ಮಡಿಕೇರಿ, ಆ. 5: ಒಂದೆಡೆ ವೇದ ಮಂತ್ರಗಳ ಘೋಷಣೆ, ಮತ್ತೊಂದೆಡೆ ಆಡಂಬರವಿಲ್ಲದ ದೈವಿಕ ವಾತಾವರಣ, ಮಗದೊಂದೆಡೆ ಕೇವಲ ವಿರಳ ಸಂಖ್ಯೆಯಲ್ಲಿ ಆಹ್ವಾನಿತ ಪ್ರಮುಖರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದರು. ಎಲ್ಲ ಪ್ರಮುಖರು ಮುಖಗವಸು ಧರಿಸಿ ಅಂತರ ಕಾಯ್ದುಕೊಂಡು ಅತ್ಯಂತ ಭಕ್ತಿಪೂರ್ವಕ ಸನ್ನಿವೇಶದಲ್ಲಿ ಶ್ರೀ ‘‘ರಾಮ ನಾಮ’’ದ ಹಿನ್ನೆಲೆಯ ಧ್ವನಿ ಸ್ಮರಣೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಸಾರ ಈ ಕಾರ್ಯವು ಅಡ್ಡಿ-ಆಂತಕವಿಲ್ಲದೆ ಯಶಸ್ವಿಯಾಗಿ ನೆರವೇರಿತು. ತ್ರೇತಾಯುಗದ ಶ್ರೀ ರಾಮನ ಜನ್ಮಭೂಮಿಯಲ್ಲಿದ್ದ ಮಂದಿರವು ನೂರಾರು ವರ್ಷಗಳ ಹಿಂದೆ ಆಕ್ರಮಣಕ್ಕೀಡಾಗಿ ಕೆಡವಲ್ಪಟ್ಟಿದ್ದು, ಭವ್ಯ ಮಂದಿರದ ಪುನರ್ ನಿರ್ಮಾಣಕ್ಕೆ ಇಂದು ನಾಂದಿಯಾಯಿತು.ಶ್ರಾವಣ ಮಾಸದ ಶುಭ ಅಭಿಜಿತ್ ಲಗ್ನದಲ್ಲಿ ಪೂರಕವೆಂಬಂತೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಪರ್ವ ದಿನವಾದ ಇಂದು ಭೂಮಿ ಪೂಜೆ ನೆರವೇರಿಸಿ ಪ್ರಧಾನಿ ಮೋದಿ ಮಾತನಾಡಿದರು. ಭಗವಾನ್ ಶ್ರೀ ರಾಮನ ಮಂದಿರಕ್ಕಾಗಿ ಕೋಟ್ಯಂತರ ಭಾರತೀಯರ
(ಮೊದಲ ಪುಟದಿಂದ) ಶತಮಾನಗಳ ಕಾಯುವಿಕೆ ಅಂತ್ಯವಾಗಲಿದ್ದು, ಅಯೋಧ್ಯೆಯಲ್ಲಿ ಶೀಘ್ರದಲ್ಲೇ ಭವ್ಯ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಘೋಷಿಸಿದರು.
ಭಾರತವು ಇಂದು ಸೂರ್ಯನ ಸನ್ನಿಧಿ, ಸರಯೂ ನದಿಯ ತಟದಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ ಎಂದ ಅವರು ಇಡೀ ದೇಶವಿಂದು ರಾಮ ಮಯವಾಗಿದೆ. ಇತಿಹಾಸದ ಪುಟಗಳಲ್ಲಿ ಏನೆಲ್ಲಾ ಆಗಿ ಹೋಗಿದ್ದರೂ ಶ್ರೀ ರಾಮ ನಮ್ಮ ಮನದಲ್ಲಿ ವಿರಾಜಮಾನವಾಗಿದ್ದು, ಸಂಸ್ಕøತಿಯ ಆಧಾರವಾಗಿದ್ದಾನೆ ಎಂದು ಬಣ್ಣಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ವಿ.ಹಿ.ಪ. ಅಂತರ್ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್‍ರಾಯ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕರ್ನಾಟಕದಿಂದ ಉಡುಪಿಯ ವಿಶ್ವಪ್ರಶನ್ನ ತೀರ್ಥರು, ಆದಿಚುಂಚನಗಿರಿಯ ಡಾ. ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ದೇಶದ ಅನೇಕ ಸಂತರು, ಆಹ್ವಾನಿತ ಗಣ್ಯರು ಭವಿಷ್ಯದ ಶ್ರೀ ರಾಮ ಮಂದಿರದ ಭೂಮಿ ಪೂಜೆಗೆ ಸಾಕ್ಷಿಯಾದರು.
ಕೊಡಗಿನಲ್ಲಿಯೂ ಪ್ರತಿಧ್ವನಿ
ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರನಿಗೆ ಭವ್ಯವಾದ ಮಂದಿರ ನಿರ್ಮಾಣದ ಭೂಮಿ ಪೂಜೆ ಸಮಾರಂಭದ ಶುಭ ಸಂದರ್ಭದಲ್ಲಿ ನಗರದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಆಡಳಿತ ಮಂಡಳಿ ಟ್ರಸ್ಟಿಗಳಾದ ಟಿ.ಪಿ. ರಮೇಶ್, ಐತಪ್ಪ ರೈ, ಮಣಿ, ಮಾಜಿ ನಗರಸಭಾ ಅಧ್ಯಕ್ಷ ಪಿ.ಡಿ. ಪೆÇನ್ನಪ್ಪ ಹಾಗೂ ಮಾಜಿ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ಬಿ.ಕೆ. ಜಗದೀಶ್, ನೆರವಂಡ ಜೀವನ್, ನಂದ ಮತ್ತಿತರರು ಉಪಸ್ಥಿತರಿದ್ದರು.
ಶಾಸಕ ಅಪ್ಪಚ್ಚು ರಂಜು ಅಯೋಧ್ಯೆಯ ಭೂಮಿ ಪೂಜೆಯ ಸುಸೂತ್ರವಾಗಿ ನಡೆಯುವಂತೆ ತಮ್ಮ ಮನೆಯಲ್ಲೇ ಪೂಜೆ ಸಲ್ಲಿಸಿದರು. ಹೋಮ್ ಕ್ವಾರಂಟೈನ್‍ನಲ್ಲಿರುವ ಕಾರಣ ತಾವು ಮನೆಯಲ್ಲೇ ಪೂಜೆ ಸಲ್ಲಿಸಿದರು.
ಸೋಮವಾರಪೇಟೆ : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದ ಪ್ರಯುಕ್ತ ಸೋಮವಾರಪೇಟೆಯ ವಿವಿಧೆಡೆ ವಿಶೇಷ ಪೂಜೆ, ಕರ ಸೇವಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಹಿಂದೂ ಜಾಗರಣಾ ವೇದಿಕೆಯ ತಾಲೂಕು ಘಟಕದ ವತಿಯಿಂದ ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, 1990 ಮತ್ತು 1992ರಲ್ಲಿ ನಡೆದ ಕರಸೇವೆಯಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರುಗಳನ್ನು ಸನ್ಮಾನಿಸಲಾಯಿತು.
ಕರಸೇವೆಯಲ್ಲಿ ಭಾಗಿಯಾಗಿದ್ದ ಶಾಂತಳ್ಳಿಯ ಸುಬ್ಬಯ್ಯ, ಮುತ್ತಣ್ಣ, ಮೊಗಪ್ಪ, ಬೋಪಣ್ಣ, ಕುಂದಳ್ಳಿಯ ದಿನೇಶ್, ಕಲ್ಕಂದೂರಿನ ಅಪ್ಪಯ್ಯ, ಚೌಡ್ಲು ಗ್ರಾಮದ ಉದಯಸಿಂಗ್, ಸಿ.ಬಿ. ದೇವರಾಜು, ಕುಲುಮೆ ರಾಜು, ದೊಡ್ಡಮಳ್ತೆಯ ರಮೇಶ್, ಯಡವನಾಡು ರಮೇಶ್, ತಾಕೇರಿ ಪೊನ್ನಪ್ಪ, ಸುರೇಶ್, ಜೋಯಪ್ಪ, ಕಿರಗಂದೂರು ಪುಟ್ಟರಾಜು, ಮೋಹನ್ ಟಿ.ಸಿ., ಅನಿಲ್, ಮೆಣಸ ಮಹದೇವಪ್ಪ, ತೋಳೂರುಶೆಟ್ಟಳ್ಳಿ ಲಿಂಗರಾಜು, ಕೂತಿ ಪರಮೇಶ್, ದೊಡ್ಡತೋಳೂರಿನ ಡಿ.ಕೆ. ರಘು, ಕೆ.ಬಿ. ಸತೀಶ್, ಐಗೂರಿನ ಪ್ರಭಾ, ಹಾನಗಲ್ಲು ಪ್ರಸಾದ್, ಹೊಸಬೀಡಿನ ಗಣೇಶ್ ಅವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕರಸೇವೆಯ ಬಗ್ಗೆ ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪದ್ಮನಾಭ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಸುಭಾಷ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಎಂ.ಬಿ. ಉಮೇಶ್, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ವಿಎಸ್‍ಎಸ್‍ಎನ್ ಅಧ್ಯಕ್ಷ ಹೆಚ್.ಕೆ. ಮಾದಪ್ಪ, ನಿರ್ದೇಶಕಿ ರೂಪಾ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕರಸೇವೆಯಲ್ಲಿ ಸಾವನ್ನಪ್ಪಿದ ಕಾರ್ಯಕರ್ತರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೀರಾಜಪೇಟೆ : ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರರ ದೇಗುಲ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ ಅಂಗವಾಗಿ ಇಂದು ನಗರದ ಪ್ರಮುಖ ದೇವಾಲಯದಲ್ಲಿ ಹಿಂದೂ ಪರ ಸಂಘಟನೆಗಳಿಂದ ಪೂಜೆ ನೆರವೇರಿಸಲಾಯಿತು.
ವೀರಾಜಪೇಟೆ ನಗರ ಶಾಖೆಯ ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ತಾಲೂಕು ಭಜರಂಗದಳದ ವತಿಯಿಂದ ನಗರದ ಮಹಾಗಣಪತಿ ದೇಗುಲದಲ್ಲಿ ಸಂಕಲ್ಪ ಪೂಜೆ ನೆರವೇರಿಸಲಾಯಿತು. ಮಂದಿರ ನಿರ್ಮಾಣದಲ್ಲಿ ಯಾವುದೇ ಅಡೆ ತಡೆಗಳು ಬಾರದೆ ಸುಸೂತ್ರವಾಗಿ ನೆರವೇರಲು ಸಂಘಟನೆಗಳ ಪ್ರಮುಖರು ವಿಶೇಷ ಪ್ರಾರ್ಥನೆ ಮಾಡಿದರು. ಮಹಾಗಣಪತಿಗೆ ಪೂಜೆ ಸಲ್ಲಿಸಲಾಗಿ ಸಿಹಿ ಹಂಚಲಾಯಿತು. ಈ ಸಂದರ್ಭ 1992 ರ ಡಿಸೆಂಬರ್ ತಿಂಗಳ 6 ರಂದು ನಡೆದ ಕರಸೇವೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಕರಸೇವಕನಾಗಿ ಸೇವೆ ಸಲ್ಲಿಸಿದ ಮೈತಾಡಿ ಗ್ರಾಮದ ಐಚ್ಚೆಟ್ಟಿರ ಕೇಸರಿ ಅವರನ್ನು ಹಿಂದೂ ಪರ ಸಂಘಟನೆಗಳ ವತಿಯಿಂದ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಪುರಾತನ ಶ್ರೀ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಮತ್ತು ಸಂಕಲ್ಪದೊಂದಿಗೆ ಶ್ರೀ ರಾಮಚಂದ್ರರ ಮಂದಿರ ನಿರ್ಮಾಣಕ್ಕೆ ಯಾವುದೇ ವಿಘ್ನಗಳು ಬಾರದೆ ಇರುವಂತೆ ಪೂಜೆ ಸಲ್ಲಿಸಲಾಯಿತು.
ವಿಶ್ವ ಹಿಂದೂ ಪರಿಷತ್‍ನ ತಾಲೂಕು ಕಾರ್ಯದÀರ್ಶಿ ಬಿ.ಎಂ. ಕುಮಾರ್, ಆರ್.ಎಸ್.ಎಸ್.ನ ನಗರ ಕಾರ್ಯವಾಹಕ ಬಿ.ವಿ. ಹೇಮಂತ್, ತಾಲೂಕು ಭಜರಂಗದಳ ಸಂಚಾಲಕ ವಿವೇಕ್ ರೈ, ನಗರ ಸಂಚಾಲಕ ದಿನೇಶ್ ನಾಯರ್ ಹಿರಿಯರಾದ ಮಾಳೇಟಿರ ಶ್ರೀನಿವಾಸ್, ನಗರ ಭಾ.ಜ.ಪ. ಅಧ್ಯಕ್ಷ ಟಿ.ಪಿ. ಕೃಷ್ಣ, ಪಟ್ಟಣ ಪಂಚಾಯಿತಿ ಸದಸ್ಯರು, ಹಿಂದೂ ಪರ ಸಂಘಟನೆಗಳ ಪ್ರಮುಖ ಮತ್ತು ಧರ್ಮಾಭಿಮಾನಿಗಳು ಹಾಜರಿದ್ದರು.
ಮಡಿಕೇರಿ ಕೋದಂಡರಾಮ : ಮಡಿಕೇರಿ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯ, ಶ್ರೀ ಓಂಕಾರೇಶ್ವರ ದೇವಾಲಯ, ಶ್ರೀ ಆಂಜನೇಯ ಗುಡಿ ಮುಂತಾದೆಡೆ ಗಳಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು.