ಮಡಿಕೇರಿ, ಆ. 5: ಜಿಲ್ಲೆಯಲ್ಲಿ ಭಾರೀ ವರ್ಷಾಧಾರೆ, ಗಾಳಿಯ ತೀವ್ರತೆಯೊಂದಿಗೆ ವರುಣ - ವಾಯುವಿನ ಅಬ್ಬರ ಮುಂದುವರಿದಿದೆ. ಜಿಲ್ಲೆಯಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡು ಬಹುತೇಕ ಪ್ರದೇಶಗಳಲ್ಲಿ ಕಾರ್ಗತ್ತಲು ಆವರಿಸಿದೆ. ಇನ್ನೂ ಅನೇಕ ಕಡೆ ಮರಗಳು ಬಿದ್ದು ಸಂಚಾರ ಸ್ಥಗಿತಗೊಂಡಿದೆ ಮತ್ತೆ ಕೆಲವೆಡೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಇನ್ನು ಹಲವೆಡೆ ಗತ ವರ್ಷಗಳಂತೆ ಮತ್ತೆ ಭೂಕುಸಿತ ಕಂಡುಬಂದಿದೆ. ಅನೇಕ ಮನೆಗಳು ಹಾನಿಗೀಡಾಗಿವೆ.ಭಾಗಮಂಡಲ ಸಂಗಮ ಕ್ಷೇತ್ರ ಸಹಿತ ಅಲ್ಲಿನ ಸಂಪರ್ಕ ರಸ್ತೆಗಳು ಮುಳುಗಡೆಗೊಂಡು, ದೇವಾಲಯದ ಮುಖ್ಯದ್ವಾರದ ಮೆಟ್ಟಿಲುಗಳಲ್ಲಿ ನೀರು ತಲುಪಿದೆ. ಜೀವನದಿ ಕಾವೇರಿ ಸಹಿತ ಮಾದಾಪುರ ಹಟ್ಟಿಹೊಳೆ, ದಕ್ಷಿಣ ಕೊಡಗಿನ ರಾಮತೀರ್ಥ, ಲಕ್ಷ್ಮಣತೀರ್ಥ, ಕೀರೆಹೊಳೆ ಸೇರಿದಂತೆ ಇತರ ತೋಡುಗಳು ತುಂಬಿ ಹರಿಯತೊಡಗಿದ್ದು, ಎಲ್ಲೆಡೆ ಗದ್ದೆಗಳು ಕೂಡ ಮುಳುಗಡೆಗೊಂಡಿರುವ ದೃಶ್ಯ ಗೋಚರಿಸಿದೆ. ಕಳೆದ ರಾತ್ರಿಯಿಂದ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಗ್ರಾಮಾಂತರ ಪ್ರದೇಶಗಳು, ಅನೇಕ ಪಟ್ಟಣಗಳು ಸಹಿತ, ಉತ್ತರ ಕೊಡಗಿನ ಕೊಡ್ಲಿಪೇಟೆ, ಶನಿವಾರಸಂತೆ, ಶಾಂತಳ್ಳಿ ಹಾಗೂ ದಕ್ಷಿಣ ಕೊಡಗಿನ ಕುಟ್ಟ, ಬಿರುನಾಣಿ, ಪೊನ್ನಂಪೇಟೆ, ಶ್ರೀಮಂಗಲ, ಹುದಿಕೇರಿ, ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ ಸುತ್ತಮುತ್ತ ಬೃಹತ್ ಮರಗಳೊಂದಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದು ಸಂಪರ್ಕವಿಲ್ಲದೆ ಕಾರ್ಗತ್ತಲೆಯಲ್ಲಿ ಅನೇಕ ಗ್ರಾಮಗಳು ತತ್ತರಿಸಿವೆ.

ದೋಣಿ ವ್ಯವಸ್ಥೆ : ಈಗಾಗಲೇ ಜಲಾವೃತಗೊಂಡಿರುವ ಭಾಗಮಂಡಲದಲ್ಲಿ ಸಾರ್ವಜನಿಕ ಸಂಪರ್ಕಕ್ಕೆ ಅಯ್ಯಂಗೇರಿ ಮಾರ್ಗದಲ್ಲಿ ರ್ಯಾಫ್ಟ್ ಹಾಗೂ ಮಡಿಕೇರಿ - ಭಾಗಮಂಡಲ ಮಾರ್ಗದಲ್ಲಿ ಯಾಂತ್ರೀಕೃತ ದೋಣಿಯೊಂದಿಗೆ ಗೃಹರಕ್ಷಕರ ಸಹಿತ ಎನ್.ಡಿ.ಆರ್.ಎಫ್. ಹಾಗೂ ಪೊಲೀಸರು ಜನತೆಗೆ ಸಹಾಯ ಕಲ್ಪಿಸಿದ್ದಾರೆ.

