ಗೋಣಿಕೊಪ್ಪಲು, ಆ. 5: ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದ. ಕೊಡಗಿನ ಬಾಳೆಲೆ, ಶ್ರೀಮಂಗಲ, ಪೊನ್ನಂಪೇಟೆ, ಹುದಿಕೇರಿ ಹೋಬಳಿಯ ವಿವಿಧ ಭಾಗಗಳಲ್ಲಿ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಇದರೊಂದಿಗೆ ಟ್ರಾನ್ಸ್‍ಫಾರ್ಮರ್ ಕೂಡ ಕಂಬ ಸಹಿತವಾಗಿ ಬಿದ್ದಿವೆ. ಇದರಿಂದಾಗಿ ವಾಣಿಜ್ಯ ನಗರ ಗೋಣಿಕೊಪ್ಪ ಸೇರಿದಂತೆ ದ. ಕೊಡಗು ಸಂಪೂರ್ಣ ವಾಗಿ ಎರಡು ದಿನಗಳಿಂದ ಕಾರ್ಗತ್ತಲಿನಲ್ಲಿ ಕಳೆಯುವಂತಾಗಿದೆ.ಒಂದೇ ಸಮನೆ ಬೀಸುತ್ತಿರುವ ಗಾಳಿಗೆ ಮರಗಳು ಬೀಳುತ್ತಿರುವು ದರಿಂದ ಇದರ ಸಮೀಪದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳು ನೆಲಕ್ಕುರುಳುತ್ತಿದ್ದು ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಚೆಸ್ಕಾಂ ಸಿಬ್ಬಂದಿ ತೊಡಗಿದ್ದಾರೆ. ಕಳೆದೆರಡು ದಿನಗಳಿಂದ ವಿವಿಧ ಗ್ರಾಮಗಳಲ್ಲಿ 109 ವಿದ್ಯುತ್ ಕಂಬಗಳು ಹಾಗೂ (ಮೊದಲ ಪುಟದಿಂದ) 4 ಟ್ರಾನ್ಸ್‍ಫಾರ್ಮರ್‍ಗಳು ನೆಲಕ್ಕುರುಳಿದ್ದು ದುರಸ್ತಿ ಕಾರ್ಯ ಮುಂದುವರೆದಿದೆ. ಮಾಯಮುಡಿ, ಕೋತೂರು ಹಾಗೂ ಅತ್ತೂರುವಿ ನಲ್ಲಿರುವ ಟ್ರಾನ್ಸ್‍ಫಾರ್ಮರ್‍ಗಳು ನೆಲಕ್ಕುರುಳಿದ್ದು ಇದರಿಂದ ಈ ಭಾಗದ ಸುತ್ತ ಮುತ್ತಲಿನ ಜನತೆಗೆ ಸದÀ್ಯಕ್ಕೆ ವಿದ್ಯುತ್ ಸರಬರಾಜಾಗುವುದು ಕಷ್ಟ ಸಾಧ್ಯವಾಗಿದೆ.
ಎರಡು ದಿನಗಳಿಂದ ಗ್ರಾಮೀಣ ಭಾಗ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪೂರ್ಣ ಕಡಿತ ಹಿನ್ನಲೆಯಲ್ಲಿ ನಾಗರಿಕರು ತಮ್ಮ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ನಗರದ ಅಂಗಡಿ ಬಳಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು.ಸತತ ವಿದ್ಯುತ್ ವ್ಯತ್ಯಯದಿಂದಾಗಿ ಶಾಲಾ ವಿದ್ಯಾರ್ಥಿಗಳು ತಮ್ಮ ಆನ್‍ಲೈನ್ ಕ್ಲಾಸ್‍ಗಳನ್ನು ಮೊಬೈಲ್ ಮೂಲಕ ನಡೆಸಲು ಸಾಧ್ಯವಾಗದೆ ತೊಂದರೆಗೆ ಸಿಲುಕಿದ್ದಾರೆ.
