ಮಡಿಕೇರಿ, ಆ. 5: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮರಗೋಡುವಿನ ಪರಂಬು ಪೈಸಾರಿಯಲ್ಲಿ ವೃದ್ಧೆ ಮಹಿಳೆ ಪಾರ್ವತಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿರುಸಿನ ತನಿಖೆ ನಡೆಸುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆ ಮಹಿಳೆಯನ್ನು ಕೊಲೈಗೈದು ದುಷ್ಕರ್ಮಿಗಳು ಚಿನ್ನಾಭರಣವನ್ನು ಅಪಹರಿಸಿರುವ ಘಟನೆ ನಡೆದಿದ್ದು, ಈ ಬಗ್ಗೆ ಮೃತರ ಸಂಬಂಧಿ ಆತ್ಮಾನಂದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ತನಿಖೆ ಮುಂದುವರಿಸಿರುವ ಪೊಲೀಸರು ಕೆಲವೊಂದು ಮಾಹಿತಿಯನ್ನು ಕಲೆ ಹಾಕಿರುವುದಾಗಿ ಹೇಳಲಾಗಿದೆ.
ಕೆಲವು ಮೂಲಗಳ ಪ್ರಕಾರ ಈಗಾಗಲೇ ಒಂದಿಬ್ಬರು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ. ಆದರೆ ತನಿಖೆ ಪ್ರಗತಿಯಲ್ಲಿದೆ ಎಂದು ಮಾತ್ರ ಪೊಲೀಸರು ತಿಳಿಸಿದ್ದು, ಖಚಿತ ಮಾಹಿತಿ ಇನ್ನಷ್ಟೆ ಲಭಿಸಬೇಕಿದೆ.