ಕೊರೊನಾ ಬಂದರೆ ಯಾವುದೇ ಅಂಜಿಕೆ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂಬದು ಕೊರೊನಾವನ್ನು ಗೆದ್ದು ಬಂದಿರುವ ಕೊಡ್ಲಿಪೇಟೆ ಮಲುಗನ ಹಳ್ಳಿಯ ಮಧುಕುಮಾರ್ ಅವರ ಅನಿಸಿಕೆ. ವೃತ್ತಿಯಲ್ಲಿ ಬೆಂಗಳೂರು ಕೆ.ಎಸ್.ಆರ್.ಟಿ.ಸಿ. ವಿಭಾಗದಲ್ಲಿ ಚಾಲಕ-ನಿರ್ವಾಹಕರಾಗಿರುವ ಮಧುಕುಮಾರ್ (36) ಜುಲೈ 1 ರಂದು ಮೈಸೂರಿನಲ್ಲಿರುವ ತಮ್ಮ ಪತ್ನಿ ಹಾಗೂ ಮಗುವನ್ನು ಭೇಟಿ ಮಾಡಲು ತೆರಳಿ ಹಿಂತಿರುಗಿದ ನಂತರ ಜುಲೈ 4 ರಂದು ಅವರಿಗೆ ಶೀತ-ಚಳಿ ಉಂಟಾದ ಅನುಭವವಾಗುತ್ತದೆ. ಈ ಹಿನ್ನೆಲೆ ಸ್ಥಳೀಯ ಆಶಾ ಕಾರ್ಯಕರ್ತೆಯರ ಸಲಹೆಯಂತೆ ಕೊರೊನಾ ಪರೀಕ್ಷೆಗೊಳಗಾದ ಅವರಿಗೆ ಸೋಂಕು ತಗಲಿರುವುದು ಖಾತರಿಯಾಗುತ್ತದೆ. ನಂತರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಅವರು ಇದೀಗ ಗುಣಮುಖರಾಗಿದ್ದಾರೆ. ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಮಧುಕುಮಾರ್, ಪ್ರಸ್ತುತ ನಾನು ಆರೋಗ್ಯವಾಗಿದ್ದೇನೆ. ಕೊರೊನಾ ಬಂತೆಂದು ಯಾರೂ ಕೂಡ ಭಯಪಡಬೇಕಾದ ಅಗತ್ಯವಿಲ್ಲ. ಆತ್ಮಸ್ಥೈರ್ಯದೊಂದಿಗೆ ಚಿಕಿತ್ಸೆ ಪಡೆದರೆ ಖಂಡಿತವಾಗಿಯೂ ಕೊರೊನಾದಿಂದ ಮುಕ್ತಿ ಕಾಣಬಹುದು ಎಂಬ ಭರವಸೆಯ ನುಡಿಯಾಡಿದರಲ್ಲದೆ ಜನತೆ ಕೂಡ ಕೊರೊನಾ ಸೋಂಕಿತರನ್ನು ಅಸ್ಪøಶ್ಯರಂತೆ ಕಾಣದೆ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಅಭಿಪ್ರಾಯಿಸಿದರು. ಸರಕಾರಿ ಬಸ್‍ನಲ್ಲಿ ತೆರಳಿ ಅಲ್ಲಿಂದ ಅರಕಲಗೂಡುವಿಗೆ ಕ್ಯಾಬ್ ಮೂಲಕ ಬಂದು ಅಲ್ಲಿಂದ ಬೈಕ್‍ನಲ್ಲಿ ಮನೆಗೆ ತಲುಪಿದ್ದ ಮಧುಕುಮಾರ್ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದರಾದರೂ ಅವರ ಪತ್ನಿ, ಮಗು, ಕುಟುಂಬದವರಿಗೆ ಯಾವುದೇ ತೊಂದರೆಯಾಗಲಿಲ್ಲ. ಕ್ಯಾಬ್ ಮೂಲಕ ಬಂದ ಸಂದರ್ಭ ತನಗೆ ಸೋಂಕು ತಗಲಿರಬಹುದು ಎಂಬದು ಮಧುಕುಮಾರ್ ಅನಿಸಿಕೆ. ಯಾರೇ ಆದರೂ ಕೊರೊನಾ ಲಕ್ಷಣಗಳು ಕಂಡುಬಂದರೆ ಅಂತವರು ಮನೆಯವರೊಂದಿಗೆ, ನೆರೆಕರೆಯವರೊಂದಿಗೆ ಅಂತಕ ಕಾಯ್ದುಕೊಳ್ಳುವ ಮೂಲಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೆ ಕೊರೊನಾವನ್ನು ಜಯಿಸಬಹುದು ಎಂದು ಮಧುಕುಮಾರ್ ಕಿವಿಮಾತು ಹೇಳಿದರು.