ಮೈಸೂರಿನಿಂದ ಪೊನ್ನಂಪೇಟೆಗೆ ಬರುವ 66 ಕೆವಿ ವಿದ್ಯುತ್ ಮಾರ್ಗದಲ್ಲಿ ಭಾರೀ ಗಾತ್ರದ ಮರವೊಂದು ಬುಧವಾರ ಮುಂಜಾನೆ 8.30 ಗಂಟೆಗೆ ಬಿದ್ದ ಪರಿಣಾಮ ಇಡೀ ಜಿಲ್ಲೆಯಲ್ಲಿ ವಿದ್ಯುತ್ ಕಡಿತಗೊಂಡಿತ್ತು. ಬಳಿಕ ಗೋಣಿಕೊಪ್ಪ ಚೆಸ್ಕಾಂನ ಎಇಇ ಅಂಕಯ್ಯ, ಇಂಜಿನಿಯರ್ ಎಸ್.ಆರ್. ಕೃಷ್ಣಕುಮಾರ್ ಹಾಗೂ ಸಿಬ್ಬಂದಿ ತಿತಿಮತಿಯ ಎಡತೊರೆ ಬಳಿ ಇರುವ ಸ್ಥಳಕ್ಕೆ ತೆರಳಿ ವಿದ್ಯುತ್ ತೊಂದರೆಯ ಬಗ್ಗೆ ಮೈಸೂರಿನ ಕಚೇರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಕೆ.ಆರ್. ನಗರದ ಟ್ರಾನ್ಸ್‍ಮಿಷನ್‍ನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಗಮಿಸಿ 66 ಕೆವಿ ವಿದ್ಯುತ್ ಮಾರ್ಗದಲ್ಲಿ ಬಿದ್ದಿದ್ದ ಭಾರೀ ಮರವನ್ನು ತೆರವುಗೊಳಿಸಿದರು. ವಿಪರೀತ ಸುರಿಯುತ್ತಿರುವ ಮಳೆಯಿಂದಾಗಿ ಮರ ತೆರವು ಕಾರ್ಯ ನಿಧಾನ ಗತಿಯಲ್ಲಿ ಸಾಗಿತ್ತು.
ಶ್ರೀಮಂಗಲ: ಲಕ್ಷ್ಮಣ ತೀರ್ಥ ಪ್ರವಾಹದಿಂದ ಬಾಳೆಲೆ-ಮಲ್ಲೂರು ನಡುವೆ ಸೇತುವೆ ಮುಳುಗಡೆಯಾಗಿದೆ. ಭತ್ತದ ನಾಟಿ ಆಗಿರುವ ನಿಟ್ಟೂರು, ಬಾಳೆಲೆ, ಬಲ್ಯಮುಂಡೂರು, ಕಾನೂರು, ನಾಲ್ಕೇರಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಗದ್ದೆಗಳು ಮುಳುಗಡೆಯಾಗಿದೆ. ಹುದಿಕೇರಿ ಬಳಿ ಬೇಗೂರು, ಚಿಕ್ಕಮುಂಡೂರು ಗ್ರಾಮದಲ್ಲಿ ಲಕ್ಷ್ಮಣ ತೀರ್ಥ ನದಿ ಹಿನ್ನೀರಿನಿಂದ ನೂರಾರು ಎಕರೆ ಭತ್ತದ ಗದ್ದೆ ಮುಳುಗಡೆಯಾಗಿದೆ.
ಟಿ.ಶೆಟ್ಟಿಗೇರಿಯಲ್ಲಿ ಮನೆಯೊಂದರ ಸಮೀಪ ನಿಲ್ಲಿಸಿದ್ದ ಖಾಸಗಿ ಬಸ್ ಮೇಲೆ ಬೃಹತ್ ಮರ ಬಿದ್ದು ಹಾನಿಯಾಗಿದೆ.
ಬಿರುನಾಣಿ ಸಮೀಪ ನ್‍ಟ್ ಕುಂದ್ ಸಂಪರ್ಕ ಸೇತುವೆ ನದಿ ನೀರಿಗೆ ಮುಳುಗಿದೆ. ಈ ವ್ಯಾಪ್ತಿಗೆ ಕಳೆದ 24 ಗಂಟೆಯಲ್ಲಿ 8.5 ಇಂಚು ಮಳೆಯಾಗಿದೆ.
ಬಾಳೆಲೆ: ಕೊಟ್ಟಗೇರಿ ದೋಣಿಕಡವು ರಸ್ತೆ ಮೇಲೆ ನೀರು ಹರಿಯುತಿದ್ದು, ಬಾಳೆಲೆ ಸಂಪರ್ಕ ಕಡಿತಗೊಂಡಿದೆ. ಮಾಚಂಗಡ ಅಯ್ಯಣ್ಣನವರ ಮನೆಯ ಮೇಲೆ ಮರವೊಂದು ಬಿದ್ದು ಮನೆಯ ಮೇಲ್ಚಾವಣಿಗೆ ಹಾನಿಯಾಗಿದೆ.
ಪೊನ್ನಂಪೇಟೆ: ಪೊನ್ನಂಪೇಟೆ ಮುದ್ದಣಿ ಕಾಲೋನಿಯ ಕರ್ತಮಾಡ ಅಶ್ವತ್ ಎಂಬವರ ಮನೆಯ ಮೇಲೆ ಮರ ಉರುಳಿ ಬಿದ್ದಿದ್ದು, ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತ್ರ, ಪಿಡಿಓ ಪುಟ್ಟರಾಜು ಹಾಗೂ ಗ್ರಾ.ಪಂ. ಮಾಜಿ ಸದಸ್ಯ ಅಣ್ಣಿರ ಹರೀಶ್ ಭೇಟಿ ನೀಡಿ ಪರಿಶೀಲಿಸಿದರು.
