ಮಡಿಕೇರಿ, ಆ. 4: ಮಾನಸಿಕವಾಗಿ ಅಸ್ವಸ್ಥರಾಗಿದ್ದು ಶ್ರೀಮಂಗಲದಲ್ಲಿದ್ದ ವ್ಯಕ್ತಿಯೋರ್ವರು ನಗರದ ಕೋವಿಡ್ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಶೇಷಚೇತನ ವಿಭಾಗದ ಅಧಿಕಾರಿಗಳ ಮೂಲಕ ದಾಖಲಿಸಲ್ಪಟ್ಟಿದ್ದು ಅವರು ಅಲ್ಲಿಂದ ನಾಪತ್ತೆಯಾಗಿರುವ ಕುರಿತು ಪೊಲೀಸ್ ದೂರು ದಾಖಲಾಗಿದೆ.
ಸಾರ್ವಜನಿಕರ ದೂರಿನಂತೆ ಎ.ಎಸ್. ಪೆಮ್ಮಯ್ಯ ಹೆಸರಿನ 56 ವರ್ಷದ ವ್ಯಕ್ತಿಯನ್ನು ಜು. 27 ರಂದು ಇಲಾಖಾ ಸಿಬ್ಬಂದಿಗಳು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಆದರೆ ಪರೀಕ್ಷಾ ವರದಿ ಬರುವ ಮುಂಚಿತವಾಗಿಯೇ ಅಂದರೆ ಮರುದಿನ (ತಾ. 28 ರಂದು) ಇವರು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ವೈದ್ಯಕೀಯ ಅಧೀಕ್ಷಕರು ವಿಶೇಷಚೇತನ ಇಲಾಖೆಗೆ ಮಾಹಿತಿ ನೀಡಿದ್ದು, ಇದರಂತೆ ಇಲಾಖಾ ಸಿಬ್ಬಂದಿಗಳು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ನಗರ ಠಾಣೆ (ದೂ. 229333) ಅಥವಾ ಜಿಲ್ಲಾ ಪೊಲೀಸ್ ಇಲಾಖೆಗೆ (ದೂ. 229000) ತಿಳಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
ಆಸ್ಪತ್ರೆಯ ಮೂಲಗಳ ಪ್ರಕಾರ ಇವರ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದಾಗಿ ತಿಳಿದುಬಂದಿದೆ.