ಹಾರಂಗಿ ಭರ್ತಿ: ಗ್ರಾಮೀಣ ಭಾಗಗಳಾದ ಹಚ್ಚಿನಾಡು, ಹಮ್ಮಿಯಾಲ, ಮುಟ್ಲು, ಕುಂಬಾರಗಡಿಗೆ ಸಹಿತ ಪುಷ್ಪಗಿರಿ ತಪ್ಪಲಿನ ಶಾಂತಳ್ಳಿ ಇತರೆಡೆಗಳಲ್ಲಿ ಧಾರಾಕಾರ ಮಳೆಯಿಂದ ಹಾರಂಗಿ ಜಲಾಶಯ ಭರ್ತಿಗೊಂಡಿದ್ದು, ಬಹುಪಾಲು ನೀರನ್ನು ಜಲಾಶಯದ ಸುರಕ್ಷತೆಗಾಗಿ ನದಿಗೆ ಬಿಡಲಾಗುತ್ತಿದೆ.

ವಿದ್ಯುತ್ ನಷ್ಟ : ಒಟ್ಟಿನಲ್ಲಿ ಕಳೆದ 48 ಗಂಟೆಗಳಿಂದ ವಿಪರೀತ ಮಳೆ ಹಾಗೂ ಗಾಳಿಯ ರಭಸಕ್ಕೆ ನೂರಾರು ಕಡೆ ತೋಟಗಳ ಮಧ್ಯೆ ಮತ್ತು ರಸ್ತೆ ಮಾರ್ಗಗಳಲ್ಲಿ ಮರಗಳು ಧರೆಗುರುಳಿರುವ ಪರಿಣಾಮ 1250ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಕಿಲೋಮೀಟರ್‍ನಷ್ಟು ತಂತಿಗಳು ಹಾನಿಗೊಂಡಿವೆ. ಕೆಲವೆಡೆ ಟ್ರಾನ್ಸ್‍ಫಾರ್ಮರ್‍ಗಳಿಗೂ ಹಾನಿ ಉಂಟಾಗಿದೆ ಎಂದು ‘ಚೆಸ್ಕಾಂ’ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ಮಾಹಿತಿ ನೀಡಿದ್ದಾರೆ.

ಕಾರ್ಗತ್ತಲೆ : ದಕ್ಷಿಣ ಕೊಡಗಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮಳೆ - ಗಾಳಿ ಅಡ್ಡಿಯಾಗಿದ್ದು, 170ಕ್ಕೂ ಅಧಿಕ ಕಂಬಗಳು ತುಂಡಾಗಿರುವ ಕಾರಣ, ಬಹುತೇಕ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ 24 ಗಂಟೆಗಳಿಂದ ಕಾರ್ಗತ್ತಲೆ ಪರಿಸ್ಥಿತಿ ಎದುರಾಗಿದೆ ಎಂದು ಸಹಾಯಕ

(ಮೊದಲ ಪುಟದಿಂದ) ಕಾರ್ಯಪಾಲಕ ಅಭಿಯಂತರ ಪಿ.ಎಸ್. ಸುರೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ : ಜಿಲ್ಲಾ ಕೇಂದ್ರ ಮಡಿಕೇರಿಯ ಸಂಪಿಗೆಕಟ್ಟೆ, ಉದಯಗಿರಿ, ಅರಣ್ಯ ಭವನ, ಸಿದ್ದಾಪುರ ರಸ್ತೆ, ಕಡಗದಾಳು ವ್ಯಾಪ್ತಿ ಹಾಗೂ ಫೀ.ಮಾ. ಕಾರ್ಯಪ್ಪ ಕಾಲೇಜು, ನವೋದಯ ಶಾಲೆ, ಮುಕ್ಕೋಡ್ಲು, ಗಾಳಿಬೀಡು, ಕಾಲೂರು, ಹಮ್ಮಿಯಾಲ ಮಾರ್ಗದ ಅಲ್ಲಲ್ಲಿ ಮರಬಿದ್ದು ಕಂಬಗಳಿಗೆ ಹಾನಿಯಾಗಿ ವಿದ್ಯುತ್ ಸ್ಥಗಿತಗೊಂಡಿದ್ದು, ಸಾಧ್ಯವಾದಷ್ಟು ರಿಪೇರಿ ಕೆಲಸ ಕೈಗೊಳ್ಳಲಾಗಿದೆ ಎಂದು ಸಹಾಯಕ ಅಭಿಯಂತರ ಸಂಪತ್‍ಕುಮಾರ್ ನೋವಿನಿಂದ ನುಡಿದರು.

ಸೋಮವಾರಪೇಟೆ : ಸೋಮವಾರಪೇಟೆ ತಾಲೂಕಿನ ಶಾಂತಪುರ, ಕೊಡ್ಲಿಪೇಟೆ, ಬಾಣಾವರ, ಶಾಂತಳ್ಳಿ, ಹುದುಗೂರು, ಗರ್ವಾಲೆ, ತಾಕೇರಿ, ಮತ್ತಿತರ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದ್ದು, ನೂರಾರು ಕಂಬಗಳೊಂದಿಗೆ ತಂತಿ ತುಂಡಾಗಿ ನಷ್ಟವಾಗಿದೆ. 83 ಸಿಬ್ಬಂದಿಗಳೊಂದಿಗೆ ಅಧಿಕಾರಿಗಳ ತಂಡ ದುರಸ್ಥಿ ಕಾರ್ಯದಲ್ಲಿ ನಿರತರಾಗಿದ್ದೇವೆ ಎಂದು ಅಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ. ಧನಂಜಯ್ ವಿಷಾದದಿಂದ ನುಡಿದರು.

