ನಾನು 1992 ಡಿಸೆಂಬರ್ 6 ರಂದು ನಡೆದ ಆ ಕರಸೇವೆಯಲ್ಲಿ ಭಾಗವಹಿಸಿದ್ದೆ. ಕೊಡಗಿನಿಂದ ಸುಮಾರು ಜನರ ತಂಡ ಬೆಂಗಳೂರಿಗೆ ತೆರಳಿ ಅಲ್ಲಿಂದ ರೈಲಿನ ಮೂಲಕ ಅಯೋದ್ಯೆಗೆ 3 ದಿನಗಳ ನಂತರ ತಲುಪಿದ್ದೆವು. ಅಲ್ಲಿ ದೊಡ್ಡ-ದೊಡ್ಡ ಟೆಂಟ್‍ಗಳು, ಅದರ ಒಳಗೆ ಹುಲ್ಲನ್ನು ಹಾಸಿದ್ದು ನೆಲದ ಮೇಲೆ ಕೊರೆಯುವ ಚಳಿಯ ನಡುವೆ ಸುಮಾರು 7 ದಿನಗಳನ್ನು ಕಳೆದಿದ್ದ ರೋಚಕ ಅನುಭವವೇ ಬೇರೆ. ಅಯೋಧ್ಯೆಯಲ್ಲಿ ಇಡೀ ದೇಶದಿಂದ ಲಕ್ಷ-ಲಕ್ಷ ಜನ ಸೇರಿದ್ದರು. ನಮ್ಮ ಕರ್ನಾಟಕದ ತಂಡ ಒಂದು ಬದಿಯಲ್ಲಿದ್ದು, ಮಂಗಳೂರಿನಿಂದ ಬಂದ ಹಿರಿಯರೊಬ್ಬರು ಅಯೋಧ್ಯೆಯ ಬಗ್ಗೆ ಒಂದು ಸುಂದರ ಗೀತೆಯನ್ನು ಬರೆದಿದ್ದು ಅದನ್ನು ಊಟದ ಮೊದಲು ಎಲ್ಲರೂ ಒಟ್ಟಿಗೆ ಹೇಳುತ್ತಿದ್ದೆವು. ಅಲ್ಲಿ ಇದ್ದಂತಹ 7 ದಿನಗಳಲ್ಲಿ ಅಯೋಧ್ಯೆಯ ಮುಖ್ಯ ಕಾರ್ಯಕರ್ತರ ಆದೇಶದಂತೆ ಕೆಲವು ಕಾರ್ಯಕ್ರಮಗಳನ್ನು ಸೂಚಿಸಲಾಯಿತು. ಪ್ರತಿ ದಿನ ಒಂದೊಂದು ಕಾರ್ಯಕ್ರಮ ಅಯೋಧ್ಯೆ ನಗರದಲ್ಲಿ ಸಂಕೀರ್ತನ ಭಜನೆ ಮಾಡಲಾಯಿತು. ಮತ್ತೊಂದು ದಿನ ಪೊಲೀಸರು ಲಾಠಿ ಚಾರ್ಜ್ ಮಾಡಿದಾಗ ನಾವು ನಮ್ಮನ್ನು ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು, ಅದಕ್ಕಾಗಿ ದಪ್ಪನೆಯ ಬಟ್ಟೆ ಧರಿಸಿ ತಲೆಗೆ ಬಟ್ಟೆಯ ಪೇಟಾಗಳನ್ನು ಸುತ್ತಿಕೊಂಡು ನಾವು ಯಾವ ರೀತಿ ಪೊಲೀಸರ ಏಟಿನಿಂದ ರಕ್ಷಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದರು. ಅದೇ ರೀತಿ ಬಟ್ಟೆಯ ಪೇಟಾಗಳನ್ನು ಹಾಕಿಕೊಂಡು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಮತ್ತೊಂದು ದಿನ ಅಯೋಧ್ಯೆಯ ಎಲ್ಲ ದೇವಾಲಯಗಳಿಗೆ ಪ್ರವೇಶ ಮಾಡಿ, ದೇವರ ದರ್ಶನವನ್ನು ಪಡೆಯುವ ಅವಕಾಶವೂ ಸಿಕ್ಕಿತ್ತು.

ಡಿಸೆಂಬರ್ 6-12-1992 ಬಂದೆ ಬಿಟ್ಟಿತ್ತು. ಅದಕ್ಕೆ ಒಂದು ದಿನ ಮೊದಲು ಅಂದರೆ ಡಿಸೆಂಬರ್ 5 ರಂದು ನಾವು ತಂಗಿದ್ದ ಟೆಂಟ್‍ಗೆ ಬಂದ ಅಯೋಧ್ಯೆಯ ಪ್ರಮುಖ ಕಾರ್ಯಕರ್ತರು ಮಡಿಕೇರಿ ನಗರದ ಸಂಘದ ಕಾರ್ಯಕರ್ತರನ್ನು ಸಂಪರ್ಕಿಸಿ ಡಿಸೆಂಬರ್ 6 ರಂದು ನಡೆಸುವ ಕಾರ್ಯಾಚರಣೆಯ ಬಗ್ಗೆ ತಿಳಿಸಿದರು. ಕರಸೇವೆಯಲ್ಲಿ ಭಾಗವಹಿಸಲು ಕೆಲವು ಕಾರ್ಯಕರ್ತರನ್ನು ಕಳುಹಿಸಿ ಕೊಡಲು ತಿಳಿಸಿದಾಗ ಆ ಕರಸೇವೆಯಲ್ಲಿ ಭಾಗವಹಿಸಲು 5 ಜನರ ಹೆಸರನ್ನು ಕೊಡಲಾಯಿತು. ಈ 5 ಜನರನ್ನು ಬೆಳಿಗ್ಗೆ 5.30 ಗಂಟೆಗೆ ಒಂದು ನಿರ್ದಿಷ್ಟ ಸ್ಥಳಕ್ಕೆ ಬರಲು ಸೂಚಿಸಿದರು. ಅದರಂತೆ ನಾವು ಅವರು ಸೂಚಿಸಿದ ಸ್ಥಳಕ್ಕೆ ತೆರಳಿದೆವು. ಅಯೋಧ್ಯೆಯ ಮುಖ್ಯ ಕಾರ್ಯಕರ್ತರ ಸೂಚನೆ ಮೇರೆಗೆ ಕೆಲವು ಕಾರ್ಯ ತಂತ್ರದ ಬಗ್ಗೆ ಸುಮಾರು ಬೆಳಿಗ್ಗೆ 8 ಗಂಟೆಯವರೆಗೂ ಏನೇನು ಮಾಡಬೇಕೆಂದು ತಿಳಿಸಲಾಯಿತು. ಈ ಒಂದು ಕಾರ್ಯಾಚರಣೆಯ ತಂಡದಲ್ಲಿ ಸುಮಾರು 350 ಜನ ಕಾರ್ಯಕರ್ತರಿದ್ದರು. 8.30ಗಂಟೆಯ ನಂತರ 2 ಚಪಾತಿ ಮತ್ತು ಬೆಲ್ಲವನ್ನು ಕೊಡಲಾಯಿತು. ಆನಂತರ 9.30 ಗಂಟೆಗೆ ಮತ್ತೆ ಸೇರಲು ಸೂಚನೆಯನ್ನು ಕೊಡಲಾಯಿತು. ಸರಿಯಾಗಿ 9.30 ಗಂಟೆಗೆ ಅಲ್ಲಿದ್ದ ಕಟ್ಟಡದ ಹಿಂಬದಿಯಲ್ಲಿ 350 ಜನ ಕಾರ್ಯಕರ್ತರನ್ನು ಸರತಿ ಸಾಲಿನಲ್ಲಿ ನಿಲ್ಲಿಸಲಾಯಿತು. ಎಲ್ಲ ಕಾರ್ಯಕರ್ತರಿಗೆ ತಲೆಗೆ ಕಟ್ಟಲು ಹಳದಿ ಬಣ್ಣದ ಪಟ್ಟಿಯನ್ನು ವಿತರಿಸಿ ಎಲ್ಲರೂ ಆ ಪಟ್ಟಿಯನ್ನು ತಲೆಗೆ ಕಟ್ಟಿ ಸೂಚನೆ ಬರುವವರೆಗೂ ಕಾಯುತ್ತ ಇದ್ದೆವು. ಸರಿಯಾಗಿ 10:30 ಗಂಟೆಗೆ ಸೂಚನೆಯನ್ವಯ ಸುಮಾರು 6 ಅಡಿ ಎತ್ತರ ಕಾಂಪೌಂಡ್ ಹತ್ತಿ ಅದರ ಒಳಗೆ ಪ್ರವೇಶಿಸಿದೆವು. ಮೊದಲಿಗೆ ಪೊಲೀಸ್‍ನವರು ಲಾಠಿ ಬೀಸಿದರು. ಒಮ್ಮೆಲೆ ನಮ್ಮ ಅರ್ಧ ಕಾರ್ಯಕರ್ತರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಎಲ್ಲರಿಗೆ ಒಂದು ರೀತಿ ಆಶ್ಚರ್ಯವಾಗಬಹುದು. ಅಷ್ಟು ದೊಡ್ಡ ಕಟ್ಟಡ ಕೆಡವಿದಾಗ ಒಂದು ಕೂಡ ಸಾವು-ನೋವು ಆಗಲಿಲ್ಲ. ನಾವು ಬೇರೆ ಯಾವುದೇ ಆಯುಧಗಳನ್ನು ಬಳಸಿರಲಿಲ್ಲ. ಕಾಂಪೌಂಡಿನ ಒಳ ಭಾಗದಲ್ಲಿ ಸುಮಾರು 2 ಇಂಚಿನ 20 ಅಡಿಯ ಕಬ್ಬಿಣದ ಪೈಪ್‍ಗಳನ್ನು ಕಟ್ಟಲಾಗಿತ್ತು. ಒಟ್ಟಿಗೆ ಆ ಗೋಡೆಗೆ ಪ್ರಹಾರ ಮಾಡುತ್ತಿದ್ದಂತೆ ಸುಮಾರು 12:45 ಗಂಟೆಗೆ ಆ ಕಟ್ಟಡ ಕೆಳಗೆ ಬಿತ್ತು. ಎಲ್ಲ ಕಾರ್ಯಕರ್ತರು ಒಟ್ಟಿಗೆ ಓಕ್ಕೊರಲಿನಿಂದ ಏಕಕಾಲದಲ್ಲಿ ಕಾರ್ಯಾಚರಣೆ ಮಾಡಿದ್ದರಿಂದ ಯಾವುದೇ ಸಾವು-ನೋವುಗಳು ಆಗಲಿಲ್ಲ. ಅದೇ ಜಾಗದಲ್ಲಿ ಶ್ರೀ ರಾಮನ ಭವ್ಯ ಮಂದಿರಕ್ಕೆ ಇಂದು ಶಂಕುಸ್ಥಾಪನೆಯಾಗುತ್ತಿದೆ.

- ಮನು ಮಂಜುನಾಥ್,

ಮಡಿಕೇರಿ ನಗರ ಬಿ.ಜೆ.ಪಿ. ಅಧ್ಯಕ್ಷ.