ಸೋಮವಾರಪೇಟೆ, ಆ. 6: ಆಶ್ಲೇಷ ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿರುವುದರಿಂದ ಅಸಂಖ್ಯಾತ ಮರಗಳು ಧರೆಗುರುಳುತ್ತಿವೆ. ವಿದ್ಯುತ್ ಮಾರ್ಗದ ತಂತಿಗಳ 500ಕ್ಕೂ ಅಧಿಕ ಮರಗಳು ಉರುಳಿ ಬಿದ್ದಿರುವುದರಿಂದ ಕಳೆದ 3 ದಿನಗಳಿಂದ ಸೋಮವಾರಪೇಟೆ ವಿದ್ಯುತ್ ಸರಬರಾಜಿಲ್ಲದೇ ಕಾರ್ಗತ್ತಲು ಆವರಿಸಿದೆ.

ಕುಶಾಲನಗರದಿಂದ ಸೋಮವಾರಪೇಟೆಗೆ ಸರಬರಾಜಾಗುವ 33 ಕೆ.ವಿ. ವಿದ್ಯುತ್ ಲೈನ್ ಮೇಲೆ 150ಕ್ಕೂ ಅಧಿಕ ಮರಗಳು ಬಿದ್ದಿದ್ದು, 20ಕ್ಕೂ ವಿದ್ಯುತ್ ಕಂಬಗಳು ತುಂಡಾಗಿವೆ. ಯಡವನಾಡು ಅರಣ್ಯದ ಮೂಲಕ ಕಾರೆಕೊಪ್ಪ, ಬೇಳೂರು ಮಾರ್ಗವಾಗಿ ಪಟ್ಟಣಕ್ಕೆ ವಿದ್ಯುತ್ ಸರಬರಾಜು ಮಾಡುವ ಮುಖ್ಯ ಮಾರ್ಗದಲ್ಲೇ ಮರಗಳು ಬಿದ್ದಿರುವುದರಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ವಿದ್ಯುತ್ ಇಲ್ಲವಾಗಿದೆ.ಕಾರೆಕೊಪ್ಪ, ಬೇಳೂರು, ಬಸವನಹಳ್ಳಿ ವ್ಯಾಪ್ತಿಯಲ್ಲಿ ಆಗಾಗ್ಗೆ ಸಿಲ್ವರ್ ಮರಗಳು ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿವೆ. ಒಂದೆಡೆ ದುರಸ್ತಿ ಪಡಿಸಿದರೆ ಮತ್ತೊಂದೆಡೆ ಸಮಸ್ಯೆ ಸೃಷ್ಟಿಯಾಗುತ್ತಿದೆ. ಮರಗಳನ್ನು

(ಮೊದಲ ಪುಟದಿಂದ) ತೆರವುಗೊಳಿಸಿ, ನೂತನ ಕಂಬ ಅಳವಡಿಸಿ, ಲೈನ್ ಸರಿಪಡಿಸಲು ಹರಸಾಹಸ ಪಡುವಂತಾಗಿದೆ ಎಂದು ಸೆಸ್ಕ್ ಸಿಬ್ಬಂದಿಗಳು ತಿಳಿಸಿದ್ದಾರೆ.

ಕಳೆದ 3 ದಿನಗಳಿಂದ ವಿದ್ಯುತ್ ಇಲ್ಲದಿರುವುದರಿಂದ ಜನಜೀವನದ ಮೇಲೆ ಪರಿಣಾಮ ಬೀರಿದೆ. ಮನೆ, ಅಂಗಡಿ, ಕಚೇರಿಗಳಲ್ಲಿ ಅಳವಡಿಸಿದ್ದ ಇನ್ವರ್ಟರ್‍ಗಳಲ್ಲಿ ಚಾರ್ಜ್ ಇಲ್ಲವಾಗಿದ್ದು, ಸೀಮೆಎಣ್ಣೆ ದೀಪ, ಎಮರ್ಜೆನ್ಸಿ ಲೈಟ್‍ಗಳ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಮನೆಗಳಲ್ಲಿ ಟಿವಿ, ಫ್ರಿಡ್ಜ್, ಮಿಕ್ಸಿಗಳೂ ಸ್ಥಗಿತಗೊಂಡಿವೆ. ಬಹುತೇಕ ಮಂದಿಯ ಮೊಬೈಲ್‍ಗಳು ಚಾರ್ಜ್ ಇಲ್ಲದೇ ಸ್ವಿಚ್ ಆಫ್ ಆಗಿದೆ. ಪರಿಣಾಮ ದೂರವಾಣಿ ಸಂಪರ್ಕಗಳು ಕಡಿತಗೊಂಡಿವೆ.

ಮೊಬೈಲ್ ಚಾರ್ಜ್‍ಗಳಿಗೆ ವಾಹನಗಳನ್ನು ಅವಲಂಭಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ತಾಲೂಕು ಕಚೇರಿ, ಬ್ಯಾಂಕ್‍ಗಳು, ಜನರೇಟರ್ ಮೂಲಕ ಕಾರ್ಯನಿರ್ವಹಿಸುತ್ತಿವೆ.

ಕುಶಾಲನಗರದಿಂದ ಸೋಮವಾರಪೇಟೆವರೆಗಿನ ಮುಖ್ಯ ಲೈನ್ ದುರಸ್ತಿಗೊಂಡ ನಂತರವಷ್ಟೇ ಇತರ ಲೈನ್‍ಗಳನ್ನು ಸರಿಪಡಿಸಲಾಗುವುದು ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯ ಮಾರ್ಗವನ್ನು ಹೊರತುಪಡಿಸಿ ಗ್ರಾಮೀಣ ಪ್ರದೇಶದಲ್ಲಿ 500ಕ್ಕೂ ಅಧಿಕ ಮರಗಳು ವಿದ್ಯುತ್ ಮಾರ್ಗದ ಮೇಲೆ ಬಿದ್ದಿದೆ. ಕೆಲವು ಕಡೆಗಳಲ್ಲಿ ಸ್ಥಳೀಯರೇ ಮರಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಂಡಿದ್ದಾರೆ.

ತೋಟ, ಅರಣ್ಯದೊಳಗೆ ಬಿದ್ದಿರುವ ಮರಗಳು ಹಾಗೆಯೇ ಉಳಿದಿವೆ. ಇವುಗಳನ್ನು ತೆರವುಗೊಳಿಸಿ, ವಿದ್ಯುತ್ ಮಾರ್ಗವನ್ನು ಸರಿಪಡಿಸಲು ಇಲಾಖೆ ಮುಂದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಸ್ತೆಗೆ ಬೃಹತ್ ಮರ-ಸಂಚಾರ ಬಂದ್

ಸೋಮವಾರಪೇಟೆ-ತೊಳೂರುಶೆಟ್ಟಳ್ಳಿ, ಕೂತಿ, ಸಕಲೇಶಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ತೋಳೂರುಶೆಟ್ಟಳ್ಳಿ ಬಳಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಇಂದು ಅಪರಾಹ್ನ 2 ಗಂಟೆವರೆಗೂ ಸಂಚಾರ ಸ್ಥಗಿತಗೊಂಡಿತ್ತು.

ನಿನ್ನೆ ರಾತ್ರಿ ಸುರಿದ ಭಾರೀ ಮಳೆ-ಗಾಳಿಗೆ ರಸ್ತೆ ಬದಿಯಿದ್ದ ಬೃಹತ್ ಮರವೊಂದು ತುಂಡಾಗಿ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರ ಬಂದ್ ಆಗಿತ್ತು. ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸತತ ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿದ್ದಾರೆ.

ಉಳಿದಂತೆ ಸೋಮವಾರಪೇಟೆ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಸಣ್ಣಪುಟ್ಟ ನದಿ ತೊರೆಗಳು ತುಂಬಿ ಹರಿಯುತ್ತಿವೆ. ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಶಾಂತಳ್ಳಿ ಹೋಬಳಿಯಾದ್ಯಂತ ವರುಣನ ಆರ್ಭಟ ಜೋರಾಗಿದೆ. ಪಟ್ಟಣದ ಆನೆಕೆರೆ, ಚೌಡ್ಲು ಕೆರೆ, ಯಡೂರು ದೇವರ ಕೆರೆ, ದೊಡ್ಡಮಳ್ತೆಯ ಹೊನ್ನಮ್ಮನ ಕೆರೆಗಳಲ್ಲಿ ನೀರಿನ ಮಟ್ಟ ಏರುತ್ತಿದೆ.

ಪಟ್ಟಣದ ಕಕ್ಕೆಹೊಳೆ, ಐಗೂರು ಚೋರನ ಹೊಳೆ, ದುದ್ದುಗಲ್ಲು ಹೊಳೆ, ಮಾದಾಪುರ ಹಟ್ಟಿಹೊಳೆ ತುಂಬಿ ಹರಿಯುತ್ತಿವೆ. ತಾಲೂಕಿನ ಕುಡಿಗಾಣ ಗ್ರಾಮದಲ್ಲಿ ಕಳೆದ 24 ಗಂಟೆಗಳಲ್ಲಿ 11 ಇಂಚು ಮಳೆ ಸುರಿದಿದೆ. ಕುಡಿಗಾಣ ಗ್ರಾಮ ಸಂಪರ್ಕಿಸುವ ಸೇತುವೆಯ ಮೇಲೆ ನೀರು ಹರಿಯುತ್ತಿದೆ. ತೋಳೂರುಶೆಟ್ಟಳ್ಳಿಯ ಹೊಳೆ ತುಂಬಿ ಹರಿದ ಪರಿಣಾಮ ಹೊಳೆ ಪಾತ್ರದ ಗದ್ದೆಗಳಲ್ಲಿ ನೀರು ಸಂಗ್ರಹವಾಗಿದೆ. ನಾಟಿ ಮಾಡಿದ್ದ ಗದ್ದೆಗಳಿಗೆ ಹೊಳೆ ನೀರು ಹತ್ತಿದ್ದು, ಪೈರು ನಷ್ಟಗೊಳ್ಳುವ ಆತಂಕ ಎದುರಾಗಿದೆ.

ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆಗೆ 146 ಮಿ.ಮೀ., ಶಾಂತಳ್ಳಿಗೆ 255.2 ಮಿ.ಮೀ., ಕೊಡ್ಲಿಪೇಟೆಗೆ 165.8 ಮಿ.ಮೀ., ಶನಿವಾರಸಂತೆಗೆ 120, ಕುಶಾಲನಗರಕ್ಕೆ 46.6, ಸುಂಟಿಕೊಪ್ಪಕ್ಕೆ 83 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

ಶನಿವಾರಸಂತೆ ಹೋಬಳಿ

ಶನಿವಾರಸಂತೆ ಹೋಬಳಿಯಾದ್ಯಂತ ಗುರುವಾರ ಆಶ್ಲೇಷ ಮಳೆ ಬೆಳಿಗ್ಗೆಯಿಂದ ನಿರಂತರವಾಗಿ ಸುರಿದು ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಬಿಡುವು ನೀಡಿತ್ತು. ನಂತರ ಧಾರಾಕಾರವಾಗಿ ಸುರಿದು ಸಂಜೆಯವರೆಗೆ 2 ಇಂಚು ಮಳೆಯಾಗಿದೆ.

ಮಳೆಯ ಪ್ರಮಾಣಕ್ಕಿಂತಲೂ ಗಾಳಿ ರಭಸವಾಗಿ ಬೀಸುತ್ತಿದೆ. ಅಲ್ಲಲ್ಲಿ ರಸ್ತೆಗಳಲ್ಲಿ ಹಾಗೂ ಕಾಫಿ ತೋಟಗಳಲ್ಲಿ ಮರಗಳು ಧರೆಗುರುಳುತ್ತಿವೆ. ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಪಟ್ಟಣದಲ್ಲಿ ಬುಧವಾರದಿಂದ ಗುರುವಾರ ಮಧ್ಯಾಹ್ನದವರೆಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ನಾಗರಿಕರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಸಮೀಪದ ದೊಡ್ಡಬಿಳಾಹ ಗ್ರಾಮದ ಹೊಳೆ ತುಂಬಿ ಹರಿಯುತ್ತಿದ್ದು, ಸೇತುವೆ ಮಟ್ಟ ತಲುಪಿದೆ. ಗಾಳಿಯ ರಭಸಕ್ಕೆ ಗ್ರಾಮದ 15 ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, 4 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬುಧವಾರ ಬೆಳಿಗ್ಗೆಯಿಂದ ಗುರುವಾರ ಬೆಳಿಗ್ಗೆವರೆಗೆ ನಾಲ್ಕೂವರೆ ಇಂಚು ಮಳೆಯಾಗಿದೆ. ಕಾಜೂರು, ಅಪ್ಪಶೆಟ್ಟಳ್ಳಿ ಗ್ರಾಮದಲ್ಲೂ 3 ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲ. ಶನಿವಾರಸಂತೆಯಿಂದ ಚಿನ್ನಳ್ಳಿಗೆ ಸಾಗುವ ರಸ್ತೆಯುದ್ದಕ್ಕೂ ಸಿಲ್ವರ್ ಮರಗಳು ಧರೆಗುರುಳಿವೆ.

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಗ್ರಾಮದಲ್ಲಿ ರಂಗಮ್ಮ ಬಸವಯ್ಯ ಅವರ 2 ಎಕರೆ ನಾಟಿ ಮಾಡಿದ ಗದ್ದೆ ಸಂಪೂರ್ಣ ಜಲಾವೃತಗೊಂಡಿದೆ. ಬೀಟಿಕಟ್ಟೆ ಗ್ರಾಮದಲ್ಲಿ ಬಿರುಸಿನ ಮಳೆಗಾಳಿಗೆ ಕ್ಷಮ್ಯ ಹಾರ್ಡ್‍ವೇರ್ ಮತ್ತು ದೀಪು ಅಂಗಡಿಯ ಶೀಟುಗಳು ಜಖಂಗೊಂಡು ನಷ್ಟ ಸಂಭವಿಸಿದೆ.

ಚಿಕ್ಲಿಹೊಳೆ ಭರ್ತಿ

ಸುಂಟಿಕೊಪ್ಪ: ಆಶ್ಲೇಷ ಮಳೆಯು ಕಳೆದ 4 ದಿನಗಳಿಂದ ಜಿಲ್ಲೆಯಲ್ಲಿ ಅಬ್ಬರಿಸುತ್ತಿದ್ದು ಕೆರೆ ನದಿ ತೊರೆಗಳು ಸಂಪೂರ್ಣ ಜಲಾವೃತ್ತಗೊಂಡು ಅಪಾರ ನಷ್ಟವನ್ನುಂಟು ಮಾಡಿದೆ.

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಳೆದ 4 ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಯ ಹಿನ್ನೆಲೆ ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ಕೂಲಿ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಮತ್ತೊಂದೆಡೆ ಗಾಳಿ ಮಳೆಯ ಅಬ್ಬರದಿಂದ ಕೆರೆ,ತೋಡುಗಳು ಉಕ್ಕಿ ಹರಿಯಲಾರಂಭಿಸಿದೆ. ನಾಕೂರು ಶಿರಂಗಾಲ, ಹೊಕೋಟೆ, ಕೊಡಗರಹಳ್ಳಿ, ಕೆದಕಲ್, ಮತ್ತಿಕಾಡು ಕಂಬಿಬಾಣೆ, ಗರಗಂದೂರು ಹಾಗೂ ಮಾದಾಪುರ ಭಾಗಗಳಲ್ಲಿ ತೋಟದ ಮರಗಳು ಉರುಳಿ ಬಿದ್ದ ಪರಿಣಾಮ ಚೆಸ್ಕಾಂ ಇಲಾಖೆಯ 100ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು,ತಂತಿಗಳು ಧರೆಗೆ ಉರುಳಿದೆ. ಚೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಎಂದು ಚೆಸ್ಕಾಂ ಕಿರಿಯ ಅಭಿಯಂತರರಾದ ಜಯದೀಪ್ ತಿಳಿಸಿದ್ದಾರೆ.

ಕೊಡಗರಹಳ್ಳಿ ವ್ಯಾಪ್ತಿಯಲ್ಲಿ ರಾತ್ರಿ ಬಾರಿ ಬಿರುಗಾಳಿ ಮಳೆಗೆ ಮನೆ ಹಾಗೂ ಪಂಚಾಯಿತಿಯ ಕುಡಿಯುವ ನೀರಿನ ಮೋಟಾರ್ ಹೌಸ್‍ಗಳು ಹಾನಿಗೊಂಡಿವೆ.

ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದ ಮಧ್ಯ ರಾತ್ರಿ ವೇಳೆ ಬೀಸಿದ ಭಾರೀ ಗಾಳಿ ಮಳೆಗೆ ಕಲ್ಲೂರು ನಿವಾಸಿ ಸತ್ಯ ಆಚಾರಿ ಎಂಬವರ ಮನೆ ಮೇಲೆ ಭಾರೀ ಗಾತ್ರದ ಮರಬಿದ್ದ ಪರಿಣಾಮ ಮನೆಯ 4 ಕೋಣೆಗಳು ಜಖಂಗೊಂಡಿದ್ದು ರೂ ಅಂದಾಜು 90,000 ನಷ್ಟ ಸಂಭವಿಸಿದೆ. ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ 2 ಮೋಟಾರುಗಳು ಹಾಗೂ ಯಂತ್ರ ಅಳವಡಿಸಿದ ಕೊಠಡಿಗಳು ತೋಟದ ಮರ ಬಿದ್ದ ಪರಿಣಾಮ ಜಖಂಗೊಂಡಿದ್ದು 20,000 ರೂ. ನಷ್ಟ ಸಂಭವಿಸಿದೆ. ಕೊಡಗರಹಳ್ಳಿ ಸ್ಕೂಲ್ ಬಾಣೆಯ ಕಮಲ ಎಂಬವರ ಮೇಲ್ಚಾವಣಿಗಳು ಗಾಳಿಗೆ ಹಾರಿಹೋಗಿದ್ದು ಅಂದಾಜು 25,000 ರೂ. ನಷ್ಟ ಸಂಭವಿಸಿದೆ ಎಂದು ಕಂದಾಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

ಸ್ಥಳಕ್ಕೆ ಪಂಚಾಯಿತಿ ಕಾರ್ಯದರ್ಶಿ ಸುಕುಮಾರ್, ಕಂದಾಯ ಪರಿವೀಕ್ಷಕರಾದ ಶಿವಪ್ಪ, ಗ್ರಾಮಲೆಕ್ಕಿಗರಾದ ರೂಪ, ಗ್ರಾ.ಪಂ. ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದೇವಸ್ಥಾನ ರಸ್ತೆ ಸಂಪರ್ಕ ಕಡಿತ

ಚೆಟ್ಟಳ್ಳಿ: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚೇರಳ ಭಗವತಿ ದೇವಾಲಯಕ್ಕೆ ತೆರಳುವ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ.

ಕಳೆದ ವರ್ಷದ ಭಾರೀ ಮಳೆಗೆ ರಸ್ತೆಯ ಚೇರಳ ದೇವಾಲಯಕ್ಕೆ ತೆರಳುವ ಒಂದು ಬದಿ ಜಾರಿದ್ದು ಅಪಾಯ ಅಂಚಿನಲ್ಲಿದೆ. ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಕಳೆದ ವರ್ಷ ಹಾಗೂ ಈ ವರ್ಷ ರಸ್ತೆ ದುರಸ್ತಿ ಪಡಿಸಿಕೊಳ್ಳುವಂತೆ ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಊರಿನವರು ಅರ್ಜಿಸಲ್ಲಿಸಿ, ಅಧಿಕಾರಿಗಳು ಪರಿಶೀಲಿಸಿದ್ದರೂ ಈವರೆಗೆ ರಸ್ತೆ ದುರಸ್ತಿ ಮಾಡಲಿಲ್ಲವೆಂದು ದೇವಾಲಯ ತಕ್ಕಮುಖ್ಯಸ್ಥರು ದೂರಿದ್ದಾರೆ. ಕಳೆದ ವರ್ಷ ಪಂಚಾಯಿತಿ ವತಿಯಿಂದ ರಸ್ತೆ ದುರಸ್ತಿಮಾಡದ್ದರಿಂದ ಚೇರಳತಮ್ಮಂಡ ಮುದ್ದಮಯ್ಯನವರು ತಮ್ಮ ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿದ್ದರು.

ತೋಟದ ಮಣ್ಣು ಜರಿದು ನಷ್ಟ

ಚೆಟ್ಟಳ್ಳಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ದಂಬೆಕೋಡಿ ಹರೀಶ್ ಅವರ ತೋಟದಲ್ಲಿ ಮಣ್ಣು ಜರಿದು ಸುಮಾರು ಒಂದು ಎಕರೆಯಲ್ಲಿರುವ ಕಾಫಿ, ಅಡಿಕೆ, ಏಲಕ್ಕಿ ಕರಿಮೆಣಸು ಬೆಳೆಗಳು ನಾಶವಾಗಿ ನಷ್ಟ ಸಂಭವಿಸಿದೆ.

ಮನೆ ಮೇಲೆ ಮರ ಬಿದ್ದು ಜಖಂ

ಶನಿವಾರಸಂತೆ: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದ ನಿವಾಸಿ ಎ.ಕೆ. ರಾಜಪ್ಪ ಅವರ ವಾಸದ ಮನೆಯ ಮೇಲೆ ಗಾಳಿ-ಮಳೆಯಿಂದ ಮರಬಿದ್ದು ಜಖಂ ಉಂಟಾಗಿದ್ದು, ಸುಮಾರು ರೂ. 20 ಸಾವಿರ ನಷ್ಟ ಉಂಟಾಗಿದೆ. ಕಂದಾಯ ಪರಿವೀಕ್ಷಕ, ಗ್ರಾಮಲೆಕ್ಕಿಗರಾದ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಬ್ಯಾಲ ರಸ್ತೆ ಬದಿ ಕುಸಿತ

ಚೆಟ್ಟಳ್ಳಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಿಕೇರಿ-ಚೆಟ್ಟಳ್ಳಿ ಸಂಪರ್ಕ ಕಲ್ಪಿಸುವ ಅಬ್ಯಾಲದಲ್ಲಿ ಭಾರೀ ಮಳೆಗೆ ರಸ್ತೆ ಬದಿ ಮಣ್ಣು ಕುಸಿತವಾಗಿದ್ದು,ಸ್ಥಳಕ್ಕೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕಾ-ಬ್ಯಾರಂಗಿ ಬೆಟ್ಟದಲ್ಲಿ ವಾಸಿಸುತ್ತಿರುವ ಮೂರಕ್ಕೂ ಹೆಚ್ಚು ಕುಟುಂಬಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಪಂಚಾಯಿತಿಯಿಂದ ನೋಟೀಸ್ ನೀಡಲಾಗಿದೆ.

ಪೆÇನ್ನತ್‍ಮೊಟ್ಟೆಯ ಆರು ಕುಟುಂಬ, ಈರಳವಳಮುಡಿಯ ಮೂರು, ಕೂಡ್ಲೂರು ಚೆಟ್ಟಳ್ಳಿ ಮೂರು ಕುಟುಂಬಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೋಟೀಸ್ ನೀಡಲಾಗಿದ್ದು, ಅವಶ್ಯಕತೆ ಇದ್ದಲ್ಲಿ ಪರಿಹಾರ ಕೇಂದ್ರ ತೆರಯಲಾಗುವುದೆಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ನಂದೀಶ್ ಮಾಹಿತಿ ನೀಡಿದ್ದಾರೆ.