ಮರಬಿದ್ದು ಹಾನಿ

ಗೋಣಿಕೊಪ್ಪ ವರದಿ: ಮಾಯಮುಡಿ ಗ್ರಾಮದ ಮೂಲಕ ಹಾದು ಬರುವ ಪಿರಿಯಾಪಟ್ಟಣ-ಪೊನ್ನಂಪೇಟೆ 66 ಕೆ.ವಿ. ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು ವಿದ್ಯುತ್ ಸ್ಥಗಿತಗೊಂಡಿದೆ. ಇದರಿಂದ ಪೊನ್ನಂಪೇಟೆ ಉಪ ವಿಭಾಗದಲ್ಲಿ ವಿದ್ಯುತ್ ಸರಬರಾಜು ಕಡಿತವಾಗಿದೆ. ಎಇಇ ಅಂಕಯ್ಯ ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ.

ಕರಿಕೆ : ಉರುಳಿ ಬಿದ್ದ ಮರ - ಕೊಟ್ಟಿಗೆ ನೆಲಸಮ

ಗ್ರಾಮದಲ್ಲಿ ವ್ಯಾಪಕವಾಗಿ ಗಾಳಿಮಳೆಯಾಗುತ್ತಿದ್ದು ಪರಿಣಾಮ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಚೆತ್ತುಕಾಯ ಪಚ್ಚೆಪಿಲಾವು ಐತಪ್ಪ ನಾಯ್ಕ ಎಂಬವರ ಕೊಟ್ಟಿಗೆ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ಸಂಪೂರ್ಣವಾಗಿ ನೆಲಸಮಗೊಂಡಿದ್ದು, ಅಲ್ಲದೆ ಗ್ರಾಮದ ವಿಜಯ ಎಂಬವರ ಬಚ್ಚಲು ಮನೆ ಮೇಲೆ ಬರೆ ಕುಸಿದು ಬಿದ್ದಿದೆ. ಗ್ರಾಮದಲ್ಲಿ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆ ಹಾಗೂ ಬಿರುಗಾಳಿಯಿಂದಾಗಿ ನೂರಾರು ಕೃಷಿಕರ ಅಡಿಕೆ, ಬಾಳೆ, ತೆಂಗು ರಬ್ಬರ್,ಕಾಳುಮೆಣಸು ಸೇರಿದಂತೆ ಅಪಾರ ಬೆಳೆ ನಷ್ಟವಾಗಿದ್ದು ಜಿಲ್ಲಾಡಳಿತ ಮಳೆಹಾನಿ ಪರಿಹಾರ ವಿತರಿಸಲು ಕ್ರಮವಹಿಸುವಂತೆ ಕೃಷಿಕರು ಮನವಿ ಮಾಡುತ್ತಿದ್ದು ಮಳೆಯ ರಭಸ ಏರಿಕೆಯಾಗುತ್ತಿದ್ದು, ನದಿ ತೊರೆಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.

ನಾಪೋಕ್ಲು : ಭೂ ಕುಸಿತ

ಕುಂಜಿಲ -ಕಕ್ಕಬ್ಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಯವಕಪಾಡಿ ಗ್ರಾಮದ ಅರೆಯಡ ಪ್ರಸನ್ನ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಭೂ ಕುಸಿತ ಉಂಟಾಗಿ ಅರೆಬಿಕಾ, ರೋಬಸ್ಟಾ ಕಾಫಿ ಗಿಡಗಳು ಸೇರಿದಂತೆ ಕಾಳುಮೆಣಸು ಬಳ್ಳಿಗಳು, ಸಿಲ್ವರ್ ಮರಗಳು ಮಣ್ಣಿನಡಿಯಲ್ಲಿ ಸಿಲುಗಿ ನಷ್ಟ ಸಂಭವಿಸಿದೆ.

ಕಬ್ಬಿಣಕಾಡು ತಾಮರ ರೆಸಾರ್ಟ್‍ಗೆ ಹೋಗುವ ರಸ್ತೆ ಬದಿಯಲ್ಲಿಯೇ ಕುಸಿತ ಉಂಟಾಗಿದ್ದು, ರಸ್ತೆಗೂ ಅಪಾಯ ಉಂಟಾಗುವ ಭೀತಿಯಿದೆ ಎಂದು ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.

ನೆಲ ಕಚ್ಚಿದ ಅಮ್ಮತ್ತಿ ಗುಡ್‍ಶೆಫರ್ಡ್ ಶಾಲೆಯ ತಡೆಗೋಡೆ

ಅಮ್ಮತ್ತಿ: ಕಳೆದೆರಡು ದಿನಗಳಿಂದ ಅಬ್ಬರಿಸುತ್ತಿರುವ ಭಾರಿ ಗಾಳಿ-ಮಳೆಯಿಂದಾಗಿ ಅಮ್ಮತ್ತಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಗುಡ್‍ಶೆಫೆರ್ಡ್ ಪದವಿ ಪೂರ್ವ ಕಾಲೇಜಿನ ತಡೆಗೋಡೆ ಕುಸಿದು ನೆಲಕಚ್ಚಿದ ಘಟನೆ ನಿನ್ನೆ ರಾತ್ರಿ ಜರುಗಿದೆ. ದಿನ ಹತ್ತಾರು ಜನ ಓಡಾಡುವ ಕಾರ್ಮಾಡು ಗ್ರಾಮದ ರಸ್ತೆ ಬದಿಯಲ್ಲಿರುವ ಈ ತಡೆಗೋಡೆಯು ರಾತ್ರಿ ಸಮಯದಲ್ಲಿ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರಸ್ತೆಗುರುಳಿದ ಮರ - ಸಂಚಾರ ಸ್ಥಗಿತ

ಅಮ್ಮತ್ತಿ ಸಿದ್ದಾಪುರ ರಸ್ತೆಯಲ್ಲಿ ಆನಂದಪುರದ ಸಮೀಪ ರಸ್ತೆ ಬದಿಯಲ್ಲಿದ್ದ ಮರವೊಂದು ರಸ್ತೆಗುರುಳಿದ್ದರಿಂದ ಕೆಲಕಾಲ ಸಂಚಾರ ಸ್ಥಗಿತಗೊಂಡಿತು. ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಲಾಯಿತು.

ತುಂಬಿರುವ ಪಯಸ್ವಿನಿ

ಪೆರಾಜೆ : ಕಳೆದ ಎರಡು- ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಗಾಳಿ ಮಳೆಯಿಂದ ಪಯಸ್ವಿನಿ ನದಿಯು ತುಂಬಿ ಹರಿಯುತ್ತಿದೆ. ಅಲ್ಲದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಕಡೆ ಅಡಿಕೆ, ರಬ್ಬರ್, ಗೇರು ಮರಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದೆ.

ಅಪಾಯದ ಮಟ್ಟದಲ್ಲಿ ಕಾವೇರಿ

ಸಿದ್ದಾಪುರದ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸಿದ್ದಾಪುರದ ಕರಡಿಗೋಡು ಭಾಗದ ನದಿತೀರದಲ್ಲಿರುವ ತಗ್ಗುಪ್ರದೇಶದಲ್ಲಿ ಇರುವ 8 ಮನೆಗಳು ಜಲಾವೃತಗೊಂಡಿದ್ದು, ಮತ್ತಷ್ಟ್ಟು ಮನೆಗಳು ಜಲಾವೃತಗೊಳ್ಳುವ ಸಾಧ್ಯತೆ ಇದೆ. ಕಾವೇರಿ ನದಿಯ ನೀರಿನ ಮಟ್ಟ ಅಪಾಯದಲ್ಲಿ ಹರಿಯುತ್ತಿರುವ ಹಿನ್ನೆಲೆಯಲ್ಲಿ; ನದಿತೀರದ ನಿವಾಸಿಗಳಿಗೆ ಆತಂಕ ಮನೆ ಮಾಡಿದೆ. ನೀರಿನ ಪ್ರಮಾಣ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಹರೀಶ್ ಹಾಗೂ ಗ್ರಾಮ ಲೆಕ್ಕಿಗ ಓಮಪ್ಪ ಬಣಕಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ನದಿತೀರದ ನಿವಾಸಿಗಳನ್ನು ಸ್ಥಳಾಂತರಗೊಳಿಸಲು ಕರಡಿಗೋಡು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲು ಸಿದ್ಧತೆಯನ್ನು ಕೈಗೊಂಡಿದ್ದಾರೆ. ಕಾವೇರಿ ನದಿಯಲ್ಲಿ ನೀರು ಏರಿಕೆಯಾಗಿ ಸಿದ್ದಾಪುರದ ಕರಡಿಗೋಡುಗೆ ತೆರಳುವ ರಸ್ತೆ ಜಲಾವೃತಗೊಳ್ಳುವ ಸಾಧ್ಯತೆ ಕಂಡುಬಂದಿದೆ. ಅಲ್ಲದೆ ಕರಡಿ ಗೂಡಿನ ಚಿಕ್ಕನಳ್ಳಿ ಪೈಸಾರಿ ತೆರಳುವ ಕಿರುಸೇತುವೆ ಮುಚ್ಚುವ ಹಂತ ತಲುಪಿದೆ. ಕರಡಿ ಗೋಡಿನ ನದಿತೀರದ ತಗ್ಗು ಪ್ರದೇಶದಲ್ಲಿ ವಾಸ ಮಾಡುತ್ತಿರುವ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.

ಕಳೆದ ಬಾರಿಯ ಪ್ರವಾಹದಿಂದ ತತ್ತರಿಸಿರುವ ನೆಲ್ಯಹುದಿಕೇರಿ ಕೊಂಡಂಗೇರಿ ಭಾಗದ ನದಿತೀರದ ನಿವಾಸಿಗಳು ಭಯಭೀತರಾಗಿದ್ದಾರೆ. ಪರಿಹಾರ ಕೇಂದ್ರಕ್ಕೆ ತೆರಳಲು ಕೂಡ ಭಯ ಪಡುತ್ತಿದ್ದು ಕೊರೊನಾ ವೈರಸ್ ಜಿಲ್ಲೆಯ ವಿವಿಧೆಡೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಪರಿಹಾರ ಕೇಂದ್ರದಲ್ಲಿ ಯಾವ ರೀತಿ ಆಶ್ರಯ ಪಡೆಯುವುದು ಎಂಬ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಗುಹ್ಯ ಗ್ರಾಮದ ದೇವಾಲಯ ರಸ್ತೆಯ ಬಳಿ ಜಲಾವೃತಗೊಂಡಿದೆ. ಅಲ್ಲದೆ ಆ ಭಾಗದ ಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡು ಗದ್ದೆಗಳು ನದಿಯ ರೂಪದಲ್ಲಿ ಗೋಚರಿಸುತ್ತಿದೆ. ರಸ್ತೆಗಳು ಸಂಪರ್ಕಗಳು ಕೂಡ ಕಡಿತಗೊಳ್ಳುತ್ತಿದೆ. ಪ್ರವಾಹದ ನೀರಿನ ಹೊಡೆತಕ್ಕೆ ನದಿತೀರ ಕುಸಿಯುತ್ತಿದೆ. ಇದರಿಂದಾಗಿ ನದಿತೀರದ ನಿವಾಸಿಗಳಿಗೆ ಮನೆಯ ಹಿಂಭಾಗ ಕುಸಿದಿರುವ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಸುತ್ತಿದೆ. ನೆಲ್ಲ್ಯಹುದಿಕೇರಿ ಬೆಟ್ಟದಕಾಡು ಕುಂಬಾರಗುಂಡಿ ಭಾಗದಲ್ಲೂ ಕೂಡ ನೀರಿನ ರಭಸ ಹೆಚ್ಚಾಗಿದೆ. ಕಳೆದ ಬಾರಿ ಈ ಭಾಗದಲ್ಲಿ ನೂರಾರು ಮನೆಗಳು ನೆಲಸಮ ಗೊಂಡಿವೆ. ಅಲ್ಲದೆ ಪ್ರವಾಹದಿಂದ ನೂರಾರು ಮನೆಗಳು ಹಾನಿಯಾಗಿತ್ತು. ಇದೀಗ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದ್ದು, ನದಿ ತೀರದ ನಿವಾಸಿ ಗಳಿಗೆ ಸರಕಾರ ಹಾಗೂ ಜಿಲ್ಲಾಡಳಿತ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮನೆಯ ಮೇಲೆ ಬಿದ್ದ ಮರ

ಗೋಣಿಕೊಪ್ಪಲು : ವಿಪರೀತ ಗಾಳಿ, ಮಳೆಯಿಂದಾಗಿ ಬಾಳೆಲೆ ಹೋಬಳಿಯ ಸುಳುಗೋಡು ಗ್ರಾಮದ ಚಿಂಡಮಾಡ ಗಗನ್ ಅವರ ಮನೆಯ ಮೇಲೆ ಮರವೊಂದು ಉರುಳಿ ಬಿದ್ದಿದ್ದು, ಮನೆಯ ಮೇಲ್ಛಾವಣಿ, ಕಿಟಕಿ, ಬಾಗಿಲು, ಸೇರಿದಂತೆ ಗೋಡೆ ಬಿರುಕುಗೊಂಡಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗುಡ್ಡೆಹೊಸೂರು : ಕಾವೇರಿ ನದಿ ಪ್ರವಾಹ

ಇಲ್ಲಿಗೆ ಸಮೀಪದ ತೆಪ್ಪದಕಂಡಿ ಬಳಿ ಸುಭ್ರಾಯ ಭಟ್ ಅವರಿಗೆ ಸೇರಿದ ಸುಮಾರು ಎರಡು ಎಕರೆ ಪ್ರದೇಶದ ಭತ್ತದ ನಾಟಿ ಗದ್ದೆ ಸಂಪೂರ್ಣ ಕಾವೇರಿ ನದಿ ನೀರಿನಿಂದ ಮುಳುಗಡೆಯಾಗಿದೆ. ಅಲ್ಲದೆ ಭಾರೀ ಮಳೆಗೆ ಬಸವನಹಳ್ಳಿ ಗ್ರಾಮದಲ್ಲಿ ತಗ್ಗು ಪ್ರದೇಶದಲ್ಲಿ ಬೆಳೆದಿದ್ದ ಸುಮಾರು 5 ಎಕರೆ ಪ್ರದೇಶದ ಸುವರ್ಣಗೆಡ್ಡೆ ಕೊಳೆಯುವ ಸ್ಥಿತಿಗೆ ತಲುಪಿದೆ. ಶಿವನ್ ಎಂಬುವವರು ಈ ಕೃಷಿ ಮಾಡಿದ್ದಾರೆ. ಈ ವಿಭಾಗದಲ್ಲಿ ಇನ್ನೂ ಹಲವಾರು ರೈತರ ಬೆಳೆಗಳಿಗೆ ಹಾನಿಯಾದ ವರದಿಯಾಗಿದೆ. ಎರಡು ದಿನಗಳಿಂದ ಭಾರಿ ಗಾಳಿ ಮತ್ತು ಮಳೆ ಸುರಿಯುತ್ತಿದೆ. ನದಿಯಂಚಿನ ಜನರು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಇರಬೇಕಾಗಿದೆ. ಮಳೆ ಹೆಚ್ಚಾದರೆ ಯಾವುದೇ ಕ್ಷಣದಲ್ಲಿ ನದಿಯಂಚಿನ ಮನೆಗಳಿಗೆ ನೀರು ನುಗ್ಗಲಿದೆ.

