ಕುಶಾಲನಗರ, ಆ. 6: ಪ್ರಕೃತಿಯನ್ನು ಆರಾಧಿಸುವ ಮೂಲಕ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ಕೊಡವ ಅಕಾಡೆಮಿ ಮಾಜಿ ಸದಸ್ಯೆ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರದಲ್ಲಿ ಕಾವೇರಿ ಮಹಾಆರತಿ ಬಳಗದ ವತಿಯಿಂದ ಹುಣ್ಣಿಮೆ ಅಂಗವಾಗಿ ನಡೆದ 109ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನದಿ, ಜಲಮೂಲಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಅಭಿವೃದ್ಧಿ ಕೆಲಸಗಳು ನಡೆಯಬೇಕು. ಪ್ರಕೃತಿ ವಿಕೋಪ, ಅನಾಹುತಗಳಿಗೆ ಆಹ್ವಾನ ನೀಡುವಂತಿರಬಾರದು. ಪ್ರತಿಯೊಬ್ಬರೂ ನದಿ ಸಂರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ಉಪಸ್ಥಿತರಿದ್ದ ಕುಡಾ ಆಡಳಿತ ಮಂಡಳಿ ಸದಸ್ಯ ವೈಶಾಖ್ ಮಾತನಾಡಿ, ಪ್ರತಿ ಪಟ್ಟಣ, ಗ್ರಾಮಗಳಲ್ಲಿ ನದಿ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಮೂಲಕ ನದಿ ಸಂರಕ್ಷಣೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅರ್ಚಕ ಕೃಷ್ಣಮೂರ್ತಿ ಭಟ್ ಅವರು ನದಿಗೆ ಕುಂಕುಮಾರ್ಚನೆ, ಅಷ್ಟೋತ್ತರ, ಅರ್ಚನೆ ನಡೆಸಿದ ನಂತರ ಸಾಮೂಹಿಕವಾಗಿ ಮಹಾ ಆರತಿ ಬೆಳಗಲಾಯಿತು. ಈ ಸಂದರ್ಭ ಬಳಗದ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಡಿ.ಆರ್. ಸೋಮಶೇಖರ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಬಿ.ಜೆ. ಅಣ್ಣಯ್ಯ, ವಿ.ಆರ್. ಶಿವಶಂಕರ್, ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು.