಸಿಬ್ಬಂದಿಗೆ ಕೊರೊನಾ ಬಂದ ಹಿನ್ನೆಲೆ ಮುಚ್ಚಲಾಗಿತ್ತು. ಅಂತೂ ತಾನು ದ್ರವ ನೀಡಿದ ಬಳಿಕ ಒಂದು ವಾರವಾದ ನಂತರ ತನ್ನ ಪರೀಕ್ಷಾ ವರದಿ ಬಂದಿತು. ಆಗ ಡಾ. ಮಹೇಶ್ ಅವರು ತನಗೆ ಪಾಸಿಟಿವ್ ಬಂದುದಾಗಿ ತಿಳಿಸಿದ್ದು ತಾನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾದೆ ಎಂದು ನೌಷದ್ ಮಾಹಿತಿಯಿತ್ತರು. ಆಸ್ಪತ್ರೆಯಲ್ಲಿ ನಿಜಕ್ಕೂ ತನ್ನನ್ನುಚೆನ್ನಾಗಿ ನೋಡಿಕೊಂಡರು. ತನಗೆ ರೂ. 70 ಬೆಲೆಯ ಆ್ಯಂಟಿಬಯಾಟಿಕ್, ಮಲೇರಿಯಾಕ್ಕೆ ನೀಡುವ ಔಷಧಿ ಇತ್ಯಾದಿಗಳನ್ನು ನೀಡಿದರು. ಅಲ್ಲಿ ಸಮರ್ಪಕ ಆಹಾರವೂ ನೀಡಲ್ಪಡುತ್ತಿತ್ತು. ಸರಳ ಆಹಾರ. ಆದರೂ ಪರವಾಗಿಲ್ಲ. ಕಾಫಿ, ಮಾಲ್ಟ್ ಬಿಸ್ಕೆಟ್ಗಳನ್ನು ಕೂಡ ಕೊಡುತ್ತಾರೆ. ಆದರೆ, ನಮ್ಮ ಸೇವೆ ಮಾಡುವ ಸಿಸ್ಟರ್ಗಳನ್ನು ನೋಡಿ ಕೃತಜ್ಞತೆ ಮೂಡಿತು ಇವರುಗಳು ಸುಮಾರು 8 ಗಂಟೆ ಕಾಲ ಪಿಪಿಇ ಕಿಟ್ಗಳನ್ನು ಹಾಕಿಕೊಂಡು ಬೆವರನ್ನೂ ಲೆಕ್ಕಿಸದೆ ಶ್ರಮಿಸುತ್ತಾರೆ. ಅಂತೂ ನನಗೆ ನೆಗೆಟಿವ್ ಬಂದು 6ನೇ ದಿನಕ್ಕೆ ಡಿಸ್ಚಾರ್ಜ್ ಆದೆ. ಬಳಿಕ ಕೆಲವು ದಿನ ಮನೆಯಲ್ಲಿಯೆ ಪ್ರತ್ಯೇಕವಾಗಿದ್ದೆ. ಅಂತೂ 28 ದಿನಗಳ ಬಳಿಕ ಮತ್ತೆ ನನ್ನ ಕರ್ತವ್ಯಕ್ಕೆ ಹಾಜರಾದೆ ಎಂದರು.
ಆಕ್ಸಿಜನ್ ಪಲ್ಸ್
ಮುಖ್ಯವಾಗಿ ಟೆಸ್ಟಿಂಗ್ಗೆ ಆಗಬೇಕಾದುದು ನಮಗೆ ಆಕ್ಸಿಜನ್ (ಆಮ್ಲಜನಕ) ಪಲ್ಸ್ ಎಷ್ಟಿದೆ ಎಂಬದರ ಕುರಿತಾಗಿದೆ. ಇದರ ಬಗ್ಗೆ ಸರಿಯಾಗಿ ಅರಿತುಕೊಂಡರೆ ಕೋವಿಡ್ ಅನ್ನು ಸಮರ್ಪಕವಾಗಿ ಎದುರಿಸಬಹದು. ಅಲ್ಲದೆ, ಅದಕ್ಕೆಂದೇ ಆಸ್ಪತ್ರೆಯಲ್ಲಿ ಪಲ್ಸ್ ಆಕ್ಸಿಮೀಟರ್ ಉಪಕರಣವಿರುತ್ತದೆ. ಅದರಲ್ಲಿ ಟೆಸ್ಟ್ ಮಾಡಿಸಿದಾಗ ನನ್ನ ಪಲ್ಸ್ 95 ಇದ್ದು ಸಮರ್ಪಕವಾಗಿತ್ತು. ಅದಕ್ಕಿಂತ ಕಡಿಮೆಯಿದ್ದರೆ ಮುನ್ನೆಚ್ಚರಿಕೆ ಅಗತ್ಯ 90ಕ್ಕಿಂತ ಕಡಿಮೆಯಿದ್ದರೂ ಕಷ್ಟ. 80 ಕ್ಕಿಂತ ಕಡಿಮೆ ಬಂದರೆ ಬದುಕುವದು ಕಷ್ಟ. ಇಂತಹ ಪ್ರಕರಣಗಳು ಬಹಳ ಕಡಿಮೆ. ಆಮ್ಲಜನಕ ಸಂಚಾರದ ಪಲ್ಸ್ ಸ್ವಲ್ಪ ಕಡಿಮೆಯಾದಾಗಲೇ ಕಷಾಯ ಇತ್ಯಾದಿ ಕುಡಿದು ಮುನ್ನೆಚ್ಚರಿಕೆ ವಹಿಸಿದರೆ ಹೋಗಲಾಡಿಸಬಹುದು ಎಂದು ನೌಷದ್ ಸಲಹೆಯಿತ್ತರು. ತಾನು ಆಸ್ಪತ್ರೆಯಿಂದ ಹೊರ ಬಂದ ನಂತರವೂ ಮನೆಯಲ್ಲಿ ಕಷಾಯ ಮಾಡಿ ಕುಡಿಯುವದನ್ನು ಮರೆಯಲಿಲ್ಲ ಎಂದು ಅನುಭವ ಹಂಚಿಕೊಂಡರು. ಕೋವಿಡ್ ಪ್ರಾರಂಭ ಸಂದರ್ಭ ತನಗೆ ಶೀತ, ಜ್ವರ, ಮೈಕೈ ನೋವು, ಬಳಿಕ ವಾಂತಿ ಲಕ್ಷಣಗಳುಂಟಾದುದರಿಂದ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಯಿತು ಎಂದು ನೌಷದ್ ನುಡಿದರು. ಕೋವಿಡ್ ಟೆಸ್ಟಿಂಗ್ ವರದಿ ಎಲ್ಲರಿಗೂ ಬೇಗ ಸಿಗುವಂತಾಗಬೇಕೆಂದು ಅವರು ಆಶಿಸಿದರು.