ಹಾರಂಗಿ ನದಿ ನೀರು ಹೆಚ್ಚಳ

ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ನಾಟಿ ಮಾಡಿದ ಗದ್ದೆಗಳು ಮತ್ತು ಕೆಲ ರೈತರ ಸಸಿ ಮಡಿಗಳು ನೀರಿನಿಂದ ಜಲಾವೃತಗೊಂಡಿವೆ.

ಹಾರಂಗಿ ಅಣೆಕಟ್ಟೆಯಿಂದ ಹೆಚ್ಚುವರಿಯಾಗಿ ನೀರನ್ನು ನದಿಗೆ ಹರಿಸಿದ ಪರಿಣಾಮ ಹುದುಗೂರು ಮದಲಾಪುರ ಕೂಡಿಗೆ ಕೊಪ್ಪಲು ವ್ಯಾಪ್ತಿಯ ನದಿ ದಡೆಯ ಪ್ರದೇಶದ ಹತ್ತಕ್ಕೂ ಹೆಚ್ಚು ರೈತರ ಜಮೀನಿಗೆ ನೀರು ನುಗ್ಗಿ ನಾಟಿ ಮಾಡವ ಸಸಿಗಳು ನೀರಿನಲ್ಲಿ ಮುಳುಗಿವೆ.

ಹಾರಂಗಿ ನೀರಾವರಿ ಇಲಾಖೆಯ

ವತಿಯಿಂದ ಮುನ್ನೆಚ್ಚರಿಕೆಯ ಕ್ರಮ

ಹಾರಂಗಿ ಜಲಾನಯನ ಪ್ರದೇಶದ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯಕ್ಕೆ ಹೆಚ್ಚು ನೀರು ಬರುತ್ತಿರುವ ಸಂದರ್ಭ ವಾಗಿರುವದರಿಂದ ಅಣೆಕಟ್ಟೆಯು ಭರ್ತಿಯಾಗಿರುವ ಸಮಯವಾಗಿ ರುವುದರಿಂದ. ಹೆಚ್ಚುವರಿಯಾಗಿ ಬರುವ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಅದರಂತೆ ಮಂಗಳವಾರ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚು ಕಂಡುಬರುತ್ತಿರುವುದರಿಂದ ನದಿಗೆ ಈಗಾಗಲೇ 10,000 ಸಾವಿರ ಕ್ಯೂಸೆಕ್‍ಗೂ ಹೆಚ್ಚಿನ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ.

ಇಲಾಖೆಯ ಮುನ್ನೆಚ್ಚರಿಕೆಯ ಕ್ರಮವಾಗಿ ಹಾರಂಗಿ ಅಣೆಕಟ್ಟೆಯ ಕೆಳಭಾಗದ ಗ್ರಾಮಗಳಿಗೆ ಮತ್ತು ಹಾರಂಗಿ ಮತ್ತು ಕಾವೇರಿ ಎರಡು ನದಿ ದಂಡೆಯ ತಗ್ಗುಪ್ರದೇಶದಲ್ಲಿರುವ ಗ್ರಾಮಸ್ಧರು ಸಾರ್ವಜನಿಕರು ತಮ್ಮ ಆಸ್ತಿ ಪಾಸ್ಥಿಗಳ, ಜಾನುವಾರುಗಳ ರಕ್ಷಣೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳ ಗಳಿಗೆ ತೆರಳುವಂತೆ ನೀರಾವರಿ ಇಲಾಖೆಯ ವತಿಯಿಂದ ಸೂಚನೆ ನೀಡಲಾಗಿದೆ. ಈಗಾಗಲೇ ಜಲಾಶಯಕ್ಕೆ ಹೆಚ್ಚು ನೀರು ಬರುವ ಸಂಭವವಿರುವುದರಿಂದ ಮುನ್ನೆಚ್ಚರಿಕೆಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ ಆಟೋದಲ್ಲಿ ಮೈಕ್ ಕಟ್ಟಿ ಕೂಡಿಗೆ ಹುದುಗೂರು ಕಣಿವೆ ಹೆಬ್ಬಾಲೆ ಭಾಗಗಳಲ್ಲಿ ಪ್ರಚಾರಮಾಡಲಾಗುತ್ತಿದೆ.

ತಗ್ಗುಪ್ರದೇಶದ ಸಾರ್ವಜನಿಕರು ಹೆಚ್ಚಿನ ನಿಗಾ ವಹಿಸಬೇಕಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

30ಕ್ಕೂ ಹೆಚ್ಚು ಕಡೆ ಮರ ತೆರವು

ಗೋಣಿಕೊಪ್ಪ ವರದಿ, ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಉರುಳಿದ ಸಾಕಷ್ಟು ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಕ್ಷಿಪ್ರ ಕಾರ್ಯಾಚರಣೆ ನಡೆಸಿತು. ಸುಮಾರು 30ಕ್ಕೂ ಹೆಚ್ಚು ಕಡೆ ಮರ ತೆರವುಗೊಳಿಸಲಾಯಿತು

ಕೋತೂರು ಗ್ರಾಮದಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದ ನೊಗ ಮರ, ಹೇರ್ಮಾಡು ರಸ್ತೆಯಲ್ಲಿ ಕರ್ಪಚೆಕ್ಕೆ ಮರ, ನಾಲ್ಕೇರಿ ಗ್ರಾಮದಲ್ಲಿ ನಂದಿ ಮರ, ಮಂಚಳ್ಳಿಯಲ್ಲಿ 2 ನಂದಿ, ನೊಗ, ದೂಪ, ಕಾಯಿಮಾನಿಯಲ್ಲಿ ನಂದಿ, 4 ಸಿಲ್ವರ್, ಮಂಚಳ್ಳಿಯಲ್ಲಿ 1 ಮರ, ಪೆಗ್ಗಳ, ಕೆದಮುಳ್ಳೂರು, ಮಾಕುಟ್ಟ, ಕುಂದ, ಬಾಳೆಲೆ, ಗೋಣಿಕೊಪ್ಪ, ತಿತಿಮತಿ ಭಾಗದಲ್ಲಿ ತೆರವುಗೊಳಿಸಲಾಯಿತು. ಎಲ್ಲಾ ಕಡೆಗಳಲ್ಲೂ ನಮ್ಮ ತಂಡ ಮರ ತೆರವು ಕಾರ್ಯಾಚರಣೆ ಮುಂದುವರಿಸಿದೆ ಎಂದು ಡಿಸಿಎಫ್ ಕೋಣೇರೀರ ರೋಶ್ನಿ ಮಾಹಿತಿ ನೀಡಿದ್ದಾರೆ. ಹೈಸೊಡ್ಲೂರು ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದ ಮರವನ್ನು ಸ್ಥಳೀಯ ಗ್ರಾಮಸ್ಥರು ತೆರವುಗೊಳಿಸಿ ದರು. ಬಿಜೆಪಿ ಕೃಷಿಮೋರ್ಚ ತಾಲೂಕು ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ ವಾಹನವಿಲ್ಲದೆ ತೊಂದರೆಯಲ್ಲಿದ್ದ ಜನರನ್ನು ತಮ್ಮ ವಾಹನದಲ್ಲಿ ಹುದಿಕೇರಿಗೆ ಬಿಟ್ಟು ಸಹಕರಿಸಿದರು.

ರಸ್ತೆಗೆ ಬಿದ್ದ ಮರ ತೆರವು

ಶನಿವಾರಸಂತೆ ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಬೆಳಾರಳ್ಳಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಗಾಳಿ, ಮಳೆಯಿಂದ ಭಾರೀ ಗಾತ್ರದ ಮರವೊಂದು ರಸ್ತೆಗುರುಳಿ ಸಂಚಾರಕ್ಕೆ ಅಡಚಣೆಯಾಗಿತ್ತು. ವಿದ್ಯುತ್ ತಂತಿಗಳು ಹಾನಿಗೊಂಡವು. ಠಾಣಾಧಿಕಾರಿ ದೇವರಾಜ್, ಸಹಾಯಕ ಠಾಣಾಧಿಕಾರಿ ಗೋವಿದ್, ಸಿಬ್ಬಂದಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು. ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಕೆ. ಕೊಟ್ರೇಶ್, ಸಿಬ್ಬಂದಿ ಹಾಗೂ ವಿದ್ಯುತ್ ಇಲಾಖೆ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದರು.

ಅಲ್ಲದೆ, ಹಾರೆಹೊಸೂರು ಗ್ರಾಮ, ಅವರೆದಾಳು ಗ್ರಾಮದ ರಸ್ತೆ ಬದಿಯಲ್ಲಿ ಮರಗಳು ಗಾಳಿ ಮಳೆಗೆ ಬಿದ್ದಿದ್ದು, ಅರಣ್ಯಾಧಿಕಾರಿ ಕೊಟ್ರೇಶ್ ಹಾಗೂ ಸಿಬ್ಬಂದಿ ಬಿದ್ದ ಮರಗಳನ್ನು ತುಂಡರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಗೋಣಿಕೊಪ್ಪ

ಗೋಣಿಕೊಪ್ಪ : ಬಿಳೂರು ಗ್ರಾಮದ ಚಿಯಕ್’ಪೂವಂಡ ಉತ್ತಯ್ಯ ಎಂಬವರ ಮನೆಯ ಹಿಂಭಾಗಕ್ಕೆ ಮರ ಬಿದ್ದು ಹಾನಿಯಾಗಿದೆ.

ಚಿತ್ರ ವರದಿ : ಕೆ.ಡಿ. ಸುನಿಲ್, ನಾಗರಾಜಶೆಟ್ಟಿ, ಗಣೇಶ್, ರಾಜುರೈ, ವಾಸು, ಸುದ್ದಿಪುತ್ರ, ಲಕ್ಷ್ಮೀಶ್, ವರ್ಗಿಸ್, ನರೇಶ್, ದುಗ್ಗಳ, ಪ್ರಭಾಕರ್, ನೌಫಲ್, ಕಿರಣ್, ಸುಧೀರ್, ಮೂರ್ತಿ, ಕಿಶೋರ್‍ಶೆಟ್ಟಿ.