ಮುಗುಟಗೇರಿ ಗ್ರಾಮದ ಮುದ್ದಿಯಡ ಕಿರಣ್ ಜೋಯಪ್ಪ ಎಂಬವರ ಮನೆಯ ಔಟ್‍ಹೌಸ್ ಮೇಲೆ ಮರ ಬಿದ್ದಿದ್ದು ಮನೆಗೆ ಹಾನಿಯಾಗಿದೆ. ಬಲ್ಯಮಂಡೂರು ಗ್ರಾಮದ ಕೊಟ್ಟಂಗಡ ಎಂ. ದೇವಕಿ ಎಂಬವರ ಮನೆ ಮೇಲೆ ಮರಬಿದ್ದು ಹಾನಿ ಸಂಭವಿಸಿದೆ.
ಚೀನಿವಾಡ ಬೇಗೂರು ರಸ್ತೆಗೆ ಮರ ಉರುಳಿಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಈ ಸಂದರ್ಭ ರೈತ ಸಂಘದ ಸದಸ್ಯ ಮತ್ರಂಡ ರವಿ (ಸುರೇಶ್) ತಮ್ಮ ಮಗ ಹರ್ಷಿತ್ ಪೂವಯ್ಯ ಅವರೊಂದಿಗೆ ಮರ ಕಡಿದು ರಸ್ತೆ ಸಂಚಾರ ಸುಗಮಗೊಳಿಸಿದರು.
ತೂಚಮಕೇರಿ ಸಮೀಪ ರಸ್ತೆಗೆ ಮರ ಉರುಳಿಬಿದ್ದು, ಸಂಪರ್ಕಕಡಿತಗೊಂಡಿತ್ತು.ಬಿರುನಾಣಿ ಶ್ರೀ ಪುತ್ತು ಭಗವತಿ ದೇವಸ್ಥಾನ ಮುಂಭಾಗ ರಸ್ತೆಗೆ ಮರ ಉರುಳಿ ಬಿದ್ದಿದೆ. ಮುಗುಟಗೇರಿ ನಡಿಕೇರಿ ರಸ್ತೆಯಲ್ಲಿ ಮರ ಉರುಳಿದೆ.
ವೀರಾಜಪೇಟೆಯಲ್ಲಿ ಅನೇಕ ಮನೆಗಳು ಭಾಗಶಃ ಜಖಂ
ಕಳೆದ ಎರಡು ದಿನಗಳಿಂದ ವೀರಾಜಪೇಟೆ ವಿಭಾಗದಲ್ಲಿ ಗುಡುಗು ಭಾರೀ ಗಾಳಿಯೊಂದಿಗೆ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ಪಟ್ಟಣದ ವ್ಯಾಪ್ತಿಯ ಕಲ್ಲುಬಾಣೆಯಲ್ಲಿ 1 ಮನೆ ತೆಂಗಿನ ಮರ ಬಿದ್ದು ಜಖಂಗೊಂಡಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅರಸುನಗರ, ಮಲೆತಿರಿಕೆಬೆಟ್ಟ, ನೆಹರೂನಗರದ ಬೆಟ್ಟದತಪ್ಪಲಿನಲಿ ವಾಸಿಸುತ್ತಿರುವ ನಿವಾಸಿಗಳು ಸುರಕ್ಷಿತವಾದ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ಅಲ್ಲಿನ ನಿವಾಸಿಗಳಿಗೆ ಸೂಚನೆ ನೀಡಿದ್ದಾರೆ.
ವೀರಾಜಪೇಟೆ ಅರಸುನಗರದ ಸರಸ್ವತಿ ಎಂಬವರಿಗೆ ಸೇರಿದ ಮನೆಯ ಒಂದು ಭಾಗದ ಗೋಡೆ ಬಿದ್ದು ಮನೆ ಭಾಗಶಃ ಜಖಂಗೊಂಡಿದೆ. ಮಲೆತಿರಿಕೆಬೆಟ್ಟದ ವಾಣಿ ಎಂಬವರು ಮನೆಯ ಮುಂದಿನ ಗೋಡೆ ಬಿದ್ದು ಜಖಂಗೊಂಡಿದೆ. ಅಯ್ಯಪ್ಪ ಬೆಟ್ಟದಲ್ಲಿಯೂ ಮನೆಯ ಮುಂದೆ ವಿದ್ಯುತ್ ಕಂಬ ಬಿದ್ದು ಮನೆಯೊಂದು ಸಣ್ಣ ಪ್ರಮಾಣದಲ್ಲಿ ಜಖಂಗೊಂಡಿದೆ .ಮನೆಯಲ್ಲಿ ಯಾರೂ ವಾಸವಿರಲಿಲ್ಲವೆನ್ನಲಾಗಿದೆ. ಇಲ್ಲಿನ ಸುಂಕದಕಟ್ಟೆ ಬಳಿಯ ವಿಜಯ ಎಂಬವರ ಮನೆ ಮುಂದೆ ವಿದ್ಯುತ್ ಕಂಬವೊಂದು ಬಿದ್ದಿದ್ದು ಮನೆ ಭಾಗಶಃ ಜಖಂಗೊಂಡಿದ್ದು, ನೆಹರೂ ನಗರದ ನೂರ್ ಎಂಬವರ ಮನೆಯ ಶೌಚಾಲಯ ಸೇರಿದಂತೆ ಗೋಡೆ ಬಿದ್ದು ಮನೆ ಭಾಗಶಃ ಜಖಂಗೊಂಡಿದೆ. ನೆಹರೂ ನಗರದಲ್ಲಿ ಒಟ್ಟು 2 ಮನೆಗಳು ಮಳೆಯಿಂದ ಜಖಂಗೊಂಡಿದೆ.
ವೀರಾಜಪೇಟೆ ಪಟ್ಟಣದ ಪಂಜರ್‍ಪೇಟೆಗೆ ಒತ್ತಾಗಿರುವ ಕಲ್ಲುಬಾಣೆಯಲ್ಲಿ ನಬೀಶ ಎಂಬವರ ಮನೆಯ ಮೇಲೆ ನಿನ್ನೆ ದಿನ ರಾತ್ರಿ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿದೆ.
ಅಮ್ಮತ್ತಿಒಂಟಿಯಂಗಡಿ ಮುಖ್ಯ ರಸ್ತೆಯ ಮೇಲೆ ಬಿದ್ದಿದ್ದ ಮರವನ್ನು ಇಂದು ಬೆಳಿಗ್ಗೆ ಇಲ್ಲಿನ ಸೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದರು. ಕೆದಮುಳ್ಳೂರು ಗ್ರಾಮದಲ್ಲಿಯೂ ರಸ್ತೆಯ ಮೇಲೆ ಬಿದ್ದಿದ್ದ ಮರವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್‍ಗಣಪತಿ ಅವರು ಗ್ರಾಮಸ್ಥರ ಸಹಕಾರದಿಂದ ತೆರವುಗೊಳಿಸಿದರು.
ವೀರಾಜಪೇಟೆ ಸಮೀಪದ ಬೇತ್ರಿ ಬಳಿ ಹೆಮ್ಮಾಡು ಸೇತುವೆ ಭರ್ತಿಗೊಂಡು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವೀರಾಜಪೇಟೆ-ಮಡಿಕೇರಿ ನೇರ ಸಂಪರ್ಕವನ್ನು ಹೊಂದಿರುವ ಮುಖ್ಯ ರಸ್ತೆಯಲ್ಲಿರುವ ಬೇತ್ರಿ ಗ್ರಾಮದ ಕಾವೇರಿ ಹೊಳೆಯ ಸೇತುವೆಯ ಕೆಳಭಾಗದ ಅಂಚಿನ ತನಕ ನೀರು ತುಂಬಿದೆ. ಇಂದು ಇಲ್ಲಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಹಾಗೂ ಕಂದಾಯ ಅಧಿಕಾರಿ ಸೋಮೇಶ್, ಸಿಬ್ಬಂದಿ ಮಲೆತಿರಿಕೆಬೆಟ್ಟ, ಅರಸುನಗರ, ಸುಂಕದಕಟ್ಟೆ ಹಾಗೂ ನೆಹರೂ ನಗರಕ್ಕೆ ಮನೆ ಜಖಂಗೊಂಡ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
24 ಗಂಟೆಗಳ ಅವಧಿಯಲ್ಲಿ 4.14 ಇಂಚು ಮಳೆ
ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಬೆಳಗ್ಗಿನಿಂದ ಇಂದು ಬೆಳಗಿನ ತನಕ 4.14 ಇಂಚು ಮಳೆ ಸುರಿದಿದೆ. ಭಾರೀ ಮಳೆಯ ಹಿನ್ನಲೆಯಲ್ಲಿ ವೀರಾಜಪೇಟೆ ವಿಭಾಗಕ್ಕೆ ನಿನ್ನೆ ದಿನ ಮಧ್ಯರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ವರದಿ : ಜಗದೀಶ್, ಡಿಎಂಆರ್, ಹರೀಶ್ ಮಾದಪ್ಪ, ಚನ್ನನಾಯಕ್