ಗೋಣಿಕೊಪ್ಪಲು, ಆ.5: ಆಗಸ್ಟ್ 8ರಂದು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ‘ಕ್ವಿಟ್ ಇಂಡಿಯಾ’ ಚಳುವಳಿ ಘೋಷಣೆ ಮಾಡಿದ ದಿನದಂದು ‘ನಮ್ಮ ಭೂಮಿ - ನಮ್ಮ ಹಕ್ಕು ಮಾರಾಟಕ್ಕಿಲ್ಲ’ ಎಂಬ ಘೋಷ ವಾಕ್ಯದಡಿಯಲ್ಲಿ ರಾಜ್ಯದಾದ್ಯಂತ ಕಾರ್ಯಕ್ರಮ ನಡೆಯಲಿದ್ದು ಕೊಡಗಿನಲ್ಲಿಯೂ ಗಡಿ ಭಾಗಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ತಿಳಿಸಿದ್ದಾರೆ.
ಗೋಣಿಕೊಪ್ಪಲುವಿನ ರೈತ ಸಂಘದ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ರೈತ ಸಂಘದ ವಿವಿಧ ಹೋಬಳಿಯ ಅಧ್ಯಕ್ಷರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರು ಭೂಮಿಯೊಂದಿಗೆ ತಾಯಿಯ ಸಂಬಂಧವನ್ನು ಇಟ್ಟುಕೊಂಡು ಅಂದಿನಿಂದಲೇ ಇಂದಿನವರೆಗೆ ಭೂಮಿಯನ್ನು ಭೂತಾಯಿ ಎಂದು ಕರೆಯುತ್ತಾರೆ. ಆದ್ದರಿಂದ ಕೃಷಿ ಭೂಮಿಯನ್ನು ಕೃಷಿಗಾಗಿಯೇ ಬಳಸಬೇಕು, ಇತ್ತೀಚೆಗೆ ಕರ್ನಾಟಕ ಸರ್ಕಾರ ತಂದ ಭೂ ಸುಧಾರಣೆಯ ಸುಗ್ರೀವಾಜ್ಞೆ ಕಾಯ್ದೆಯನ್ನು ವಿರೋಧಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ಗಡಿ ಭಾಗಗಳಲ್ಲಿ ಈ ಬಗ್ಗೆ ರೈತ ಸಂಘದಿಂದ ನಾಮಫಲಕ ಅಳವಡಿಸಿ ವಿರೋಧ ವ್ಯಕ್ತಪಡಿಸಲಾಗುವುದು.
ರೈತ ವಿರೋಧಿ ಕಾಯಿದೆಗಳ ತಿದ್ದುಪಡಿಗಳನ್ನು ವಿರೋಧಿಸಿ ಆಗಸ್ಟ್ 15ರಂದು ಬೆಂಗಳೂರಿನ ಮೌರ್ಯ ವೃತ್ತದ ಬಳಿ ಇರುವ ಮಹಾತ್ಮಗಾಂಧಿ ಪುತ್ಥಳಿಯ ಮುಂಭಾಗ ರಾಜ್ಯ ಸಂಘವು ನಡೆಸುವ ಪ್ರತಿಭಟನೆಯಲ್ಲಿ ಜಿಲ್ಲೆಯಿಂದ ಪದಾಧಿಕಾರಿಗಳು ಭಾಗವಹಿಸುವಂತೆ ತಿಳಿಸಿದರು.
ಕೊಡಗು ಜಿಲ್ಲಾದ್ಯಂತ ಕಾಡು ಪ್ರಾಣಿಗಳ ನಿರಂತರ ಹಾವಳಿಯಿಂದ ರೈತರಿಗೆ ಆಗುತ್ತಿರುವ ಕಷ್ಟ ನಷ್ಟದ ಬಗ್ಗೆ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಮುಂದಿನ ದಿನದಲ್ಲಿ ಜಿಲ್ಲೆಯ ಶಾಸಕದ್ವಯರ ಸಮ್ಮುಖದಲ್ಲಿ ರೈತ ಸಂಘದ ಸಭೆಯನ್ನು ಆಯೋಜಿಸಿ ಆ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳುವ ತೀರ್ಮಾನಕ್ಕೆ ಬರಲಾಯಿತು.
ಸಭೆಯಲ್ಲಿ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್,ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಜಿ ಇಟ್ಟಿರ ಸಬಿತ ಭೀಮಯ್ಯ, ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ವಿವಿಧ ಹೋಬಳಿಯ ಅಧ್ಯಕ್ಷರುಗಳಾದ ಚೆಟ್ಟಂಗಡ ಕಂಬ ಕಾರ್ಯಪ್ಪ, ಚಂಗುಲಂಡ ಸೂರಜ್, ಆಲೆಮಾಡ ಮಂಜುನಾಥ್, ಪುಚ್ಚಿಮಾಡ ರಾಯ್ ಮಾದಪ್ಪ, ತಾಣಚ್ಚೀರ ಲೆಹರ್ ಬಿದ್ದಪ್ಪ, ಮೇಚಂಡ ಕಿಶ, ಪುಚ್ಚಿಮಾಡ ಶಿಲ್ಪ, ಕಾವಡಿಚಂಡ ಕಮಲ ಸೇರಿದಂತೆ ಇತರರಿದ್ದರು.