ಜಿಲ್ಲಾಡಳಿತದಿಂದ ಕ್ರಮ

ಶ್ರೀಮಂಗಲ ಹೋಬಳಿ ಹರಿಹರ ಗ್ರಾಮದ ನವೀನ್ ಎಂಬವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು, ಮೇಲ್ಛಾವಣಿಗೆ ಹಾಕಲಾದ ಶೀಟ್‍ಗಳು ಹಾನಿಯಾಗಿದೆ. ಚೆಸ್ಕಾಂ ಇಲಾಖಾ ಪರಿಹಾರ ತಂಡ ಭೇಟಿ ನೀಡಿ ಸೂಕ್ತ ಕ್ರಮ ವಹಿಸಿದೆ. ಬಿಟ್ಟಂಗಾಲ-ಬಿ.ಶೆಟ್ಟಿಗೇರಿ ರಸ್ತೆಯಲ್ಲಿ ಮರ ಬಿದ್ದಿದ್ದು, ತೆರವುಗೊಳಿಸಲಾಗಿದೆ. ಸೋಮವಾರಪೇಟೆ ತಾಲೂಕು ಮಕ್ಕಂದೂರು (ಉದಯಗಿರಿ) ಬಳಿ ಮರ ಬಿದ್ದು, ಮಡಿಕೇರಿ-ಸೋಮವಾರಪೇಟೆ ರಸ್ತೆ ಬಂದ್ ಆಗಿದ್ದು, ತೆರವುಗೊಳಿಸಲಾಗಿದೆ. ಕ್ಲಬ್ ಮಹೀಂದ್ರ ರಸ್ತೆಯಲ್ಲಿ ಮರ ಬಿದ್ದಿದ್ದು, ತೆರವುಗೊಳಿಸಲಾಗಿದೆ.

(ಮೊದಲ ಪುಟದಿಂದ) ಮಡಿಕೇರಿಯ ಮಂಗಳಾದೇವಿ ನಗರದಲ್ಲಿ ತಡರಾತ್ರಿ ಬರೆ ಜರಿದಿದ್ದು, ಪರಿಹಾರ ತಂಡ ಧಾವಿಸಿ ಪರಿಶೀಲನೆ ನಡೆದಿದೆ. ಯಾವುದೇ ಹಾನಿ ಸಂಭವಿಸಿಲ್ಲ. ಈ ಭಾಗದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಯತ್ನಿಸಲಾಗಿ, ನಿವಾಸಿಗಳು ಒಪ್ಪದ್ದರಿಂದ, ರಾತ್ರಿ ಬೀಟ್ ಪೆÇಲೀಸರಿಗೆ ಆಗಾಗ್ಗೆ ತೆರಳಿ ಪರಿಸ್ಥಿತಿ ಅವಲೋಕಿಸಲು ತಿಳಿಸಲಾಗಿದೆ.

ಕುಶಾಲನಗರದ ಕುವೆಂಪು ಬಡಾವಣೆಯಲ್ಲಿ ಪ್ರವಾಹ ಉಂಟಾಗುವ ಸಂಭವವಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳಲು ಪಂಚಾಯತಿ ವತಿಯಿಂದ ಮಾಹಿತಿ ನೀಡಲಾಗಿದೆ ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಸದರಿ ಸ್ಥಳಕ್ಕೆ ರಿವರ್ ರಾಫ್ಟಿಂಗ್ ತಂಡವನ್ನು ನಿಯೋಜಿಸಲಾಗಿದೆ.

ವೀರಾಜಪೇಟೆ ತಾಲೂಕು ಗೋಣಿಕೊಪ್ಪದಲ್ಲಿ ಸಹ ಭಾರೀ ಮಳೆಯಿಂದ ಪ್ರವಾಹ ಉಂಟಾಗುವ ಸಂಭವವಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಿವರ್ ರಾಫ್ಟಿಂಗ್ ತಂಡ ಮತ್ತು ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ. ಮಡಿಕೇರಿ ನಗರದ ಮೈತ್ರಿಹಾಲ್ ನ ಶೀಟ್ ಗಳು ಹಾರಿ ಹೋಗಿದ್ದು, ರಿಪೇರಿಗೆ ಕ್ರಮ ವಹಿಸಲಾಗಿದೆ.

ಪ್ರಕೃತಿ ವಿಕೋಪದ ಮಾಹಿತಿ ಬಂದೊಡನೆ ಜಿಲ್ಲಾಡಳಿತದ ಪರಿಹಾರ ತಂಡವು ಕಾರ್ಯೋನ್ಮುಖವಾಗುತ್ತಿದ್ದು, ಸ್ಥಳೀಯ ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ, ಸ್ಥಳೀಯ ಜನರು ಮತ್ತು ಸ್ವಯಂ ಸೇವಕರ ನೆರವಿನಿಂದ ಪರಿಹಾರ ಕಾರ್ಯ ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುವ ಅನಾನುಕೂಲಗಳನ್ನು ಎದುರಿಸಲು ಜಿಲ್ಲಾಡಳಿತವು ಸಜ್ಜಾಗಿದ್ದು, ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಆದಾಗ್ಯೂ ಗುಡ್ಡಗಾಡು ಮತ್ತು ಬೆಟ್?